More

    ಕರಾವಳಿ ಭಾಗದಲ್ಲಿ ಹೆಚ್ಚಿನ ನಿಗಾ

    ಶಿರಸಿ: ರಾಜ್ಯದ ಆಂತರಿಕ ಭದ್ರತೆಗೆ ಸಮಸ್ಯೆ ತಂದೊಡ್ಡುವ ಕರಾವಳಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸುತ್ತಿದ್ದು, ಆಧುನಿಕ ತಂತ್ರಜ್ಞಾನಗಳ ಮೂಲಕ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕುವ ಕಾರ್ಯ ಮಾಡುತ್ತಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ಹೇಳಿದರು.

    ಖಾಸಗಿ ಕಾರ್ಯಕ್ರಮದ ನಿಮಿತ್ತ ಸೋಮವಾರ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಆಂತರಿಕ ವಿಷಯಗಳು ಸಾಕಷ್ಟು ಬಾರಿ ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳುವುದಿಲ್ಲ. ಪೊಲೀಸರು ನಿರಂತರವಾಗಿ ಜನ ಸಂಪರ್ಕದಲ್ಲಿರುವ ಕಾರಣ ವಿಷಯಗಳ ಸಂಗ್ರಹ ಆಗುತ್ತಿದೆ. ಇದರಿಂದ ಸಮಾಜಕ್ಕೆ ಸಮಸ್ಯೆ ತಂದೊಡುವ ಯಾವುದೇ ಕೃತ್ಯಗಳು ಹೆಚ್ಚಾಗಿ ನಡೆಯದಂತೆ ತಡೆಯಲಾಗುತ್ತಿದೆ. ಸಾರ್ವಜನಿಕ ಮಾಹಿತಿ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆಂತರಿಕ ಭದ್ರತೆಗೆ ಚ್ಯುತಿ ಬರದಂತೆ ವಿಭಾಗ ಕಾರ್ಯನಿರ್ವಹಿಸುತ್ತಿದೆ ಎಂದರು.

    ರಾಜ್ಯದಲ್ಲಿ 370 ಕಿಮೀ ಉದ್ದದಲ್ಲಿ ಕರಾವಳಿ ವ್ಯಾಪಿಸಿದೆ. ಇದರಿಂದ ಇಲಾಖೆಯೇ ಮುಂದಾಗಿ ಕರಾವಳಿ ಕಾವಲು ಪಡೆಗಳಿಗೆ ಸಾಕಷ್ಟು ನೂತನ ಬೋಟ್​ಗಳು, ಆಧುನಿಕ ಉಪಕರಣ ನೀಡಿದೆ. ಅಪರಿಚಿತರು ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಎಂಬುದು ಇಲಾಖೆಗೆ ತಿಳಿಯುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕರಾವಳಿ ಕಾವಲಿಗೆ ಇರುವ ಸಿಬ್ಬಂದಿಗೆ ನೀರಲ್ಲಿ ಅತ್ಯುನ್ನತವಾಗಿ ಕಾರ್ಯನಿರ್ವಹಿಸಲು ಅಗತ್ಯ ತರಬೇತಿ ಕೂಡ ನೀಡುತ್ತಿದ್ದೇವೆ ಎಂದು ಹೇಳಿದರು.

    ಇತೀಚಿನ ತಂತ್ರಜ್ಞಾನ ಲೋಕದಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿದ್ದು, ಅದನ್ನು ತಡೆಯಲು ಹಾಗೂ ಪತ್ತೆಗೆ ಇಲಾಖೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಭಯೋತ್ಪಾದಕರು, ದುಷ್ಟಶಕ್ತಿಗಳು ಬಳಸುವ ತಾಂತ್ರಿಕತೆ ಮೀರಿ ನಮ್ಮಲ್ಲಿನ ತಾಂತ್ರಿಕತೆಯಿದೆ. ಅದರ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದರು.

    ದೇವಿಯ ದರ್ಶನ: ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಡಿಎಸ್​ಪಿ ರವಿ ನಾಯ್ಕ, ಸಿಪಿಐ ಪ್ರದೀಪ ಬಿ.ಯು. ಇದ್ದರು. ದೇವಾಲಯದ ವತಿಯಿಂದ ಸಂಪ್ರದಾಯದಂತೆ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿ ಶಾಂತಾರಾಮ ಹೆಗಡೆ ಸನ್ಮಾನಿಸಿದರು. ಇದಕ್ಕೂ ಪೂರ್ವ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಮಠದ ವ್ಯವಸ್ಥಾಪಕ ಮಾಣಿಕ್ಯ ಉಪಾಧ್ಯಾಯ ಅವರು ಭಾಸ್ಕರ ರಾವ್ ಅವರಿಗೆ ಮಠದ ಪ್ರಸಾದವನ್ನು ಕಾಣಿಕೆ ರೂಪದಲ್ಲಿ ನೀಡಿ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts