More

    ಕರಾಳ ಮುಖ ಪರಿಚಯಿಸಿದ ಕರೊನಾ


    ವರ್ಷವನ್ನು ಆತಂಕದಿಂದಲೇ ಕಳೆದ ಕ್ರೀಡಾಪಟುಗಳು
    ನಡೆಯದ ಬಹುರೂಪಿ ನಾಟಕೋತ್ಸವ


    ಅವಿನಾಶ್ ಜೈನಹಳ್ಳಿ ಮೈಸೂರು

    ಜಿಲ್ಲೆಯ ಕ್ರೀಡಾಪಟುಗಳು 2021ನೇ ವರ್ಷವನ್ನು ಕೂಡ ಪೂರ್ಣ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆತಂಕದಲ್ಲಿಯೇ ಕಳೆದರು. ಕೋವಿಡ್-2 ನೇ ಅಲೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಈ ವರ್ಷವೂ ಕ್ರೀಡಾಪಟುಗಳು ಎರಡು ತಿಂಗಳಿಗೂ ಹೆಚ್ಚು ಕಾಲ ಗೃಹಬಂಧನದಲ್ಲಿದ್ದರು. ಕರೊನಾ ಆರ್ಭಟದಿಂದ 2020ರಂತೆಯೇ 2021ರಂದು ಕೂಡ ಪ್ರತಿಭಾನ್ವಿತ ಕ್ರೀಡಾಪಟುಗಳು ತಮ್ಮ ಕ್ರೀಡಾ ಭವಿಷ್ಯವನ್ನು ಮರೆಯುವಂತಾಯಿತು.


    ಇಡೀ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆ ಬಹುತೇಕ ಕಾಲ ಮಂಕಾಗಿತ್ತು. ಕ್ರೀಡಾಪಟುಗಳು ಅಭ್ಯಾಸದಿಂದ ತಿಂಗಳುಗಟ್ಟಲೆ ದೂರ ಉಳಿಯಬೇಕಾಯಿತು. ಪ್ರತಿಷ್ಠಿತ ದಸರಾ ಕ್ರೀಡಾಕೂಟ ಈ ಬಾರಿಯು ನಡೆಯದೆ ನಿರಾಸೆ ಮೂಡಿಸಿತು. ವರ್ಷದ ಕಡೆಯಲ್ಲಿ ಕೇವಲ ಅಖಲಿ ಭಾರತ ಅಂತರ ವಿವಿ ಹಾಗೂ ದಕ್ಷಿಣ ವಲಯ ಅಂತರ ವಿವಿ ಕ್ರೀಡಾಕೂಟಗಳು ನಡೆದವು. ಸದರಿ ಕ್ರೀಡಾಕೂಟಗಳಿಗೆ ಮೈಸೂರು ವಿವಿ ತಂಡ ಭಾಗವಹಿಸಿತು. ಉಳಿದಂತೆ ವಿಟಿಯು ಮೈಸೂರು ವಲಯದ ಕೆಲ ಕ್ರೀಡಾಕೂಟಗಳು ವರ್ಷದ ಕಡೆಯಲ್ಲಿ ಜರುಗಿದವು.


    ಈ ವರ್ಷ ನಡೆಯದ ಬಹುರೂಪಿ:
    ಕರೊನಾ ಆರ್ಭಟದಿಂದಾಗಿ ಸಾಂಸ್ಕೃತಿ ಲೋಕಕ್ಕೆ ಅಪಾರ ಹಿನ್ನಡೆಯಾಗಿದ್ದು, 2021ನೇ ವರ್ಷದಲ್ಲಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಮೊದಲಿನಂತೆ ಗರಿಗೆದರಲಿಲ್ಲ. ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ನಡೆಯಲೇ ಇಲ್ಲ. ವರ್ಷದ ಆರಂಭದಲ್ಲೇ ರಂಗಾಯಣದ ವತಿಯಿಂದ ಬಹುರೂಪಿ ನಾಟಕೋತ್ಸವವನ್ನು ಆಯೋಜಿಸಬೇಕಿತ್ತು. ಬಳಿಕ ವರ್ಷದ ಕೊನೆಯಲ್ಲಿ ಡಿ.10 ರಿಂದ 19ರವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2021’ ಆಯೋಜಿಸಲು ತೀರ್ಮಾನಿಸಲಾಗಿತ್ತು.


    ಈ ಬಾರಿಯ ನಾಟಕೋತ್ಸವವನ್ನು ತಾಯಿ ಶೀರ್ಷಿಕೆಯಲ್ಲಿ ಆಯೋಜಿಸಿ ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಆಶಯದೊಂದಿಗೆ ಪೋಸ್ಟರನ್ನು ವಿಶೇಷವಾಗಿ ಬಿಡುಗಡೆ ಮಾಡಲಾಗಿತ್ತು. ರಂಗಾಯಣದ ಮಹಿಳಾ ಕಲಾವಿದರು ಸಾರೋಟಿನ ಮೇಲೆ ಬಹುರೂಪಿಯ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಿದ್ದರು. ಈ ಬಾರಿ ವಿಶೇಷವಾಗಿ ನಾಟಕಗಳ ಜತೆಗೆ ಜಾನಪದ ಕಲೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ವಿವಿಧ ಜಿಲ್ಲೆಗಳ ಜಾನಪದ ಕಲಾ ತಂಡಗಳು ಬಹುರೂಪಿಯಲ್ಲಿ ಭಾಗಿಯಾಗಬೇಕಿತ್ತು. ಆದರೆ, ಮತ್ತೆ ಕರೊನಾ ಹೆಚ್ಚಾದ ಕಾರಣ ಬಹುರೂಪಿ ಉತ್ಸವವನ್ನು ಮುಂದೂಡಲಾಗಿದೆ. ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಉತ್ಸವ ಆಚರಿಸಿದ ಕಾರಣ ಎಲ್ಲ ಕಲಾವಿದರಿಗೆ ಪ್ರೋತ್ಸಾಹ ಸಿಗದಂತಾಯಿತು.


    ರಂಗಾಯಣದ ವಿವಾದ !
    ಬಹುರೂಪಿ ಉದ್ಘಾಟನೆಗೆ ನಟಿ ಮಾಳವಿಕಾ ಅವಿನಾಶ್ ಹಾಗೂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ಸಮಾರೋಪ ಕಾರ್ಯಕ್ರಮಕ್ಕೆ ಚಿಂತಕ ಚಕ್ರವರ್ತಿ ಸೂಲೆಬೆಲೆ ಅವರನ್ನು ಆಹ್ವಾನಿಸಿದ್ದು ವಿವಾದಕ್ಕೆ ಕಾರಣವಾಯಿತು. ಇವರನ್ನು ಯಾವುದೇ ಕಾರಣಕ್ಕೂ ಬಹುರೂಪಿ ನಾಟಕೋತ್ಸವಕ್ಕೆ ಆಹ್ವಾನಿಸಬಾರದು ಎಂದು ರಂಗಾಯಣದ ಮಾಜಿ ನಿರ್ದೇಶಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧವೂ ಪ್ರತಿಭಟನೆ ನಡೆಸಿದರು. ಅಡ್ಡಂಡ ಕಾರ್ಯಪ್ಪರನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಈ ವೇಳೆ ಅಡ್ಡಂಡ ಕಾರ್ಯಪ್ಪ ಪರವೂ ಅನೇಕರು ಪ್ರತಿಭಟನೆ ನಡೆಸಿದರು. ಒಟ್ಟಿನಲ್ಲಿ ಈ ವರ್ಷ ಬಹುರೂಪಿ ನಡೆಯದಿದ್ದರೂ ವಿವಾದವಂತೂ ಜೋರಾಗಿತ್ತು.

    ಸಿಎಫ್‌ಟಿಆರ್‌ಐ ನಿರ್ದೇಶಕರಾಗಿ ಡಾ.ಶ್ರೀದೇವಿ ನೇಮಕ
    ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ಮೊದಲ ಮಹಿಳಾ ನಿರ್ದೇಶಕಿಯಾಗಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕವಾಗಿದ್ದು ಈ ವರ್ಷದ ವಿಶೇಷ. ಡಾ.ಕೆ.ಎಸ್.ಎಂ.ಎಸ್.ರಾಘವರಾವ್ ಅವರ ನಿವೃತ್ತಿಯಿಂದ ಸಿಎಫ್‌ಟಿಆರ್‌ಐ ನಿರ್ದೇಶಕ ಹುದ್ದೆ ತೆರವಾಗಿತ್ತು. ನ್ಯಾಷನಲ್ ಏರೋನಾಟಿಕ್ಸ್ ಲ್ಯಾಬೋರೇಟರಿ (ಎನ್‌ಎಎಲ್) ನಿರ್ದೇಶಕ ಡಾ.ಜೀತೇಂದ್ರ ಜಾಧಾವ್ ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಸಂಸ್ಥೆಯ ಪ್ರೋಟಿನ್ ಕೆಮಿಸ್ಟ್ರಿ ಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ಮತ್ತು ಹಿರಿಯ ವಿಜ್ಞಾನಿ ಶ್ರೀದೇವಿ ಅನ್ನಪೂರ್ಣ ಸಿಂಗ್ ನಿರ್ದೇಶಕರಾಗಿ ನೇಮಕಗೊಂಡರು.

    ‘ಪರ್ವ’ ನೋಡಿದ ಸಂಭ್ರಮ
    ಈ ವರ್ಷ ಕಲಾವಿದರು ಮತ್ತು ಕಲಾಸಕ್ತರಿಗೆ ಅನೇಕ ನಿರಾಸೆ ಉಂಟು ಮಾಡಿದ್ದರೂ, ಪರ್ವ ನಾಟಕ ಎಲ್ಲದಕ್ಕೂ ಕೊಂಚ ಮದ್ದು ನೀಡಿತು. ರಂಗಾಯಣವು ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಪ್ರಸ್ತುತಪಡಿಸುತ್ತಿರುವ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ರಚಿತ ಕಾದಂಬರಿ ‘ಪರ್ವ’ ನಾಟಕ ಈ ವರ್ಷದ ವಿಶೇಷ.
    ನಾಟಕವು ಮಾರ್ಚ್ 12 ರಂದು ಕಲಾಮಂದಿರದಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ನಾಟಕ ಪ್ರದರ್ಶನಕ್ಕೆ ಡಾ.ಎಸ್.ಎಲ್.ಭೈರಪ್ಪ ಚಾಲನೆ ನೀಡಿದರು. ಬಳಿಕ 13 ಮತ್ತು 14 ರಂದು ಕಲಾಮಂದಿದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರ ವರೆಗೆ ನಾಟಕ ಪ್ರದರ್ಶನಗೊಂಡಿತ್ತು.


    ಮಾರ್ಚ್ 25 ರಿಂದ ಮೇ 30 ರವರೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಸಂಚಿಕೆ ರೂಪದಲ್ಲಿ ನಾಟಕವನ್ನು ಪ್ರದರ್ಶನ ಮಾಡಿದ್ದು ಮತ್ತೊಂದು ವಿಶೇಷ. ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಸಂಜೆ 6.30ಕ್ಕೆ ‘ಪರ್ವ’ ಮಹಾ ರಂಗಪ್ರಸ್ತುತಿಯ ಒಂದೊಂದು ಸಂಚಿಕೆಗಳು ಪ್ರದರ್ಶನಗೊಂಡಿತ್ತು. ಸದರಿ ಸಂಚಿಕೆಗಳನ್ನು ‘ಆದಿ ಪರ್ವ’, ‘ನಿಯೋಗ ಪರ್ವ’, ‘ಯುದ್ಧ ಪರ್ವ’ ಎಂದು ಹೆಸರಿಡಲಾಗಿತ್ತು. ಪ್ರತಿ ಭಾನುವಾರ ‘ಪರ್ವ’ ಮಹಾ ರಂಗಪ್ರಸ್ತುತಿಯ ಪೂರ್ಣ ಪ್ರದರ್ಶನ ನಡೆಯುತ್ತಿತ್ತು.


    ಸುತ್ತೂರು ಜಾತ್ರೆ
    ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜ.11 ರಂದು ಆಯೋಜಿಸಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ 1061ನೇ ಜಯಂತಿ ಮಹೋತ್ಸವಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿವಿಧ ಮಠಾಧೀಶರು, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಎನ್.ಮಹೇಶ್, ನಿರಂಜನ್ ಕುಮಾರ್ ಇತರರಿದ್ದರು.*ಸಾಮೂಹಿಕ ವಿವಾಹ-95
    ಸುತ್ತೂರು ಶ್ರೀ ಕ್ಷೇತ್ರದಲ್ಲಿ ಫೆ.9 ರಂದು ಆಯೋಜಿಸಿದ್ದ ‘ಸಾಮೂಹಿಕ ವಿವಾಹ-95’ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು.

    ಸಾಮೂಹಿಕ ಸೂರ್ಯ ನಮಸ್ಕಾರ
    ರಥಸಪ್ತಮಿ ಪ್ರಯುಕ್ತ ಮೈಸೂರು ಯೋಗ ಒಕ್ಕೂಟ, ಜಿಎಸ್‌ಎಸ್ ಯೋಗ, ಎಸ್‌ಪಿವೈಎಸ್‌ಎಸ್, ಪತಂಜಲಿ ಯೋಗ, ಯೋಗ ಸ್ಪೋರ್ಟ್ಸ್ ಫೌಂಡೇಷನ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ನಗರದ ಅರಮನೆ ಆವರಣದಲ್ಲಿ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು. ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ 400 ಯೋಗ ಪಟುಗಳು ಪಾಲ್ಗೊಂಡಿದ್ದರು.

    ಯೋಗ ದಿನ
    ಕರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಜೂನ್ 21 ರಂದು ಯೋಗ ದಿನಾಚರಣೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಬದಲಾಗಿ, ಜನರು ತಮ್ಮ ಮನೆಗಳ ತಾರಸಿಯಲ್ಲಿ ಯೋಗ ಪ್ರದರ್ಶನ ಮಾಡಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್, ಯೋಗ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಯೋಗ ದಿನೋತ್ಸವ ಸಮಿತಿ ಕರೆ ನೀಡಿತ್ತು. ಅಂತೆಯೇ ಸಾರ್ವಜನಿಕರು ಕುಟುಂಬದೊಂದಿಗೆ ಮನೆಗಳ ತಾರಸಿ, ಬಾಲ್ಕನಿ, ಮನೆ ಮುಂಭಾಗದ ಆವರಣ ಅಥವಾ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸೂಕ್ತ ಜಾಗದಲ್ಲಿ ಯೋಗಾಸನ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ್ದರು.
    ತಮ್ಮ ಮನೆಗಳಲ್ಲೇ ಯೋಗ ಪ್ರದರ್ಶನ ಮಾಡಿದ ಯೋಗಪಟುಗಳಿಗೆ ಕುವೆಂಪುನಗರದ ಜಿಎಸ್‌ಎಸ್ ಯೋಗ ಕೇಂದ್ರ ಸಭಾಂಗಣದಿಂದ ಫೇಸ್‌ಬುಕ್ ಲೈವ್ ಮೂಲಕ ಯೋಗ ಗುರುಗಳು ಮಾರ್ಗದರ್ಶನ ನೀಡಿದರು. ಈ ಬಾರಿ ‘ಮನೆಯಲ್ಲೇ ಇರಿ, ಯೋಗದೊಂದಿಗೆ ಇರಿ’ ಎಂಬ ಘೋಷವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಗಿತ್ತು. ಯೋಗ ಪ್ರದರ್ಶನದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಯೋಗ ಪಟುಗಳು ಲೈವ್ ಸ್ಟ್ರೀಮ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts