More

    ಕರೊನಾ ಸೇನಾನಿಗಳಿಂದ ಶ್ಲಾಘನೀಯ ಸೇವೆ

    ಗದಗ: ಕರೊನಾ ಸಂಕಷ್ಟದ ಸಮಯದಲ್ಲಿ ಗದಗ ವೈದ್ಯಕೀಯ ಮಹಾವಿದ್ಯಾಲಯದ (ಜಿಮ್್ಸ) ವೈದ್ಯರು ಸೇರಿ ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕರೊನಾ ಸೇನಾನಿಗಳ ಸೇವೆ ಅವಿಸ್ಮರಣೀಯ.

    ಕಳೆದ ಒಂದೂವರೆ ತಿಂಗಳಿಂದ ಮನೆ, ಕುಟುಂಬದಿಂದ ದೂರವಿದ್ದು ಕರ್ತವ್ಯ ಮೆರೆಯುತ್ತಿರುವ ಕರೊನಾ ಸೇನಾನಿಗಳ ಧೈರ್ಯ ಮತ್ತು ಕಾರ್ಯಕ್ಷಮತೆ ಎಷ್ಟೇ ಪ್ರಶಂಸಿಸಿದರೂ ಸಾಲದು. ಜಿಲ್ಲೆಯಲ್ಲಿ ಪತ್ತೆಯಾಗಿರುವ 8 ಕರೊನಾ ಸೋಂಕಿತರ ಪೈಕಿ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 80 ವರ್ಷದ ಸೋಂಕಿತೆ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಸೋಂಕು ಇರುವುದು ಮಂಗಳವಾರ ಪತ್ತೆಯಾಗಿದೆ. ಅವರನ್ನು ಗುಣಮುಖರನ್ನಾಗಿಸಿ ಸುರಕ್ಷಿತವಾಗಿ ಮನೆಗೆ ಕಳಿಸಿಕೊಡಲು ವೈದ್ಯರು ಅವಿರತ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ ಸಫಲರಾಗುತ್ತೇವೆ ಎಂಬ ನಂಬಿಕೆ ಮತ್ತು ವಿಶ್ವಾಸ ಜಿಲ್ಲೆಯ ಕರೊನಾ ಸೇನಾನಿಗಳಲ್ಲಿದೆ.

    ನಗರದ 100 ಹಾಸಿಗೆಯುಳ್ಳ ನೂತನ ಆಯುಷ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಮ್ಸ್​ನ 20-25 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ 6 ಗಂಟೆಯಂತೆ ನಾಲ್ವರು ತಜ್ಞ ವೈದ್ಯರು ಹಾಗೂ ಇತರ ಸಿಬ್ಬಂದಿ ಒಳಗೊಂಡ ತಂಡ ಕೋವಿಡ್ 19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಈ ತಂಡ 7 ದಿನ ಕೆಲಸ ಮಾಡುತ್ತದೆ. ನಂತರ 14 ದಿನಗಳ ಕಾಲ ಈ ತಂಡದವರು ಕ್ವಾರಂಟೈನ್​ನಲ್ಲಿ ಇರುತ್ತಾರೆ. 7 ದಿನಗಳ ನಂತರ ಮತ್ತೊಂದು ತಂಡವನ್ನು ಕೋವಿಡ್ ಆಸ್ಪತ್ರೆಗೆ ನಿಯೋಜಿಸಲಾಗುತ್ತಿದೆ. ಹೀಗೆ ಕಳೆದ ಒಂದೂವರೆ ತಿಂಗಳಿಂದ ವೈದ್ಯರ ತಂಡ ಸರದಿ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದೆ.

    ಜಿಮ್್ಸ ನಿರ್ದೇಶಕ ಡಾ. ಪಿ.ಎಸ್.ಭೂಸರಡ್ಡಿ, ಡಾ. ಎಸ್.ಜಿ. ಪಲ್ಲೇದ, ಡಾ. ಮಹೇಶ ಬರಗುಂಡಿ, ಡಾ. ಜಗದೀಶ ಗಡ್ಡೆಪ್ಪನವರ, ಡಾ. ಸಂಗಮೇಶ ಅಸೂಟಿ, ಡಾ.ಆರ್.ಟಿ. ಪಾಟೀಲ, ಡಾ. ಜಯರಾಜ ಪಾಟೀಲ ಸೇರಿ ಅನೇಕ ವೈದ್ಯರು ಕೋವಿಡ್ 19 ವಿರುದ್ಧ ಹೋರಾಡುತ್ತಿದ್ದಾರೆ.

    ವಾರ್ ರೂಂ: ಜಿಮ್ಸ್​ನಲ್ಲಿ ಕೋವಿಡ್ ವಾರ್ ರೂಂ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಕೋವಿಡ್​ಗೆ ಸಂಬಂಧಿಸಿದ ಪ್ರತಿ ವಿಷಯವನ್ನೂ ದಾಖಲಿಸಲಾಗುತ್ತಿದೆ. ವಾರ್ ರೂಂಗೆ ಸಹಾಯವಾಣಿ ನಂಬರ್ (ಮೊ. 9019764729) ಸಹ ಇದ್ದು, ಕರೆ ಮಾಡಿ ಕೋವಿಡ್ 19 ಕುರಿತು ಮಾಹಿತಿ ಪಡೆಯಬಹುದಾಗಿದೆ.

    ಕೋವಿಡ್ ಪ್ರಯೋಗಾಲಯ ಆರಂಭ: ಕೋವಿಡ್ 19 ಪ್ರಕರಣಕ್ಕೆ ಸಂಬಂಧಿಸಿದಂತೆ ರೋಗಿಯಿಂದ ತೆಗೆದುಕೊಂಡ ಗಂಟಲ ದ್ರವ ಮಾದರಿಯನ್ನು ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗೆ ಕಳಿಸಬೇಕಿತ್ತು. ಹೀಗಾಗಿ ವರದಿ ಬರುವುದು ಎರಡ್ಮೂರು ದಿನವಾಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಜಿಮ್್ಸ ಆಸ್ಪತ್ರೆಯಲ್ಲಿಯೇ ಏ. 22ರಿಂದ ಕೋವಿಡ್ 19 ಪ್ರಯೋಗಾಲಯ ಆರಂಭಿಸಿತು. ಸದ್ಯ ಇಲ್ಲಿ ಒಂದು ಸಲಕ್ಕೆ ನಾಲ್ಕು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬಹುದಾಗಿದ್ದು, ವರದಿ ಬರಲು ನಾಲ್ಕು ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಅಂದರೆ ದಿನಕ್ಕೆ 48ರಿಂದ 50 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಬಹುದು.

    ಮತ್ತೊಂದು ಪ್ರಯೋಗಾಲಯ ಇಂದಿನಿಂದ ಆರಂಭ: ಜಿಮ್್ಸ ಈಗಾಗಲೇ ಟ್ರೂನಾಟ್ ಮಷೀನ್ ಮೂಲಕ ಕೋವಿಡ್ 19 ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ದಿನಕ್ಕೆ ಕೇವಲ 50 ಸ್ಯಾಂಪಲ್​ಗಳ ಪರೀಕ್ಷೆ ಮಾಡಬಹುದು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕಾದ ಪ್ರಸಂಗ ಎದುರಾದರೆ ಹೇಗೆಂದು ಯೋಚಿಸಿ 1 ಕೋಟಿ ರೂ. ಮೊತ್ತದಲ್ಲಿ ಆರ್​ಟಿಪಿಸಿಇಆರ್ ಯಂತ್ರ ಅಳವಡಿಸಲಾಗುತ್ತಿದ್ದು, ಇದು ಮೇ 14ರಿಂದ ಕಾರ್ಯಾರಂಭ ಮಾಡಲಿದೆ. ಹೊಸ ಪ್ರಯೋಗಾಲಯ ಮೂಲಕ ಒಂದೇ ಸಲಕ್ಕೆ 60 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಬಹುದು. ಅಂದರೆ ದಿನಕ್ಕೆ ಅಂದಾಜು 300 ರೋಗಿಗಳ ಸ್ಯಾಂಪಲ್ ಪರೀಕ್ಷೆ ಮಾಡಬಹುದು ಎಂದು ಜಿಮ್್ಸ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಮಹೇಶ ಬರಗುಂಡಿ ವಿವರಿಸಿದರು.

    ಕೋವಿಡ್ ಆಸ್ಪತ್ರೆ: ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಇಲ್ಲಿವರೆಗೆ 3833 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. 254 ಜನರನ್ನು ಐಸೋಲೇಷನ್ ವಾರ್ಡ್​ನಲ್ಲಿ ಇರಿಸಲಾಗಿದೆ. ನಾಲ್ವರು ರೋಗಿಗಳು ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

    ಕೋವಿಡ್ 19 ಆಸ್ಪತ್ರೆಗೆ ನಿಯೋಜಿಸಿರುವ ವೈದ್ಯರು, ನರ್ಸ್ ಹಾಗೂ ಇತರ ಸಿಬ್ಬಂದಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ಜಿಲ್ಲಾಡಳಿತದ ಕಾರ್ಯಕ್ಕೆ ಹೆಗಲುಕೊಟ್ಟು ನಿಂತಿದ್ದಾರೆ. ಹೊಸದಾಗಿ ಮದುವೆ ಆದವರಿದ್ದಾರೆ. ಮದುವೆ ಆಗಬೇಕೆಂದು ದಿನಾಂಕ ನಿಗದಿ ಮಾಡಿಕೊಂಡವರು ಮದುವೆ ಮುಂದೂಡಿದವರಿದ್ದಾರೆ. ಅಲ್ಲದೆ, ಕೋವಿಡ್ 19 ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುವ ಜಿಲ್ಲೆಯ ಇಬ್ಬರು ವೈದ್ಯರು ತಂದೆಯಾಗಿದ್ದು, ತಿಂಗಳು ಕಳೆದರೂ ತಮ್ಮ ಕರುಳಕುಡಿ ನೋಡಿಲ್ಲ. ಚಿಕ್ಕ ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸ ಮಾಡುವ ನರ್ಸ್​ಗಳಿದ್ದಾರೆ. ಈ ಎಲ್ಲರೂ ಸದ್ಯ ಕ್ವಾರಂಟೈನ್​ನಲ್ಲಿದ್ದು ಮೊಬೈಲ್​ಫೋನ್ ಮೂಲಕವೇ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

    ಡಾ. ಪಿ.ಎಸ್.ಭೂಸರಡ್ಡಿ, ನಿರ್ದೇಶಕ ಜಿಮ್್ಸ ಗದಗ

    ನಿರಾಶೆ ಮೂಡಿಸಿದ ಕ್ಷಣ

    ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವೃದ್ಧೆಯೊಬ್ಬರಿಗೆ ಸೋಂಕು ದೃಢಪಟ್ಟಿತು. 80 ವರ್ಷದ ಸೋಂಕಿತೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಆದರೆ,ದುರಾದೃಷ್ಟವಶಾತ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಈ ಘಟನೆ ನಮಗೆ ನೋವು ತಂದಿತಲ್ಲದೆ, ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡರೂ ವೃದ್ಧೆಯನ್ನು ಕಳೆದುಕೊಂಡಿದ್ದು ನಿರಾಶೆ ಮೂಡಿಸಿತು. ಇದಕ್ಕೆ ಧೃತಿಗೆಡದೆ ನಮ್ಮೆಲ್ಲ ವೈದ್ಯರು ಸೇರಿ ಇನ್ನಷ್ಟು ಶ್ರಮ ವಹಿಸಿದ ಪರಿಣಾಮ ನಾಲ್ವರು ಸೋಂಕಿತರನ್ನು ಗುಣಮುಖರನ್ನಾಗಿ ಮಾಡಿ ಬಿಡುಗಡೆ ಮಾಡಿ ಸಾರ್ಥಕ ಕ್ಷಣ ಅನುಭವಿಸಿದೆವು ಎಂದು ನಿರ್ದೇಶಕ ಡಾ. ಭೂಸರಡ್ಡಿ ತಮ್ಮ ಅನುಭವ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts