More

    ಕರೊನಾ ಪರೀಕ್ಷೆ ನಡೆಸಲು ನಿರ್ಲಕ್ಷ್ಯ ; ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ

    ಚಿಕ್ಕನಾಯಕನಹಳ್ಳಿ : ತಾಲೂಕಿನಲ್ಲಿ ಕರೊನಾ ಹರಡುವಿಕೆ ತಡೆಯಲು ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರೊನಾ ಹಾಗೂ ಬರ ನಿರ್ವಹಣೆ ಸಂಬಂಧಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಲು, ಪ್ರತಿ ಒಳರೋಗಿಗೂ ಕರೊನಾ ಪರೀಕ್ಷೆ ಮಾಡಲು ಸರ್ಕಾರ ಕಡ್ಡಾಯ ಮಾಡಿದ್ದರೂ ಅದನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕಿಡಿಕಾರಿದರು.

    ಕರೊನಾ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಜಾತ್ರೆ, ಸಭೆ, ಸಮಾರಂಭ ನಿಷೇಧಿಸಿ ತ್ವರಿತ ಗತಿಯಲ್ಲಿ ವ್ಯಾಕ್ಸಿನ್ ವಿತರಣೆಯಾಗಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಸರ್ವೆ ಮಾಡಿಸಿ 45 ವರ್ಷದ ಹಿರಿಯರು, ಗರ್ಭಿಣಿ, ಬಾಣಂತಿಯರ ಮಾಹಿತಿ ಸಂಗ್ರಹಿಸಿ, ಜ್ವರ, ಕೆಮ್ಮು, ನೆಗಡಿ, ತಲೆನೋವು, ಶೀತ ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ತಾಲೂಕಿನಲ್ಲಿ ಬರಗಾಲವಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಶೇ.15ರ ಅನುದಾನದಲ್ಲಿ ಕುಡಿಯುವ ನೀರಿನ ಅಗತ್ಯ ಕೆಲಸಗಳನ್ನು ಮಾಡುವಂತೆ ಎಲ್ಲ ಪಿಡಿಒಗಳಿಗೆ ಸೂಚಿಸಿದರು.

    ವೈದ್ಯರ ಸಲಹೆಯಿಲ್ಲದೆ ಮೆಡಿಕಲ್ ಶಾಪ್‌ಗಳಲ್ಲಿ ಮಾತ್ರೆ, ಔಷಧ ನೀಡಬಾರದು. ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಬೇಕು. ತಾಲೂಕಿನ ಪಿಡಿಒಗಳು ಸಬ್ ಸೆಂಟರ್ ಮಾಡಿಕೊಂಡು ಹೊರಗಿನ ವ್ಯಕ್ತಿಗಳನ್ನು ತಪಾಸಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಜನರಲ್ಲಿ ಕರೊನಾ ಬಗ್ಗೆ ಜಾಗೃತಿ ಮೂಡಿಸಲು ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಯ ಎಲ್ಲ ಕಡೆ ಕರಪತ್ರ, ಟಾಂ ಟಾಂ ಪ್ರಚಾರ ಮಾಡಿಸಬೇಕು. ಜತೆಗೆ ಸ್ವಚ್ಛತೆ, ನೈರ್ಮಲ್ಯದ ಕಡೆ ಹೆಚ್ಚು ಗಮನಹರಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ತಹಸೀಲ್ದಾರ್ ತೇಜಸ್ವಿನಿಗೆ ತಿಳಿಸಿದರು.

    ತಾಲೂಕು ವೈದ್ಯಾಧಿಕಾರಿ ಡಾ.ನವೀನ್ ಮಾತನಾಡಿ, ತಾಲೂಕಿನ ತಿಮ್ಮನಹಳ್ಳಿ, ಕಂದಿಕೆರೆ, ನವಿಲೆ, ಬಡಕೇಗುಡ್ಲು, ದಿಬ್ಬದಹಳ್ಳಿ, ಬಗ್ಗನಹಳ್ಳಿ, ಗೋಪಾಲನಹಳ್ಳಿ, ಚಿ.ನಾ.ಹಳ್ಳಿ ಟೌನ್‌ನಲ್ಲಿ 35 ಕರೊನಾ ಸಕ್ರಿಯ ಪ್ರಕರಣಗಳಿದ್ದು, ಇವರಲ್ಲಿ ಮೂರು ಜನ ತಾಲೂಕು ಆರೋಗ್ಯ ಕೇಂದ್ರದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್‌ನಲ್ಲಿ 5526 ಮಂದಿಗೆ ವ್ಯಾಕ್ಸಿನ್ ನೀಡಿದ್ದು, 286 ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ ಎಂದು ತಿಳಿಸಿದರು.

    ಸರ್ಕಾರದ ಮಾರ್ಗಸೂಚಿಯಂತೆ ಪ್ರತಿದಿನ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪುರಸಭೆ ವಾರ್ಡ್ ವ್ಯಾಪ್ತಿಯಲ್ಲಿ ಗರಿಷ್ಠ 100 ಸ್ವ್ಯಾಬ್ ಟೆಸ್ಟ್ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 80 ರಿಂದ 100 ವ್ಯಾಕ್ಸಿನ್ ಚುಚ್ಚು ಮದ್ದು ನೀಡಲಾಗುತ್ತಿದೆ.
    ಡಾ.ವೀರಭದ್ರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts