More

    ಕರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವಾರಗಳ ಕಾಲ ಸಾರ್ವಜನಿಕ ಸಭೆ ಸಮಾರಂಭಗಳನ್ನು ರದ್ದು ಪಡಿಸಲು ಸೂಚಿಸಿರುವುದರಿಂದ ಹುಬ್ಬಳ್ಳಿಯಲ್ಲಿ ಪೂರ್ವ ನಿಗದಿತ ಹಲವು ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.

    ಮಾ. 14 ಹಾಗೂ 15ರಂದು ಗೋಕುಲ ಗಾರ್ಡನ್​ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಗೀತೋತ್ಸವ-ವಸಂತಗಾನ ಕಾರ್ಯಕ್ರಮ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ನಿಗದಿಪಡಿಸಲಾಗುವುದು ಎಂದು ಆಯೋಜಕರಾದ ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ತಿಳಿಸಿದ್ದಾರೆ.

    ಧಾರವಾಡ ಜಿಲ್ಲಾ ಗೋ ಪರಿವಾರ, ಆರೋಗ್ಯ ಭಾರತಿ ಮತ್ತು ಧನ್ಯೋಸ್ಮಿ ಯೋಗ ಕೇಂದ್ರದ ಸಹಕಾರದೊಂದಿಗೆ ಮಾ. 14 ಹಾಗೂ 15ರಂದು ಹಮ್ಮಿಕೊಂಡಿದ್ದ ಲೋಕಾಯುರ್ವೆದ ಲೋಕೋಪಚಾರ ಕುರಿತು ವಿಶೇಷ ಉಪನ್ಯಾಸ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ, ಮಾ. 14ರಿಂದ 17ರವರೆಗೆ ಸವಾಯಿ ಗಂಧರ್ವ ಸಭಾಭವನದಲ್ಲಿ ದೇಶಪಾಂಡೆ ಪ್ರತಿಷ್ಠಾನ ನವೋದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ ಯುಗಾದಿ ಮೆಗಾ ಉತ್ಸವ ಮುಂದೂಡಲಾಗಿದೆ.

    ನಡೆಯಲಿದೆ ಘಟಿಕೋತ್ಸವ: ಮಾ. 14ರಂದು ಕರ್ನಾಟಕ ವಿಶ್ವ ವಿದ್ಯಾಲಯದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿರುವ ಕಾನೂನು ವಿಶ್ವ ವಿದ್ಯಾಲಯದ ಘಟಿಕೋತ್ಸವ ಮಾತ್ರ ನಿಗದಿತ ಅವಧಿಯಂತೆ ನಡೆಯಲಿದೆ. ಆದರೆ, ರಾಜ್ಯಪಾಲ ವಜುಭಾಯಿ ವಾಲಾ ಆಗಮಿಸುತ್ತಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ್, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸೇರಿ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

    ಧಾರವಾಡದಲ್ಲಿ: ಮಾ. 14ರಂದು ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತ ವಿಚಾರ ಸಂಕಿರಣ, ಸಾಧಕ ಶಿಕ್ಷಕರಿಗೆ ಸನ್ಮಾನ. 15ರಂದು ಕಲಾಭವನದಲ್ಲಿ ಹಮ್ಮಿಕೊಂಡಿದ್ದ ರಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ ಮತ್ತು ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ರಂಗ ಧ್ವನಿ ಸಮಾರಂಭಗಳನ್ನು ರದ್ದು ಪಡಿಸಲಾಗಿದೆ.

    ಐಐಐಟಿ ಶೈಕ್ಷಣಿಕ ಚಟುವಟಿಕೆ ಸ್ಥಗಿತ: ಮಾರ್ಚ್ 28ರ ವರೆಗೆ ಧಾರವಾಡ ಐಐಐಟಿಯ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ ಎಂದು ಕುಲಸಚಿವ ಬಸವರಾಜಪ್ಪ ತಿಳಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. 28ರವರೆಗೆ ಯಾವುದೇ ವರ್ಗಗಳು ನಡೆಯುವುದಿಲ್ಲ. ಉಳಿದ ಕಾರ್ಯ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ತಿಳಿಸಲಾಗಿದೆ. ಧಾರವಾಡ ಐಐಟಿಯಲ್ಲಿ ಸಹ ಶೈಕ್ಷಣಿಕ ಚಟುವಟಿಕೆ ವಿಷಯದಲ್ಲಿ ಇದೇ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

    ಸೂಚನೆ ಬಂದಿಲ್ಲ: ರಾಜ್ಯ ಸರ್ಕಾರ ಎಲ್ಲ ಮಾಲ್​ಗಳನ್ನು ಒಂದು ವಾರದವರೆಗೆ ಬಂದ್ ಇಡುವಂತೆ ಸೂಚಿಸಿರುವ ಮಾಹಿತಿ ಬಂದಿದೆ. ಆದರೆ, ಸದ್ಯಕ್ಕೆ ಬಂದ್ ಮಾಡುವ ಬಗ್ಗೆ ಸ್ಪಷ್ಟತೆ ಇಲ್ಲ. ಜಿಲ್ಲಾಧಿಕಾರಿ ಆದೇಶ ಎದುರು ನೋಡುತ್ತಿರುವುದಾಗಿ ಮಾಲ್ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಕವಿವಿಗೆ ರಜೆ: ಸರ್ಕಾರದ ಆದೇಶದಂತೆ ಕರ್ನಾಟಕ ವಿಶ್ವ ವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ರಜೆ ಅವಧಿಯಲ್ಲಿನ ನಿಗದಿತ ಪರೀಕ್ಷೆಗಳು ಅಬಾಧಿತವಾಗಿರುತ್ತವೆ ಎಂದು ಕವಿವಿ ಪ್ರಭಾರ ಕುಲಪತಿ ಟಿ.ಎಂ. ಭಾಸ್ಕರ್ ತಿಳಿಸಿದ್ದಾರೆ.

    ಈಜುಗೊಳ ಬಂದ್: ಹುಬ್ಬಳ್ಳಿ ಐಟಿ ಪಾರ್ಕ್ ಬಳಿಯ ಪಾಲಿಕೆ ಒಡೆತನದ ಈಜುಗೊಳವನ್ನು ಮಾ. 14ರಿಂದ 1 ವಾರ ಕಾಲ ಬಂದ್ ಮಾಡಲಾಗಿದೆ. ಈಜುಗೊಳದ ಬಾಗಿಲಿಗೆ ಬೀಗ ಹಾಕುವಂತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಪಿಯು ಪರೀಕ್ಷೆ ಅಬಾಧಿತ: ಈಗಾಗಲೇ ಪ್ರಾರಂಭವಾಗಿರುವ ದ್ವಿತೀಯ ವರ್ಷದ ಪಿಯು ಪರೀಕ್ಷೆಗೆ ಯಾವುದೇ ಅಡ್ಡಿಯಿಲ್ಲ. ರಾಜ್ಯ ಸರ್ಕಾರದ ಆದೇಶದಿಂದ ಪಿಯು ಪರೀಕ್ಷೆ ಅಬಾಧಿತವಾಗಿದೆ. ಹೀಗಾಗಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ. | ಶಾರದಾ ಕಿರೇಸೂರ ಡಿಡಿಪಿಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts