More

    ಕರೊನಾಕ್ಕೆ ಬೆದರದವರು ಲಸಿಕೆಗೆ ಬೆಚ್ಚಿದರು!

    ಪರಶುರಾಮ ಕೆರಿ ಹಾವೇರಿ

    ಕರೊನಾ ಮಹಾಮಾರಿ ತಡೆಗಟ್ಟುವ ಉದ್ದೇಶದಿಂದ ಕೋವಿಶೀಲ್ಡ್ ನ ಮೊದಲ ಹಂತದ ಲಸಿಕಾ ಕಾರ್ಯಕ್ಕೆ ಜಿಲ್ಲೆಯಲ್ಲಿ ಕರೊನಾ ವಾರಿಯರ್ಸ್​ಗಳಿಂದಲೇ ನಿರಾಸಕ್ತಿ ಕಂಡುಬರುತ್ತಿದೆ.

    ಜಿಲ್ಲೆಯಲ್ಲಿ 8,619 ಕರೊನಾ ವಾರಿಯರ್ಸ್​ಗಳಿಗೆ ಮೊದಲ ಹಂತದಲ್ಲಿ ಜ. 16ರಿಂದ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಈವರೆಗೆ ಒಟ್ಟು 5,313 ಕರೊನಾ ವಾರಿಯರ್ಸ್​ಗಳು ಮಾತ್ರ ಲಸಿಕೆ ಪಡೆದಿದ್ದು, ಶೇ. 61ರಷ್ಟು ಸಾಧನೆಯಾಗಿದೆ. ಇನ್ನುಳಿದ ಶೇ. 39ರಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

    ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಗೆ ಆರಂಭದಿಂದಲೂ ನಿರಾಸಕ್ತಿ ವ್ಯಕ್ತವಾಗಿತ್ತು. ಮೊದಲ ದಿನ ನಿಗದಿಪಡಿಸಿದವರ ಪೈಕಿ ಶೇ. 50ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದರು. ಅದು ಮುಂದುವರಿದು ಮೊದಲ ಹಂತದಲ್ಲಿ 15 ದಿನಗಳ ಕಾಲ ಲಸಿಕೆ ನೀಡಿದರೂ ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಇರುವುದು ಲಸಿಕೆಯ ಕುರಿತು ಇರುವ ನಿರಾಸಕ್ತಿಗೆ ಸಾಕ್ಷಿಯಾಗಿದೆ. ಕರೊನಾ ನಿಮೂಲನೆಗೆ ಲಸಿಕೆ ಸಿಕ್ಕ ಸಂತಸ ಆರಂಭದಲ್ಲಿ ಎಲ್ಲೆಡೆ ಕಂಡುಬಂತು. ಆದರೂ ಕರೊನಾ ವಾರಿಯರ್ಸ್​ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಇದರ ಪರಿಣಾಮ ಇತರರ ಮೇಲು ಆಗಿದ್ದು, ನಿಗದಿತ ಸಂಖ್ಯೆಯಲ್ಲಿ ಗುರಿ ಸಾಧನೆ ಸಾಧ್ಯವಾಗಿಲ್ಲ.

    ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಶೀಲ್ಡ್ ಲಸಿಕೆ ಪಡೆದಿರುವ ಕರೊನಾ ವಾರಿಯರ್ಸ್​ಗಳ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಲಸಿಕೆ ಪಡೆದ ದಿನದಿಂದಲೆ ಅವರು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲೋ ಒಂದು ಕಡೆ ಕರೊನಾ ಲಸಿಕೆ ಪಡೆದವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವದಂತಿಯಿಂದ ಜಿಲ್ಲೆಯಲ್ಲಿಯೂ ಅನೇಕರು ಲಸಿಕೆ ಪಡೆಯಲು ಮುಂದೆ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಬ್ಯಾಡಗಿ ಬೆಸ್ಟ್, ಸವಣೂರ ಲಾಸ್ಟ್: ಮೊದಲ ಹಂತದ ಲಸಿಕೆ ಪಡೆಯಲು ಜಿಲ್ಲೆಯಲ್ಲಿ ನೋಂದಾಯಿತ 8,691 ಜನರಲ್ಲಿ ಬ್ಯಾಡಗಿ ತಾಲೂಕಿನಲ್ಲಿ ಬ್ಯಾಡಗಿ 390(ಶೇ. 80), ಹಿರೇಕೆರೂರು 1,021(ಶೇ. 79), ಹಾವೇರಿ 1,278(ಶೇ. 68), ರಾಣೆಬೆನ್ನೂರ 1,183(ಶೇ. 57), ಹಾನಗಲ್ಲ 606(ಶೇ. 53), ಶಿಗ್ಗಾಂವಿ 566(ಶೇ. 53) ಹಾಗೂ ಸವಣೂರ ತಾಲೂಕಿನಲ್ಲಿ 269(ಶೇ. 35) ಜನರಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಪಡೆದವರಲ್ಲಿ ಬ್ಯಾಡಗಿ ತಾಲೂಕು ಮೊದಲ ಸ್ಥಾನದಲ್ಲಿದ್ದರೆ, ಸವಣೂರು ಕೊನೆಯ ಸ್ಥಾನದಲ್ಲಿದೆ.

    ಮನವೊಲಿಕೆಗೆ ಮುಂದಾದ ಆರೋಗ್ಯ ಇಲಾಖೆ: ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಲಸಿಕೆ ಹಾಕಿಸಿಕೊಳ್ಳದವರನ್ನು ಸಂರ್ಪಸಿ ಜಾಗೃತಿ ಮೂಡಿಸಲು ಮುಂದಾಗಿದೆ. ಲಸಿಕೆ ಬಗೆಗಿರುವ ಆತಂಕ ದೂರ ಮಾಡಿಸಲು ಆರೋಗ್ಯ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಲಾಗುತ್ತಿದೆ. ಇದು ಪರಿಣಾಮ ಬೀರುವುದೇ ಕಾದು ನೋಡಬೇಕಿದೆ.

    ಇಂದಿನಿಂದ 2ನೇ ಹಂತ: ಫೆ. 9ರಿಂದ ಎರಡನೇ ಹಂತದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ. ಮೊದಲ ಹಂತದಲ್ಲಿ ಲಸಿಕೆ ಪಡೆದವರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ಎಲ್ಲರೂ ಆರೋಗ್ಯವಾಗಿದ್ದು, ಲಸಿಕೆ ಪಡೆದ ದಿನದಿಂದಲೇ ಅವರು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಎರಡನೇ ಡೋಸ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.

    ಲಸಿಕೆ ಪಡೆಯುವುದು ಕಡ್ಡಾಯವೇನಿಲ್ಲ. ಅನ್ಯ ರೀತಿಯ ಆರೋಗ್ಯ ಸಮಸ್ಯೆಯಿರುವವರು ಲಸಿಕೆ ಪಡೆದಿಲ್ಲ. ಬಹುತೇಕರು ಆರೋಗ್ಯ ಕಾರ್ಯಕರ್ತರೆ ಆಗಿರುವುದರಿಂದ ಅವರ ಆರೋಗ್ಯದ ಕಾಳಜಿಯೂ ಅವರಿಗಿರುತ್ತದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಾಗಿಲ್ಲ. | ಡಾ. ಎಂ. ಜಯಾನಂದ ಪ್ರಭಾರ ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts