More

    ಕರೊನಾ ವೈರಸ್ ತಡೆಗೆ ಸಹಕರಿಸಿ

    ಗದಗ: ಕರೊನಾ ವೈರಸ್ ತೀವ್ರವಾಗಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಅವಶ್ಯ. ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ಪೊಲೀಸ್ ಇಲಾಖೆ ಸಹಯೋಗದಿಂದ ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರು ಕೂಡ ಈ ಆದೇಶಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್​ಫೋರ್ಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಆರೋಗ್ಯ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ದಾಸ್ತಾನು ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿಸುವವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಸರ್ಕಾರದ ಸೂಚನೆಯಂತೆ ಖಾಸಗಿ ನರ್ಸಿಂಗ್ ಹೋಂಗಳು ಕಾರ್ಯನಿರ್ವಹಿಸಬೇಕು. ಜನರು ಕಡ್ಡಾಯವಾಗಿ ಮನೆಯಲ್ಲಿ ಇರಬೇಕು ಹಾಗೂ ಅನಿವಾರ್ಯ ಸಂದರ್ಭದಲ್ಲಿ ಹೊರಬಂದಾಗ ತಪ್ಪದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿದೇಶದಿಂದ ಹಾಗೂ ಕೆಲಸಕ್ಕಾಗಿ ಹೊರಗೆ ಹೋಗಿ ಮರಳಿದವರು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ನಿಯಮಿತ ಅವಧಿಗೆ ಪ್ರತ್ಯೇಕವಾಗಿ ಇರಬೇಕು ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯ ಎಲ್ಲ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಮಿನಾಶಕ ಔಷಧ ಸಿಂಪಡಿಸಲಾಗಿದೆ. ನಿಗಾದಲ್ಲಿರುವವರು ನಿಯಮ ಉಲ್ಲಂಘಿಸುವವರಿಗೆ ಮಲ್ಲಸಮುದ್ರದ ಮುರಾರ್ಜಿ ವಸತಿ ಶಾಲೆಯಲ್ಲಿ 150 ಹಾಸಿಗೆ ವ್ಯವಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 100 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ಗದಗ-ಬೆಟಗೇರಿ ನಗರದ ಎಲ್ಲ ವಾರ್ಡ್​ಗಳಲ್ಲಿ ಜನಸಾಂಧ್ರತೆ ನಿಯಂತ್ರಿಸುವ ನಿಟ್ಟಿನಲ್ಲಿ ಮನೆಮನೆಗೆ ತರಕಾರಿ ಪೂರೈಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.

    ನಗರದಲ್ಲಿನ 349 ಪಡಿತರ ಅಂಗಡಿಗಳಿಂದ ಸರ್ಕಾರಿ ವಾಹನಗಳ ಮೂಲಕ ಅರ್ಹ ಕುಟುಂಬಗಳಿಗೆ ಪಡಿತರ ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಜನರು ಅನಗತ್ಯವಾಗಿ ಮನೆಬಿಟ್ಟು ಹೊರಗೆ ಬರದಂತೆ ಅವಶ್ಯಕ ವಸ್ತು, ಸೇವೆಗಳು ಜನರಿಗೆ ತಲುಪಿಸುವುದು ಮತ್ತು ಸಾಮಾಜಿಕ ಅಂತರವನ್ನು ಸರ್ವರೂ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಜಿಪಂ ಸಿಇಒ ಡಾ.ಆನಂದ ಕೆ, ಎಸ್ಪಿ ಎನ್.ಯತೀಶ, ಅಪರ ಜಿಲ್ಲಾಧಿಕಾರಿ ಸತೀಶ್​ಕುಮಾರ ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ ಬಸರೀಗಿಡದ, ಜಿಮ್್ಸ ನಿರ್ದೇಶಕ ಪಿ.ಎಸ್. ಭೂಸರೆಡ್ಡಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಮನೆಬಿಟ್ಟು ಹೊರ ಬರಬೇಡಿ

    ಕರೊನಾ ವೈರಸ್ ಹರಡದಂತೆ ಜಾರಿಗೊಳಿಸಿರುವ ಪ್ರತಿಬಂಧಕಾಜ್ಞೆ ಪರಿಣಾಮಕಾರಿಯಾಗಲು ಜನರು ಮನೆ ಬಿಟ್ಟು ಹೊರಗೆ ಬರಬಾರದು ಎಂದು ಸಚಿವ ಸಿ.ಸಿ. ಪಾಟೀಲ ಮನವಿ ಮಾಡಿದರು.

    ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಕರೊನಾ ಸೋಂಕು ತಡೆಗೆ ಎಲ್ಲ ಅವಶ್ಯಕ ಕ್ರಮ ಜರುಗಿಸುತ್ತಿವೆ. ಗದಗ ಜಿಲ್ಲೆಗೆ ವಿದೇಶದಿಂದ ಮತ್ತು ಹೊರ ಜಿಲ್ಲೆಗಳಿಂದ ಬರುವವರ ತಪಾಸಣೆಗಾಗಿ ಜಿಲ್ಲೆಯಲ್ಲಿ 8 ಚೆಕ್​ಪೋಸ್ಟ್​ಗಳು ಈಗಾಗಲೇ ಕಾರ್ಯನಿರತವಾಗಿವೆ ಎಂದರು. ನಗರದ ಎಲ್ಲ ದಿನಸಿ, ಔಷಧ ಸೇರಿದಂತೆ ಅವಶ್ಯಕ ವಸ್ತುಗಳ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜಿಲ್ಲಾಡಳಿತದಿಂದ ಗ್ರಾಹಕರು ನಿಲ್ಲಬೇಕಾದ ಜಾಗೆಗಳನ್ನು ಗುರುತು ಮಾಡಲಾಗಿದ್ದು ತರಕಾರಿಗಳನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ ನೀಡಿದರು.

    ಮನೆಯಿಂದ ಹೊರ ಬಂದ್ರೆ ಜೋಕೆ !

    ರೋಣ: ಲಾಕ್​ಡೌನ್ ನಿಮಿತ್ತ ಶನಿವಾರವೂ ಪಟ್ಟಣದ ಬಹುತೇಕ ಕಡೆ ಜನ ಸಂಚಾರ ವಿರಳವಾಗಿತ್ತು. ಜನ ಸಂಚಾರ ನಿಯಂತ್ರಿಸಲು ಮನೆ ಮನೆಗೆ ತೆರಳಿ ತರಕಾರಿ, ಹಾಲು ಮಾರಾಟ ಮಾಡಲು ವ್ಯಾಪಾರಸ್ಥರಿಗೆ ಅನುವು ಮಾಡಿಕೊಡಲಾಗಿದೆ. ಪರಿಣಾಮ ವ್ಯಾಪಾರಸ್ಥರು ತಳ್ಳುವ ಗಾಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಿಗೆ ತೆರಳಿ ತರಕಾರಿ ಮಾರುತ್ತಿದ್ದಾರೆ. ಇದರಿಂದ ಜನರು ಮಾರುಕಟ್ಟೆಗೆ ಬರುವುದು ಬಹಳಷ್ಟು ನಿಂತು ಹೋಯಿತು.

    ಬೆಳಗಿನ ಜಾವ ಎಂದಿನಂತೆ ದಿನಸಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರು ದಿನಸಿ ವಸ್ತುಗಳನ್ನು ಖರೀದಿಸಿದರು.

    ಪಟ್ಟಣವನ್ನು ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ. ಆದರೆ, ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಅನಗತ್ಯವಾಗಿ ತಿರುಗಾಡುತ್ತಿದ್ದು, ಅವರಿಗೆ ಈಗ ಬಸ್ಕಿ ಹೊಡೆಸುವುದು, ಪೊಲೀಸರ ವಾಹನ ತಳ್ಳುವುದು, ಬಟ್ಟೆ ಬಿಚ್ಚಿಸಿ ಬರಿ ಮೈಯಲ್ಲಿ ಮನೆಗೆ ಕಳುಹಿಸುವುದು ಸೇರಿ ಅನೇಕ ಶಿಕ್ಷೆ ನೀಡಿದ್ದೇವೆ. ಭಾನುವಾರದಿಂದ ಅನಗತ್ಯವಾಗಿ ಮನೆಯಿಂದ ಹೊರಬರುವವರನ್ನು ಬಂಧಿಸಲಾಗುವುದು ಎಂದು ಪಿಎಸ್​ಐ ಪರಮೇಶ್ವರ ಕವಟಗಿ ಎಚ್ಚರಿಕೆ ನೀಡಿದ್ದಾರೆ.

    ಅಗ್ನಿ ಶಾಮಕ ದಳದ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಾಶಕ ದ್ರಾವಣ ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts