More

    ಕರೊನಾ ನೆಪದಲ್ಲಿ ತನಿಖೆ ಕುಂಠಿತ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಕಳೆದ ಜನವರಿ, ಫೆಬ್ರವರಿ ತಿಂಗಳಲ್ಲಿ ಭಾರಿ ಸದ್ದು ಮಾಡಿದ್ದ ನೆರೆ ಪರಿಹಾರ ವಿತರಣೆಯಲ್ಲಿನ ಅವ್ಯವಹಾರ ಕುರಿತ ಪ್ರಕರಣದ ತನಿಖೆ ಇದೀಗ ಕರೊನಾ ನೆಪದಲ್ಲಿ ಮಂದಗತಿಯಲ್ಲಿ ಸಾಗಿದೆ.

    2019ರ ಆಗಸ್ಟ್, ಅಕ್ಟೋಬರ್​ನಲ್ಲಿ ಸುರಿದ ಭಾರಿ ಮಳೆಯಿಂದ ತಾಲೂಕಿನಲ್ಲಿ ನೂರಾರು ಮನೆಗಳು ಕುಸಿದಿದ್ದವು. ಸಾವಿರಾರು ಹೆಕ್ಟೇರ್​ನಷ್ಟು ಮೆಕ್ಕೆಜೋಳ, ಭತ್ತ, ಹತ್ತಿ ಸೇರಿ ವಿವಿಧ ಬೆಳೆಗಳು ನೀರು ಪಾಲಾಗಿದ್ದವು. ಇದಕ್ಕಾಗಿ ಸರ್ಕಾರ ರೈತರಿಗೆ ಹಾಗೂ ಸೂರು ಕಳೆದುಕೊಂಡವರಿಗೆ ಪರಿಹಾರ ಘೊಷಿಸಿತ್ತು.

    ಆದರೆ, ಪರಿಹಾರ ವಿತರಣೆ ಹೆಸರಿನಲ್ಲಿ ಕಂದಾಯ, ಕೃಷಿ, ತೋಟಗಾರಿಕೆಯ ಕಂಪ್ಯೂಟರ್ ಆಪರೇಟರ್ ಹಾಗೂ ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಕೋಟ್ಯಂತರ ರೂ. ಲೂಟಿ ಮಾಡಿದ್ದರು. ಈ ಬಗ್ಗೆ ತಹಸೀಲ್ದಾರ್, ತಹಸೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಆಪರೇಟರ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿ ಹಲವರ ವಿರುದ್ಧ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಅವರು ಕಳೆದ ಫೆ. 26ರಂದು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಐವರ ಬಂಧನ, 31 ಜನರಿಗೆ ಜಾಮೀನು: ಫೆಬ್ರವರಿ ತಿಂಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಂದಿನ ಸಿಪಿಐ ಸುರೇಶ ಸಗರಿ, ಸರ್ಕಾರಿ ಭೂಮಿ ಹೆಸರಿನಲ್ಲಿ 46 ಸಾವಿರ ರೂ. ಲೂಟಿ ಮಾಡಿದ್ದ ತಾಲೂಕಿನ ಕಾಕೋಳ ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಮಡಿವಾಳರ ಸೇರಿ ಒಟ್ಟು 5 ಜನರನ್ನು ಬಂಧಿಸಿದ್ದರು. ಅವ್ಯವಹಾರದ ಆರೋಪ ಎದುರಿಸುತ್ತಿರುವ ತಹಸೀಲ್ದಾರ್, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಡಾಟಾ ಎಂಟ್ರಿ ಆಪರೇಟರ್, ಗ್ರಾಮ ಲೆಕ್ಕಾಧಿಕಾರಿಗಳು ಸೇರಿ 31 ಜನ ಬಂಧನದ ಭೀತಿಯಿಂದ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ಪ್ರಕರಣದಲ್ಲಿ ಇನ್ನೂ ಹಲವರು ಪಾಲ್ಗೊಂಡಿದ್ದು ಅವರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂಬುದು ನೆರೆ ಸಂತ್ರಸ್ತರ ಆಗ್ರಹವಾಗಿದೆ.

    ಕರೊನಾ ನೆಪ: ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಭಾರಿ ಸದ್ದು ಮಾಡಿದ್ದ ಅವ್ಯವಹಾರ ಪ್ರಕರಣ ನಂತರದಲ್ಲಿ ಕರೊನಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಮರೆತೇ ಹೋಗಿದೆ. ತಾಲೂಕಿನ 838ಕ್ಕೂ ಅಧಿಕ ಪ್ರಕರಣದಲ್ಲಿ ರೈತರ ಹಣ ಬೇರೆಯವರಿಗೆ ಪಾವತಿಯಾಗಿರುವ ಉದಾಹರಣೆಯಿದೆ. ಆದರೆ, ಪೊಲೀಸರು ಈವರೆಗೆ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಮಾತ್ರ ಭೇದಿಸಿದ್ದು, ಇನ್ನುಳಿದ ಪ್ರಕರಣದ ಬಗ್ಗೆ ತಲೆ ಹಾಕಿಯೂ ನೋಡುತ್ತಿಲ್ಲ ಎಂಬ ಆರೋಪ ರೈತರದ್ದಾಗಿದೆ.

    ಗ್ರಾಮೀಣ ಠಾಣೆಯ ಈ ಹಿಂದಿನ ಸಿಪಿಐ ಸುರೇಶ ಸಗರಿ ವರ್ಗಾವಣೆಯಾಗುವ ಮುನ್ನವೂ ನೆರೆ ಪರಿಹಾರ ವಿತರಣೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ಮಾಡಿದ್ದಾರೆ. ಈಗ ನೂತನ ಸಿಪಿಐ ಬಂದಿದ್ದಾರೆ. ಅವರಿಗೂ ಪ್ರಕರಣದ ಬಗ್ಗೆ ಅಧ್ಯಯನ ಮಾಡಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗುವುದು. ಕರೊನಾ ಸಲುವಾಗಿ ಪ್ರಕರಣದ ತನಿಖೆಗೆ ಸ್ವಲ್ಪ ತಡವಾಗಿತ್ತು. ಇದೀಗ ತನಿಖೆ ಚುರುಕುಗೊಳಿಸಲಾಗುವುದು.

    | ಟಿ.ವಿ. ಸುರೇಶ, ಡಿವೈಎಸ್ಪಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts