More

    ಕಪ್ಪು ಕಾರು ಪತ್ತೆ ಹಚ್ಚಿದ ಸಿಬಿಐ ತಂಡ

    ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆಯಲ್ಲಿ ಇದೇ ಮೊದಲ ಬಾರಿಗೆ ಕಪ್ಪು ಕಾರು ಒಂದನ್ನು ಸಿಬಿಐ ತಂಡ ಪತ್ತೆ ಹಚ್ಚಿದ್ದು, ಗುರುವಾರ ಪ್ರಮುಖ ತನಿಖೆ ಅದರ ಸುತ್ತಲೇ ನಡೆಯಿತು.

    ಮಾ. 2ರಿಂದ ಸಿಬಿಐ ವಶದಲ್ಲಿರುವ 6 ಸುಪಾರಿ ಹಂತಕರು ಹಾಗೂ ಪೊಲೀಸ್ ತನಿಖೆಯಲ್ಲಿ ಮೊದಲು ಬಂಧಿತರಾಗಿದ್ದ 6 ಆರೋಪಿಗಳ ವಿಚಾರಣೆ ವೇಳೆ ಹೊರಬಿದ್ದ ಮಾಹಿತಿ ಅನ್ವಯ ತನಿಖೆ ಮುಂದುವರಿಸಿರುವ ಅಧಿಕಾರಿಗಳು, ಈ ಹಿಂದೆ ಪೊಲೀಸರಿಗೆ ಸಿಗದೇ ಇದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

    ಸಿಬಿಐ ಅಧಿಕಾರಿಗಳು ಕೆಲ ದಿನಗಳಿಂದ ಉಪನಗರ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದರು. ಗುರುವಾರ ವಿಚಾರಣೆಯು ನಗರದ ಜರ್ಮನ್ ಆಸ್ಪತ್ರೆ ವೃತ್ತದಲ್ಲಿರುವ ಪೊಲೀಸ್ ಅತಿಥಿ ಗೃಹಕ್ಕೆ ಸ್ಥಳಾಂತರಗೊಳಿಸಿದ್ದರು. ಪೊಲೀಸರ ತನಿಖೆಯನ್ವಯ ಬಂಧಿತನಾಗಿದ್ದ ಆರೋಪಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿರುವ ವಿನಾಯಕ ಕಟಗಿಯನ್ನು ಅತಿಥಿ ಗೃಹಕ್ಕೆ ಕರೆಸಿಕೊಂಡು ವಿಚಾರಣೆಗೊಳಪಡಿಸಿದರು.

    ಶೆವರ್ಲೆ ಕಾರು ತಪಾಸಣೆ: ಆರಂಭದಲ್ಲಿ ತನಿಖೆ ನಡೆಸಿದ್ದ ಉಪನಗರ ಠಾಣೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದರು. ಆದರೆ, ವಾಹನ ಜಪ್ತಿ ಮಾಡಿರಲಿಲ್ಲ. ಹತ್ಯೆ ಘಟನೆ ವೇಳೆ ವಾಹನವೊಂದು ಬಳಕೆಯಾಗಿತ್ತು ಎಂಬ ಊಹೆಯ ಮಾತು ಹಿಂದೆ ಕೇಳಿಬಂದಿತ್ತು. ಈಗ ಸಿಬಿಐ ಅಧಿಕಾರಗಿಳು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಶೆವರ್ಲೆ ಕಂಪನಿಯ ಕಪ್ಪು ಬಣ್ಣದ ಕಾರು ಪತ್ತೆ ಹಚ್ಚಿದ್ದಾರೆ. ಅದನ್ನು ಅತಿಥಿ ಗೃಹದ ಆವರಣದಲ್ಲಿ ಇರಿಸಲಾಗಿತ್ತು.

    ವಿನಾಯಕ ಕಟಗಿಯನ್ನು ಕೆಲಹೊತ್ತು ಅತಿಥಿಗೃಹದ ಒಳಗಡೆ ವಿಚಾರಣೆಗೊಳಪಡಿಸಿದ ಅಧಿಕಾರಿಗಳು, ಹೊರಗೆ ನಿಲ್ಲಿಸಿದ್ದ ಕಾರಿನ ಬಳಿ ಕರೆತಂದು ಮತ್ತಷ್ಟು ಮಾಹಿತಿ ಕಲೆ ಹಾಕಿದರು. ಇದು ಮೂರು ಸಲ ಪುನರಾವರ್ತನೆಯಾಯಿತು. ಕಾರಿನ ಇಂಚಿಂಚು ಮಾಹಿತಿಯನ್ನೂ ಕಲೆಹಾಕಿದಂತೆ ಕಂಡುಬಂದಿತು.

    ಹಂತಕರು ಪರಾರಿಯಾಗಲು ಇದೇ ಕಾರು ಬಳಕೆಯಾಗಿತ್ತು ಎನ್ನಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕೆಎ 25, ಪಿ 8526 ನೋಂದಣಿ ಸಂಖ್ಯೆಯ ಕಾರು, ಸಾರಿಗೆ ಪ್ರಾಧಿಕಾರದ ಆಪ್ ಒಂದರಲ್ಲಿ ಇರುವ ಮಾಹಿತಿ ಪ್ರಕಾರ ಚಂದ್ರಶೇಖರ ಪೂಜಾರ ಎಂಬಾತನಿಗೆ ಸೇರಿದ್ದಾಗಿದೆ. ಪೂಜಾರ, ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿಯ ಸ್ನೇಹಿತ ಎಂದು ಹೇಳಲಾಗಿದೆ.

    ಆರೋಗ್ಯ ತಪಾಸಣೆ: ಬೆಂಗಳೂರಿನಲ್ಲಿ ಬಂಧಿತರಾದ 6 ಸುಪಾರಿ ಹಂತಕರಾದ ದಿನೇಶ, ಸುನೀಲಕುಮಾರ, ನೂತನ, ಅಶ್ವತ್ಥ್, ಶಾನವಾಜ್, ನಜೀರ ಅಹ್ಮದ್​ನನ್ನು ಉಪನಗರ ಠಾಣೆಯಲ್ಲಿರಿಸಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಠಾಣೆಗೆ ಕರೆಸಿ ಆರೋಪಿಗಳ ಆರೋಗ್ಯ ತಪಾಸಣೆ ಮಾಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಚಲನವಲನದ ಮಾಹಿತಿ: ಹತ್ಯೆ ನಡೆದ ಹಿಂದಿನ ದಿನ ಸುಪಾರಿ ಹಂತಕರು ನಗರದಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಸಿಬಿಐ ಅಧಿಕಾರಿಗಳ ಮತ್ತೊಂದು ತಂಡ ಆರೋಪಿಗಳು ತಂಗಿದ್ದ ಹೋಟೆಲ್, ಓಡಾಡಿದ ಸ್ಥಳಗಳ ಮಾಹಿತಿ ಕಲೆ ಹಾಕುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts