More

    ಕರೊನಾ ಕೇಂದ್ರವಾದ ಉಡುಪಿ

    ಉಡುಪಿ: ಸರಿಸುಮಾರು ಮೂರು ವಾರಗಳ ಹಿಂದೆ ಹಸಿರು ಜಿಲ್ಲೆಯಾಗಿ ಕೋವಿಡ್-19 ನಿಯಂತ್ರಣದಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದ್ದ ಉಡುಪಿ ಜಿಲ್ಲೆ ಈಗ ಕರೊನಾ ಪಾಸಿಟಿವ್ ಪ್ರಕರಣದಲ್ಲಿ ರಾಜ್ಯದಲ್ಲೇ ಅಗ್ರ ಸ್ಥಾನಕ್ಕೇರಿದೆ. ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 150 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ.
    ಮಂಗಳವಾರ ಸೋಂಕು ದೃಢಗೊಂಡವರಲ್ಲಿ 10 ವರ್ಷದೊಳಗಿನ 9 ಮಕ್ಕಳು, 60 ವರ್ಷ ಮೇಲ್ಪಟ್ಟ ಮೂವರು ವೃದ್ಧರ ಸಹಿತ 120 ಪುರುಷರು, 30 ಮಹಿಳೆಯರಿದ್ದಾರೆ. ಸೋಂಕಿತ ಎಲ್ಲರೂ ಮಹಾರಾಷ್ಟ್ರದಿಂದ ಬಂದು ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದು, ಏಳು ದಿನ ಅವಧಿ ಮುಗಿದ ಬಳಿಕ ಇತ್ತೀಚೆಗೆ ಎಲ್ಲರನ್ನೂ ಮನೆಗೆ ಕಳುಹಿಸಲಾಗಿತ್ತು. ಇವರೆಲ್ಲರೂ ಕುಂದಾಪುರ ಮತ್ತು ಬೈಂದೂರು ತಾಲೂಕಿನವರು ಎಂದು ತಿಳಿದು ಬಂದಿದೆ. ಎಲ್ಲರನ್ನೂ ಪತ್ತೆ ಮಾಡಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸಂಪರ್ಕದಲ್ಲಿದ್ದವರ ಬಗ್ಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
    ಜಿಲ್ಲೆಯಲ್ಲಿ ಇದುವರೆಗೆ 64 ಮಂದಿ ಗುಣಮುಖರಾಗಿದ್ದು, 345 ಸಕ್ರಿಯ ಪ್ರಕರಣಗಳಿವೆ, ಒಬ್ಬರು ಮೃತಪಟ್ಟಿದ್ದಾರೆ.

    ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಈ ಸ್ಥಿತಿ: ಜಿಲ್ಲೆಯಲ್ಲಿ ದಿನೇದಿನೆ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಈ ಹಿಂದಿನ ಕ್ವಾರಂಟೈನ್ ಅವ್ಯವಸ್ಥೆ, ಬದಲಾದ ಕ್ವಾರಂಟೈನ್ ನಿಯಮಾವಳಿ, ಲ್ಯಾಬ್‌ಗಳಿಂದ ವರದಿ ವಿಳಂಬ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಜಿಲ್ಲಾಡಳಿತ, ಅಧಿಕಾರಿ ವರ್ಗ ಉತ್ತಮವಾಗಿ ಕೆಲಸ ನಿರ್ವಹಿಸಿತ್ತು. ಬಳಿಕ ಜನಪ್ರತಿನಿಧಿಗಳ ಒತ್ತಡ, ಹಸ್ತಕ್ಷೇಪದಿಂದಾಗಿ ಕ್ವಾರಂಟೈನ್ ನಿಯಮವನ್ನು ಸರ್ಕಾರ ಸಡಿಲಗೊಳಿಸಿ ಬಹುದೊಡ್ಡ ಪ್ರಮಾದ ಎಸಗಿದೆ ಎಂದು ಬಹುತೇಕ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    18 ದಿನದಲ್ಲಿ 406 ಕೇಸ್!

    ಮಾರ್ಚ್ 25ರಿಂದ 29ರ ನಡುವೆ ನಾಲ್ಕು ದಿನಗಳಲ್ಲಿ ಮೂರು ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದ್ದ ಉಡುಪಿ ನಂತರದ 45 ದಿನಗಳಲ್ಲಿ ಒಂದೇ ಒಂದು ಕರೊನಾ ಕೇಸ್ ಇಲ್ಲದೆ ಹಸಿರು ವಲಯದಲ್ಲಿತ್ತು. ಶೂನ್ಯ ಪ್ರಕರಣಗಳೊಂದಿಗೆ ರಾಜ್ಯದಲ್ಲೇ ಗಮನ ಸೆಳೆದಿತ್ತು. ಆದರೆ ಮೇ 15ರಂದು ಆರು ಪಾಸಿಟಿವ್ ಪ್ರಕರಣಗಳೊಂದಿಗೆ ಆರಂಭವಾದ ಕರೊನಾ ಓಟ ಜೂ.2ರವರೆಗೆ 406 ಪ್ರಕರಣಗಳನ್ನು ದಾಖಲಿಸಿದೆ. ಇಷ್ಟು ಪಾಸಿಟಿವ್ ಪ್ರಕರಣಗಳನ್ನು ಕಾಣಲು ತೆಗೆದುಕೊಂಡ ದಿನಗಳು ಕೇವಲ 18.

    5846 ವರದಿ ಬಾಕಿ: ಜಿಲ್ಲೆಯಲ್ಲಿ ಇನ್ನೂ 5846 ಮಂದಿಯ ಕೋವಿಡ್-19 ವೈದ್ಯಕೀಯ ಪರೀಕ್ಷೆ ವರದಿ ಬರಲು ಬಾಕಿ ಇದೆ. ಮಂಗಳವಾರ 627 ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 2, ಇಲ್‌ನೆಸ್‌ಗೆ ಸಂಬಂಧಿಸಿ ಒಟ್ಟು 5 ಮಂದಿಯ ಮಾದರಿಯನ್ನು ಮಂಗಳವಾರ ಸಂಗ್ರಹಿಸಲಾಗಿದೆ. ಐಸೊಲೇಶನ್ ವಾರ್ಡ್‌ನಿಂದ 6 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಜನರು ಆತಂಕ ಪಡುವ ಅಗತ್ಯವಿಲ್ಲ. ಮಹಾರಾಷ್ಟ್ರದಿಂದ ಆಗಮಿಸಿದವರಿಗೆ ಶೇ.10ರಷ್ಟು ಮಂದಿಗೆ ಮಾತ್ರ ಸೋಂಕು ತಗುಲಿದೆ. 2 ಸಾವಿರ ಪರೀಕ್ಷೆಯ ವರದಿಯಲ್ಲಿ 150 ಪ್ರಕರಣ ಮಾತ್ರ ಪಾಸಿಟಿವ್ ಬಂದಿದೆ. ಸಾಮಾನ್ಯವಾಗಿ 200-300 ಪರೀಕ್ಷೆ ನಡೆಯುತ್ತಿದ್ದಾಗ 10-15 ಪಾಸಿಟಿವ್ ಬರುತ್ತಿತ್ತು. ಜಿಲ್ಲೆಯಲ್ಲಿ 1120 ಬೆಡ್‌ಗಳಲ್ಲಿ ಇನ್ನೂ 900 ಬೆಡ್‌ಗಳಷ್ಟು ಸೌಕರ್ಯವಿದೆ. ಇಬ್ಬರು ಮಾತ್ರ ಗಂಭೀರ ಪರಿಸ್ಥಿತಿಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರು ಚೇತರಿಕೆ ಕಾಣುತ್ತಿದ್ದಾರೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ

    ದ.ಕ ಎಲ್ಲ ವರದಿ ನೆಗೆಟಿವ್
    ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಂಗಳವಾರ ಬಂದಿರುವ 113 ಪ್ರಕರಣಗಳ ವರದಿ ನೆಗೆಟಿವ್ ಆಗಿದ್ದು, ಇನ್ನು 80 ಪ್ರಕರಣಗಳ ವರದಿಯಷ್ಟೇ ಬರಲು ಬಾಕಿ ಇದೆ. ಮಂಗಳವಾರ ಓರ್ವ ಗರ್ಭಿಣಿ ಸೇರಿದಂತೆ 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ನೀರುಮಾರ್ಗದ 40ರ ಮಹಿಳೆ ಮಧುಮೇಹ, ಮೂತ್ರಕೋಶದ ಸಮಸ್ಯೆ, ಕೋವಿಡ್ ಸೋಂಕಿನೊಂದಿಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಪ್ರಸ್ತುತ ಕೋವಿಡ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದಾರೆ.
    64 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ತೀವ್ರ ಉಸಿರಾಟ ತೊಂದರೆಯ 2 ಕೇಸ್‌ಗಳು ವರದಿಯಾಗಿವೆ. 23 ಮಂದಿಯನ್ನು ನಿಗಾ ವಹಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 127 ಆಗಿದ್ದು, 61 ಸಕ್ರಿಯ ಕೋವಿಡ್ ರೋಗಿಗಳಿದ್ದಾರೆ.

    ಕಾಸರಗೋಡಿನ 9 ಪಾಸಿಟಿವ್
    ಕಾಸರಗೋಡು: ಜಿಲ್ಲೆಯ ಒಂಬತ್ತು ಮಂದಿಯಲ್ಲಿ ಮಂಗಳವಾರ ಕೋವಿಡ್-19 ವೈರಸ್ ಕಾಣಿಸಿಕೊಂಡಿದೆ. ಇದೇ ವೇಳೆ ಸೋಂಕು ಪತ್ತೆಯಾದವರಲ್ಲಿ ಏಳು ಮಂದಿ ಗುಣಮುಖರಾಗಿದ್ದಾರೆ.
    ****

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts