More

    ಕಬನೂರ ಗ್ರಾಪಂನಲ್ಲಿ ಗೋಲ್‍ಮಾಲ್

    ಶಿಗ್ಗಾಂವಿ: ತಾಲೂಕಿನ ಕಬನೂರ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆಯಲ್ಲಿ ಲಕ್ಷಾಂತರ ರೂ. ಹಣ ದುರುಪಯೋಗವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    2018-19ನೇ ಸಾಲಿನ 14ನೇ ಹಣಕಾಸು ಯೋಜನೆಯ ಮೊದಲ ಮತ್ತು ಎರಡನೇ ಕಂತಿನ ಸುಮಾರು 15.76 ಲಕ್ಷ ರೂ. ಹಾಗೂ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯ ಸುಮಾರು 12 ಲಕ್ಷ ರೂ. ಸೇರಿ ಒಟ್ಟು 27.76 ಲಕ್ಷ ರೂ. ಗೋಲ್‍ಮಾಲ್ ನಡೆದಿದೆ. ಗ್ರಾಮಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವನ್ನು ಯಾವುದೇ ಕಾಮಗಾರಿ ಮಾಡದೇ ನಕಲಿ ಬಿಲ್​ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಖರ್ಚು ಹಾಕಲಾಗಿದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಶುಸಾಬ ಕಾಳಂಗಿ ದೂರಿದ್ದಾರೆ.

    ಕಬನೂರ ಗ್ರಾಮದ ಅಭಿವೃದ್ಧಿ ಮತ್ತು ಸ್ವಚ್ಛತೆಯ ಉದ್ದೇಶದಿಂದ 2018-19ನೇ ಸಾಲಿನ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಕ್ರಿಯಾ ಯೋಜನೆ ಪ್ರಕಾರ ಗ್ರಾಮದ ಸಹದೇವಪ್ಪ ತಳವಾರ ಅವರ ಮನೆಯಿಂದ ಚನ್ನಬಸಪ್ಪ ಹರಿಜನ ಅವರ ಮನೆಯವರೆಗೆ ಗಟಾರ್ ದುರಸ್ತಿ ಮಾಡಲು 45 ಸಾವಿರ ರೂ. ಹಾಗೂ ಗ್ರಾಮದ ಫಕೀರಪ್ಪ ಹರಿಜನ ಅವರ ಮನೆಯಿಂದ ಗಂಗಮ್ಮ ಹರಿಜನ ಅವರ ಮನೆಯವರೆಗೆ ಗಟಾರ್ ಮೇಲೆ ಸ್ಲಾಬ್ ನಿರ್ಮಾಣ ಮಾಡುವ ಕಾಮಗಾರಿಗೆ 35 ಸಾವಿರ ರೂ. ಮತ್ತು ಗ್ರಾಮದ ಪ್ರೇಮವ್ವ ಅಮರಗೋಳ ಅವರ ಮನೆಯಿಂದ ಗುರಪ್ಪ ಶೆಟ್ಟಪ್ಪನವರ ಅವರ ಮನೆಯವರೆಗೆ ಪೈಪ್​ಲೈನ್ ಅಳವಡಿಸುವ ಕಾಮಗಾರಿಗೆ 20 ಸಾವಿರ ರೂ. ಸೇರಿ ಲಕ್ಷಾಂತರ ರೂ. ವೆಚ್ಚದ ಕಾಮಗಾರಿಗಳು ಕೇವಲ ಖರ್ಚು- ವೆಚ್ಚದ ಪುಸ್ತಕದಲ್ಲಿ ಮಾತ್ರ ಇದೆ. ವಾಸ್ತವದಲ್ಲಿ ಕಾಮಗಾರಿ ಕೈಗೊಳ್ಳದಿರುವುದು ಅವ್ಯವಹಾರಕ್ಕೆ ಕನ್ನಡಿಯಾಗಿದೆ ಎಂದು ಗ್ರಾಮಸ್ಥರಾದ ವಲಮಪ್ಪ ಸೊರಟೂರ, ಮಂಜುನಾಥ ಪುರಂತಿ, ಅಲ್ಲಾಸಾಬ ನದಾಫ, ಗೌಸುಸಾಬ ಮುಲ್ಲಾನವರ ಆರೋಪಿಸಿದ್ದಾರೆ.

    ಈಗಾಗಲೇ ಸರ್ವಶಿಕ್ಷಾ ಅಭಿಯಾನ ಯೋಜನೆಯಡಿ ಶಾಲಾ ಮೈದಾನ ಸಮತಟ್ಟು ಕಾಮಗಾರಿ ಕೈಗೊಂಡಿದ್ದರೂ, ಅದೇ ಕಾಮಗಾರಿಗೆ ನರೇಗಾ ಯೋಜನೆಯಡಿ 10 ಲಕ್ಷ ರೂ. ಖರ್ಚು ಹಾಕಲಾಗಿದೆ ಎಂದು ಸುರಪಗಟ್ಟಿ ಗ್ರಾಮದ ಎಸ್​ಡಿಎಂಸಿ ಮಾಜಿ ಅಧ್ಯಕ್ಷ ಭರಮಪ್ಪ ಸೊರಟೂರ ಆರೋಪಿಸಿದ್ದಾರೆ.

    ಧ್ವಜ ಕಂಬ ನಿರ್ವಣ, ಪಂಪ್ ಮತ್ತು ಮೋಟರ್ ರಿಪೇರಿ, ವಿದ್ಯುತ್ ದೀಪ ಖರೀದಿ, ಇಲೆಕ್ಟ್ರಿಕಲ್ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಬೇಕಾಬಿಟ್ಟಿಯಾಗಿ ಖರ್ಚು ಹಾಕಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ಇಲಾಖೆಯಿಂದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

    ಉಡಾಫೆಯ ಉತ್ತರ

    ಗ್ರಾಮಸ್ಥರ ಈ ಆರೋಪ ಕುರಿತು ಪ್ರತಿಕ್ರಿಯೆ ತಿಳಿದುಕೊಳ್ಳಲು ‘ವಿಜಯವಾಣಿ’ಯು ದೂರವಾಣಿ ಮುಖಾಂತರ ಕಬನೂರ ಗ್ರಾ.ಪಂ. ಪಿಡಿಒ ರಾಮಣ್ಣ ವಾಲಿಕಾರ ಅವರನ್ನು ಸಂರ್ಪಸಿದಾಗ, ‘ನಾಳೆ ನೀವು ಕಚೇರಿಗೆ ಬಂದು ಅರ್ಜಿ ಸಲ್ಲಿಸಿ. ನಂತರ ಪರಿಶೀಲಿಸಿ ನಿಮಗೆ ಬೇಕಾದ ಮಾಹಿತಿ ನೀಡುತ್ತೇನೆ. ಫೋನ್ ಮುಖಾಂತರ ಮಾಹಿತಿ ಕೊಡಲು ಆಗುವುದಿಲ್ಲ’ ಎಂದು ಉಡಾಫೆಯಿಂದ ಉತ್ತರಿಸಿದರು.

    ಕಬನೂರ ಗ್ರಾ.ಪಂ.ನ 14ನೇ ಹಣಕಾಸಿನ ಹಣ ದುರುಪಯೋಗ ಕುರಿತು ದೂರು ಬಂದಿದೆ. ಈ ಕುರಿತು ಎರಡು ವರ್ಷದ ಬ್ಯಾಂಕ್ ಖಾತೆ ಮತ್ತು ದಾಖಲಾತಿ ಒಪ್ಪಿಸುವಂತೆ ಖುದ್ದಾಗಿ ಸೂಚಿಸಿದ್ದೇನೆ. ಗ್ರಾ.ಪಂ. ನೋಡಲ್ ಅಧಿಕಾರಿಗೆ ದೂರು ಕುರಿತು ಪರಿಶೀಲನೆ ನಡೆಸುವಂತೆ ಆದೇಶ ಮಾಡಿದ್ದೇನೆ.
    | ಪ್ರಶಾಂತ ತುರಕಾಣಿ ತಾ.ಪಂ. ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts