More

    ಕರೊನಾ ರೋಗಿಗಳಿಗೆ ಬೆಡ್ ಕೊರತೆ

    ಗದಗ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಆದರೆ, ನಗರದ ಮಧ್ಯ ಭಾಗದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 130ಕ್ಕೂ ಹೆಚ್ಚು ಕೋವಿಡ್-19 ಸಕ್ರಿಯ ಕೇಸ್​ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಅಲ್ಲಿನ ಹಾಸಿಗೆಗಳು ತುಂಬಿರುವುದರಿಂದ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಕೋವಿಡ್-19 ಆಸ್ಪತ್ರೆ ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳತೊಡಗಿದೆ.

    ಗದಗ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯು 200 ಹಾಸಿಗೆಗಳ ಸಾಮರ್ಥ್ಯ ಹಾಗೂ ಸಕಲ ಸೌಲಭ್ಯವನ್ನೂ ಹೊಂದಿದೆ. ಆದರೆ, ಈ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡುವುದರಿಂದಾಗುವ ಸಾಧಕ-ಬಾಧಕಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ.

    ಮುಖ್ಯವಾಗಿ ಕೆ.ಸಿ. ರಾಣಿ ರಸ್ತೆಯು ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ನಗರದ ಅಧಿಕ ಖಾಸಗಿ ಆಸ್ಪತ್ರೆಗಳು ಈ ರಸ್ತೆಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ವಿವಿಧ ಭಾಗಗಳಿಂದ ಜನರು ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ಬರುತ್ತಾರೆ. ವಿವಿಧ ವ್ಯಾಪಾರ ವಹಿವಾಟು ಇಲ್ಲಿ ಸಾಕಷ್ಟು ನಡೆಯುತ್ತದೆ. ಜನವಸತಿ ಪ್ರದೇಶವೂ ಇದಾಗಿರುವುದರಿಂದ ನೂರಾರು ಮನೆಗಳು ಸಹ ಇಲ್ಲಿವೆ. ಹೀಗಿದ್ದಾಗ ಇಂತಹ ಪ್ರದೇಶದಲ್ಲಿ ಕೋವಿಡ್-19 ಆಸ್ಪತ್ರೆಯನ್ನು ಆರಂಭಿಸುವುದು ಉಚಿತವೇ ಎಂಬುದನ್ನು ಜಿಲ್ಲಾಡಳಿತ ಪರಾಮಶಿಸುವುದು ಸೂಕ್ತ ಎಂದು ಅವಳಿ ನಗರದ ಜನರು ಒತ್ತಾಯಿಸುತ್ತಿದ್ದಾರೆ.

    ಹೊರವಲಯ ಸೂಕ್ತ

    ಮುಂಡರಗಿ ಪಟ್ಟಣದಲ್ಲಿ ಕಳೆದ ವಾರ ಒಂದೇ ದಿನಕ್ಕೆ 29 ಪಾಸಿಟಿವ್ ಕೇಸ್​ಗಳು ಪತ್ತೆಯಾದವು. ಜಿಮ್ಸ್​ನಲ್ಲಿ ಹಾಸಿಗೆಗಳ ಕೊರತೆ ಇದ್ದುದರಿಂದ ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಿದ್ದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹೊರವಲಯದಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿಯೇ ಎಲ್ಲ 29 ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇನ್ನಿತರ ತಾಲೂಕಿನಲ್ಲಿ ಸಹ ಪಟ್ಟಣದ ಹೊರವಲಯದಲ್ಲಿ ಕೋವಿಡ್-19 ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಬೇಕು. ಗದಗ ನಗರದ ಹೊಂಬಳ ರಸ್ತೆಯಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹತ್ತಾರು ಕೊಠಡಿಗಳಿದ್ದು, ಅಲ್ಲಿ ಆಸ್ಪತ್ರೆ ಮಾಡಿದರೆ ಯಾರಿಗೂ ತೊಂದರೆ ಆಗುವುದಿಲ್ಲ. ಈ ಕುರಿತು ಜಿಲ್ಲಾಡಳಿತ ಕೊಂಚ ಯೋಚಿಸುವುದು ಒಳಿತು ಎಂಬುದು ಸಾರ್ವಜನಿಕರ ಸಲಹೆಯಾಗಿದೆ.

    ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಜಿಮ್ಸ್​ನಲ್ಲಿ ಈಗಾಗಲೇ ಹಾಸಿಗೆಗಳು ಭರ್ತಿಯಾಗಿದ್ದು, ಸೋಂಕಿತರಿಗೆ ಮತ್ತೊಂದು ಆಸ್ಪತ್ರೆ ತೆರೆಯಲು ಯೋಚನೆ ಮಾಡಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಗದಗ ನಗರದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ.

    | ಸಿ.ಸಿ. ಪಾಟೀಲ

    ಜಿಲ್ಲಾ ಉಸ್ತುವಾರಿ ಸಚಿವ

    ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ

    ಗದಗ: ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ಕಡಿವಾಣ ಹಾಕಬೇಕು. ಕ್ಷೇತ್ರವಾರು ಮಾಹಿತಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೋವಿಡ್-19 ನಿಯಂತ್ರಣ ಕುರಿತ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಮುನ್ನೆಚ್ಚರಿಕೆ ಕ್ರಮವಾಗಿ ಹಾಸಿಗೆಗಳ ಲಭ್ಯತೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಮದುವೆ, ಹೋಟೆಲ್, ರೆಸ್ಟೋರೆಂಟ್​ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಗುಂಪುಗೂಡುವಿಕೆಗೆ ಅವಕಾಶ ಕೊಡಬಾರದು. ಮಾಸ್ಕ್ ಧರಿಸುವಂತೆ ಜಿಲ್ಲೆಯ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಬೇಕು ಎಂದು ಸೂಚಿಸಿದರು.

    ಆಯಾ ತಾಲೂಕುವಾರು ತಹಸೀಲ್ದಾರರು ಮುರಾರ್ಜಿ ವಸತಿ ನಿಲಯಗಳನ್ನು ಗುರುತಿಸಿ ರೋಗ ಲಕ್ಷಣವಿರುವ ಹಾಗೂ ಚಿಕಿತ್ಸೆಯ ಅಗತ್ಯವಿಲ್ಲದ ಕೋವಿಡ್-19 ಸೋಂಕಿತರನ್ನು ಕ್ವಾರಂಟೈನ್ ಮಾಡಬೇಕು. ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜಿಲ್ಲೆಗೆ 65 ಲಕ್ಷ ರೂ. ಬಿಡುಗಡೆ ಮಾಡಿದ್ದು, ಸೋಂಕಿತ ಹಾಗೂ ಶಂಕಿತರಿಗೆ ನೀಡುವ ಆಹಾರದಲ್ಲಿ ಗುಣಮಟ್ಟ ಹಾಗೂ ನಿಗದಿತ ಪ್ರಮಾಣ ಕಾಪಾಡಿಕೊಳ್ಳಬೇಕು. ರಾತ್ರಿ ಪ್ರತಿಬಂಧಕಾಜ್ಞೆಯನ್ನು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಾಮಾಜಿಕ ಭದ್ರತೆಯ ಹಣ ಬಿಡುಗಡೆ ವಿಳಂಬವಾಗದಂತೆ ನಿಗಾ ವಹಿಸಬೇಕು ಎಂದರು.

    ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ. ಸತೀಶ ಬಸರಿಗಿಡದ ಮಾತನಾಡಿ, ಜಿಮ್್ಸ ಆಸ್ಪತ್ರೆಯ ಪರೀಕ್ಷಾ ಕೇಂದ್ರದಲ್ಲಿ ತಾಲೂಕುವಾರು ಕನಿಷ್ಠ 20 ಜನ ಸೇರಿ ನಿತ್ಯ 210 ಜನರ ಗಂಟಲ ದ್ರವ ಪರೀಕ್ಷಿಸಲಾಗುತ್ತಿದೆ. ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

    ಶಾಸಕ ಕಳಕಪ್ಪ ಬಂಡಿ ಮಾತನಾಡಿದರು. ಶಾಸಕ ರಾಮಣ್ಣ ಲಮಾಣಿ, ಜಿ.ಪಂ. ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್, ಇತರರು ಇದ್ದರು.

    ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕಗೊಂಡ ಅಧಿಕಾರಿಗಳು ನಿತ್ಯ ಸಂಬಂಧಿಸಿದ ಪ್ರದೇಶಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಬೇಕು. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳು ಬೇಕಾಬಿಟ್ಟಿ ಓಡಾಡದಂತೆ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ 24 ಗಂಟೆಯೊಳಗೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂರ್ಪತರನ್ನು ಗುರುತಿಸಿ ಕ್ವಾರಂಟೈನ್ ಮಾಡಿ ಗಂಟಲ ದ್ರವ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಮದುವೆ ಸಮಾರಂಭಗಳಿಗೆ ಕಡ್ಡಾಯವಾಗಿ ತಹಸೀಲ್ದಾರರಿಂದ ಪರವಾನಗಿ ಪಡೆಯಬೇಕು.

    | ಸುಂದರೇಶ್​ಬಾಬು

    ಜಿಲ್ಲಾಧಿಕಾರಿ

    ಇಲ್ಲಿವರೆಗೆ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ 11 ಪ್ರಕರಣ ದಾಖಲಿಸಲಾಗಿದೆ. ಕರೊನಾ ಸೇನಾನಿಗಳ ಮೇಲೆ ಹಲ್ಲೆ, ನಿಂದನೆಯಂತಹ ಘಟನೆಗಳು ಸಂಭವಿಸಿದರೆ ದೌರ್ಜನ್ಯಕ್ಕೊಳಗಾದವರು ಧೈರ್ಯವಾಗಿ ಪ್ರಕರಣ ದಾಖಲಿಸಬೇಕು.

    | ಯತೀಶ್ ಎನ್.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts