More

    ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು

    ಶ್ರೀರಂಗಪಟ್ಟಣ: ತಾಲೂಕಿನ ಗಾಮನಹಳ್ಳಿ ಹಾಗೂ ದೇವರಗುಡ್ಡಕೊಪ್ಪಲು ಗ್ರಾಮಗಳ ನಡುವಿನ ಕಬ್ಬಿನ ಗದ್ದೆಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.
    ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಹಾಗೂ ಮುಟ್ಟನಹಳ್ಳಿ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಮರಿಗಳೊಂದಿಗೆ 9 ಕಾಡಾನೆಗಳು, ಮಂಡ್ಯ ತಾಲೂಕಿನ ಲೋಕಸರ ಗ್ರಾಮ ಮೂಲಕ ಬುಧವಾರ ಮುಂಜಾನೆ ಶ್ರೀರಂಗಪಟ್ಟಣ ತಾಲೂಕಿನ ಗಡಿಗ್ರಾಮ ಗಾಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕಬ್ಬಿನ ಗದ್ದೆಗಳಲ್ಲಿ ಸಂಚರಿಸಿ ಕಬ್ಬನ್ನು ತಿಂದು ಹಾನಿಮಾಡಿವೆ.
    ಗಾಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದಾರೆ. ಈ ವೇಳೆ ಗಾಬರಿಗೊಂಡ ಆನೆಗಳು ಗಾಮನಹಳ್ಳಿ ಗ್ರಾಮದ ಕೈಮುರಿ ಸಿದ್ದಯ್ಯ, ಕಾಳಯ್ಯ ಹಾಗೂ ಬಸವಯ್ಯ ಎಂಬುವರ ಜಮೀನುಗಳಲ್ಲಿ ಅಡ್ಡಾದಿಡ್ಡಿ ಓಡಾಡಿ ಕಬ್ಬು ಬೆಳೆ ನಾಶ ಮಾಡಿವೆ.
    ವಿಷಯ ತಿಳಿದು ಅರಣ್ಯ ಇಲಾಖೆಯ ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಹಾಗೂ ಹುಣಸೂರಿನ ವಲಯಗಳ ಅಧಿಕಾರಿಗಳು, ಎಲಿಫ್ಯಾಂಟ್ ಟಾಸ್ಕ್ ಫೊರ್ಸ್‌ನ ಒಟ್ಟು 35 ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬೀಡು ಬಿಟ್ಟಿರುವ ಆನೆಗಳ ಮೇಲೆ ನಿಗಾ ವಹಿಸಿದ್ದಾರೆ. ಜಿಲ್ಲಾ ವಿಭಾಗೀಯ ಅರಣ್ಯಾಧಿಕಾರಿ ಋತ್ರನ್, ಶ್ರೀರಂಗಪಟ್ಟಣ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಅನಿತಾ, ಉಪ ವಲಯ ಅರಣ್ಯಾಧಿಕಾರಿ ಆನಂದೇಗೌಡ ಇತರರು ಇದ್ದರು.

    ಫೋಟೋ ತೆಗೆಯಲು ಮುಗಿಬಿದ್ದ ಜನರು: ಕಾಡಾನೆಗಳ ಹಿಂಡು ಆಗಮಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಗುಂಪು ಗುಂಪಾಗಿ ಆಗಮಿಸಿದ ಜನರು, ಕಾಡಾನೆಗಳಿರುವ ಸ್ಥಳದಲ್ಲಿ ಜೋರಾಗಿ ಚೀರಾಡಿ ಗಾಬರಿಗೊಳಿಸಿದ್ದಾರೆ. ಜತೆಗೆ ಅವುಗಳ ಚಿತ್ರ ಸೆರೆ ಹಿಡಿಯಲು ಮುಂದಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಕೆರೆ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರು ಮತ್ತು ಜನರಿಗೆ ತಿಳಿಹೇಳಿ ಕಾಡಾನೆ ಬೀಡು ಬಿಟ್ಟಿರುವ ಸ್ಥಳದಿಂದ ದೂರ ಕಳುಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts