More

    ಕಬಡ್ಡಿಯಲ್ಲಿ ಗಣೇಶ ರೈಡಿಂಗ್!

    ಓರ್ವಿಲ್ ಫರ್ನಾಂಡೀಸ್ ಹಳಿಯಾಳ

    ಕುಸ್ತಿ, ವಾಲಿಬಾಲ್, ಟೆನಿಸ್ ಕ್ರೀಡೆಯಲ್ಲಿ ಸಾಧನೆಗೈದಿರುವ ತಾಲೂಕಿನ ಕ್ರೀಡಾಪಟುಗಳು ಈಗ ಕಬಡ್ಡಿ ಕ್ರೀಡೆಯಲ್ಲೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ತಾಲೂಕಿನ ಗುಂಡೊಳ್ಳಿ ಗ್ರಾಮದ ಕ್ರೀಡಾ ಪ್ರತಿಭೆ ಗಣೇಶ ತಾನಾಜಿ ಮಿರಾಶಿ ಕಬಡ್ಡಿ ಜೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆಡುವ ಮೂಲಕ ಹಳಿಯಾಳ ತಾಲೂಕಿನ ಗರಿಮೆಯನ್ನು ಹೆಚ್ಚಿಸಿದ್ದಾರೆ.

    ಗ್ರಾಮಾಂತರ ಭಾಗದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು, ತಾನು ಪ್ರತಿನಿಧಿಸುತ್ತಿದ್ದ ಕಾಳಿಕಾ ಕಬಡ್ಡಿ ಟೀಮ್ ಗುಂಡೊಳ್ಳಿಗೆ ಪ್ರಶಸ್ತಿಗಳನ್ನು ಒಂದಾದ ಮೇಲೊಂದರಂತೆ ತಂದ ಆಟಗಾರ ಗಣೇಶ ತಾನಾಜಿ ಮಿರಾಶಿ. ಈಗ ಈತನ ಸಾಧನೆ ಬಗ್ಗೆ ಇಡೀ ಗುಂಡೊಳ್ಳಿ ಗ್ರಾಮಕ್ಕೆ ಅಭಿಮಾನಪಡುವಂತಾಗಿದೆ.

    ತಮಿಳು ಟೈಟನ್ಸ್​ಗೆ ಆಯ್ಕೆ: ಪ್ರಸ್ತುತ ತಮಿಳು ಟೈಟನ್ಸ್ ಪರ ಆಡುತ್ತಿರುವ ಗಣೇಶ, ಬಿಡುವು ಮಾಡಿಕೊಂಡು ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮ ಹಾಗೂ ತಾಲೂಕಿನ ಉತ್ಸಾಹಿ ಕಬಡ್ಡಿ ಪಟುಗಳನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸಲು ಪ್ರಯತ್ನ ಆರಂಭಿಸಿರುವ ಗಣೇಶ ‘ವಿಜಯವಾಣಿ’ ಜತೆ ತಮ್ಮ ಸಾಧನೆಯ ಹಾದಿ ಕುರಿತು ಮಾತನಾಡಿದರು.

    ಈ ವರ್ಷ ಮೈಸೂರಿನಲ್ಲಿ ಏರ್ಪಡಿಸಿದ್ದ 58 ಮತ್ತು 67 ಕೆ.ಜಿ. ತೂಕದ ವಿಭಾಗದ ಕಬಡ್ಡಿ ಆಯ್ಕೆ ಪ್ರಕ್ರಿಯೆಯಲ್ಲಿ ನನ್ನ ರೈಡಿಂಗ್ ಗಮನಿಸಿದ ಆಯ್ಕೆಗಾರರು 58 ಕೆ.ಜಿ. ವಿಭಾಗದಲ್ಲಿ ಆಯ್ಕೆ ಮಾಡಿದರು. ಬಳಿಕ ನನ್ನ ವಿಶಿಷ್ಟ ರೈಡಿಂಗ್ ಗಮನಿಸಿದ ತಮಿಳುನಾಡು ಟೈಟನ್ಸ್ ತಂಡದವರು ನನ್ನನ್ನು ತಮ್ಮ ಟೀಮ್ ರೈಡರ್​ರನ್ನಾಗಿ ಸೇರಿಸಿಕೊಂಡಿದ್ದಾರೆ ಎಂದರು.

    ಬಡಕುಟುಂಬದಲ್ಲಿ ಅರಳಿದ ಪ್ರತಿಭೆ
    ಗಣೇಶ ಮಿರಾಶಿ ಅವರದು ಬಡ ಕುಟುಂಬ. ಮನೆಯಲ್ಲಿ ತಂದೆ, ತಾಯಿ, ಅಕ್ಕ, ಅಜ್ಜಿ ಇದ್ದಾರೆ. ಎರಡು ಎಕರೆ ಜಮೀನಿನಲ್ಲಿ ಕೃಷಿ ಬೇಸಾಯ ಮಾಡುತ್ತಿರುವ ಗಣೇಶನ ತಂದೆ ತಾನಾಜಿ ಮಗನಿಗೆ ಕಲಿಯಲು ಮತ್ತು ಕಬಡ್ಡಿ ಆಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಪಟ್ಟಣದ ಕಾರ್ವೆಲ್ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಶಿಕ್ಷಣ ಪಡೆದ ಗಣೇಶ, ಪ್ರಸ್ತುತ ಹವಗಿ ಪದವಿ ಮಹಾವಿದ್ಯಾಲಯದಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಕಬಡ್ಡಿಯ ಗೀಳು ಗಣೇಶನಿಗೆ ಆರಂಭವಾಗಿದ್ದೇ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಟ್ಟದಲ್ಲಿ. ಅಂದು ಕಬಡ್ಡಿ ಆಟ ಕಲಿಸಿದ ಶಿಕ್ಷಕ ರ್ಚಚಿಲ್, ಶಂಕರ ಜುಂಜವಾಡಕರ ಹಾಗೂ ಕಾಳಿಕಾ ಕಬಡ್ಡಿ ತಂಡದ ವ್ಯವಸ್ಥಾಪಕ ಸಹದೇವ ವಾಡಕರ ಅವರ ಸಹಕಾರದಿಂದಲೇ ತಾನು ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಗಣೇಶ ಮಿರಾಶಿ.

    ನೆರವು ನೀಡಲು ಮಿರಾಶಿ ಮನವಿ…
    ನ. 3ರಿಂದ 9ರವರೆಗೆ ಹರಿಯಾಣದಲ್ಲಿ ಜರುಗಿದ ಜಸ್ಟ್ ಕಬಡ್ಡಿ ಲೀಗ್ (ಜೆಕೆಎಲ್) ಪಂದ್ಯಾವಳಿಯಲ್ಲಿ ತಮಿಳುನಾಡು ಟೈಟನ್ಸ್ ತಂಡವು ಕೋಲ್ಕತ, ಗುಜರಾತ್ ಮತ್ತು ಹರಿಯಾಣ ರಾಜ್ಯದ ತಂಡಗಳನ್ನು ಸೋಲಿಸಿ ಕ್ವಾರ್ಟರ್ ಫೈನಲ್​ವರೆಗೆ ತಲುಪಿತ್ತು. ಆಡಿದ ಎರಡು ಮ್ಯಾಚ್​ನಲ್ಲಿ ನಾನು ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಪಾತ್ರನಾದೆ. ನನ್ನ ರೈಡಿಂಗ್ ಸ್ಟೈಲ್ ಅನ್ನು ಪ್ರೋ ಕಬಡ್ಡಿ ವಿಭಾಗವು ಗಮನಿಸಿದೆ. ಮುಂಬರುವ ಜನವರಿಯಲ್ಲಿ ಮತ್ತೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು ನಾನು ಮತ್ತೆ ಆ ಪಂದ್ಯಾವಳಿಗೆ ತೆರಳಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಗಣೇಶ. ಈ ಕಬಡ್ಡಿ ಪಂದ್ಯಾವಳಿಗೆ ದೈಹಿಕ ಸಿದ್ಧತೆ ನಡೆಸಲು ಹರಿಯಾಣಕ್ಕೆ ತೆರಳಬೇಕಾಗಿದೆ. ಅಲ್ಲಿನ ತರಬೇತಿ ಕೇಂದ್ರಗಳು ಆಕರಿಸುವ ಶುಲ್ಕ, ಊಟ, ವಸತಿ ಇತ್ಯಾದಿ ಬಲು ದುಬಾರಿಯಾಗಿದೆ. ನಮ್ಮಂತಹ ಕ್ರೀಡಾಪಟುಗಳಿಗೆ ಇವುಗಳನ್ನು ಭರಿಸಲು ಕಷ್ಟ. ಇದಕ್ಕಾಗಿ ಸ್ಥಳೀಯ ಕ್ರೀಡಾಭಿಮಾನಿಗಳು ನೆರವು ನೀಡಲು ಮುಂದೆ ಬರಬೇಕು ಎಂಬುದು ಗಣೇಶ ಮಿರಾಶಿ ಮನವಿ. ಸಹಾಯ ಮಾಡಲು ಇಚ್ಛಿಸುವವರು ದೂರವಾಣಿ ಸಂಖ್ಯೆ: 9901214762ಗೆ ಸಂರ್ಪಸಬಹುದು. ಬ್ಯಾಂಕ್ ಖಾತೆ ಸಂಖ್ಯೆ: 03482210030215, (ಗಣೇಶ ತಾನಾಜಿ ಮಿರಾಶಿ)ಐಎಫ್​ಎಸ್​ಸಿ: ಎಸ್​ವೈಎನ್​ಬಿ 0000348, ಸಿಂಡಿಕೇಟ್ ಬ್ಯಾಂಕ್ ಹಳಿಯಾಳ ಶಾಖೆಗೆ ಸಂದಾಯ ಮಾಡಬಹುದು.

    ತಾಲೂಕಿನಲ್ಲಿ ಸಾಕಷ್ಟು ಕಬಡ್ಡಿ ಪ್ರತಿಭೆಗಳಿದ್ದಾರೆ. ಪ್ರತಿಭೆಯನ್ನು ಬೆಳಕಿಗೆ ತರುವ, ಪೋ›ತ್ಸಾಹಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕಾಗಿ ಹಳಿಯಾಳ ಪಟ್ಟಣದಲ್ಲಿ ಕಬಡ್ಡಿ ತರಬೇತಿ ಕೇಂದ್ರ ಸ್ಥಾಪನೆಯಾಗಬೇಕು.
    | ಗಣೇಶ ಮಿರಾಶಿ ರಾಷ್ಟ್ರಮಟ್ಟದ ಕಬಡ್ಡಿ ಜೂನಿಯರ್ ವಿಭಾಗದ ಆಟಗಾರ

    ಗಣೇಶ ಮಿರಾಶಿ ಅವರ ಸಾಧನೆ ಮತ್ತು ಅವರಿಗೆ ಬೇಕಾಗುವ ನೆರವು ನೀಡುವ ಕುರಿತು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಗಮನಕ್ಕೆ ತಂದಿದ್ದೇವೆ.
    | ವಿ.ಎಂ. ಪಾಟೀಲ ಗುಂಡೋಳ್ಳಿ ಗ್ರಾಮದ ಕ್ರೀಡಾ ಪೋಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts