More

    ಕಪ್ಪತ್ತಗುಡ್ಡದಲ್ಲಿ ಮೈದಳೆದ ವನದೇವತೆ!

    ವಿಜಯ ಸೊರಟೂರ ಡಂಬಳ

    ಕಣ್ಣು ಹಾಯಿಸಿದಷ್ಟು ದೂರ ಹಸಿರ ರಾಶಿ, ಔಷಧ ಸಸ್ಯಗಳ ಕಾಶಿ. ಉತ್ತರ ಕರ್ನಾಟಕದ ಸಹ್ಯಾದ್ರಿ ಖ್ಯಾತಿಯ ಕಪ್ಪತ್ತಗುಡ್ಡದಲ್ಲಿ ಇದೀಗ ಸಾಕ್ಷಾತ್ ವನದೇವತೆಯೇ ಧರೆಗಿಳಿದಿದ್ದಾಳೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಡೀ ಗುಡ್ಡ ಹಸಿರುಹೊದ್ದು ನಿಂತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ಯಾವುದೇ ಅಡ್ಡಿ ಇಲ್ಲವಾದರೂ ಕರೊನಾ ಭೀತಿಯಿಂದಾಗಿ ಇಲ್ಲಿಗೆ ಭೇಟಿ ನೀಡುವವ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.

    ‘ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡು’ ಎನ್ನುವ ನಾಣ್ಣುಡಿಯಂತೆ ಕಪ್ಪತ್ತ ಗಿರಿಯು ಇದೀಗ ಮಲೆನಾಡಿನ ಸೊಬಗು ಹೊತ್ತು ನಿಂತಿದೆ. ಗದಗ, ಮುಂಡರಗಿ, ಶಿರಹಟ್ಟಿ ತಾಲೂಕಿನಾದ್ಯಂತ ಸುಮಾರು 24,415.73 ಹೆಕ್ಟೇರ್ ಗುಡ್ಡವನ್ನು ಸರ್ಕಾರ ಇತ್ತೀಚಿಗೆ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೊಷಿಸಿರುವುದು ಪರಿಸರ ಪ್ರಿಯರಲ್ಲಿ ಸಂತಸ ಮೂಡಿಸಿದೆ.

    ಸಾವಿರಾರು ಔಷಧೀಯ ಸಸ್ಯ ಪ್ರಭೇದಗಳನ್ನು ಹೊಂದಿರುವ ಕರುನಾಡಿನ ಏಕೈಕ ತಾಣ ಇದಾಗಿದೆ. ವಿವಿಧ ಬಗೆಯ ಹೂಗಳು, ತರುಲತೆಗಳು, ಗೋರೆ ಹುಲ್ಲು, ಬ್ರಹ್ಮಕಾಂತಿ, ವಿಷ್ಣುಕಾಂತಿಯಂತಹ ಸಸ್ಯ ವರ್ಗಗಳು ಕಪ್ಪತ್ತ ಗಿರಿಯ ಸೌಂದರ್ಯ ಹೆಚ್ಚಿಸಿವೆ. ಪ್ರಕೃತಿಯ ಸೌಂದರ್ಯ ಸವಿಯಲು ಹಾಗೂ ಕವಲು ದಾರಿಯಲ್ಲಿ ಬೆಟ್ಟ, ಗುಡ್ಡವನ್ನು ಏರಿ ಚಾರಣದ ಆನಂದವನ್ನು ಅನುಭವಿಸಲು ಪ್ರತಿ ವರ್ಷ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಪವನ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಕಪ್ಪತ್ತ ಗುಡ್ಡದಲ್ಲಿ ಸ್ಥಾಪಿಸಲಾಗಿದೆ.

    ಪಾರಂಪರಿಕ ದೇಗುಲ, ಮಠಗಳ ತಾಣ: ಕಪ್ಪತ್ತ ಗಿರಿಯ ದಟ್ಟಡವಿಯ ನಡುವೆ ಇರುವ ಕಪ್ಪತ್ತಮಲ್ಲೇಶ್ವರ, ಕಾರಿಸಿದ್ಧೇಶ್ವರ, ಮಹಾತಾಯಿ ಗಂಗಾಮಾತಾ, ಗಾಳಿಗುಂಡಿ ಬಸವ ದೇವಸ್ಥಾನಗಳಿವೆ. ಕಪ್ಪತ್ತ ಗುಡ್ಡದ ನಾಲ್ಕು ದಿಕ್ಕಿಗೂ ಗೋಲಗೇರಿಮಠ, ನಂದಿವೇರಿ ಮಠ, ಹಳೇಮಠ… ಹೀಗೆ ಹಲವಾರು ಪ್ರಾಚೀನ ಪರಂಪರೆ ಹೊಂದಿರುವ ಮಠಗಳು ಇಲ್ಲಿವೆ. ನಂದಿವೇರಿ ಮಠವು ಒಂದು ಕಾಲದಲ್ಲಿ ಪಶುಸಂಗೋಪನೆಗೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿತ್ತು. ಕಪ್ಪತ್ತ ಗುಡ್ಡದ ಜೊತೆಗೆ ಮುಂಡರಗಿ, ಶಿರಹಟ್ಟಿ, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ವಿವಿಧ ಹೊರ ರಾಜ್ಯಗಳ ಪ್ರವಾಸಿಗರು ಭಾವನ್ಮಾತಕ ನಂಟು ಹೊಂದಿದ್ದಾರೆ. ಪ್ರತಿವರ್ಷ ಶ್ರಾವಣ ಸೋಮವಾರ ಕಪ್ಪತ್ತ ಮಲ್ಲೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿತ್ತು. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರು ಸೇರದಂತೆ ಮಾಡಿರುವುದು ನಿರಾಶದಾಯಕ ಸಂಗತಿಯಾಗಿದೆ.

    ತಂಡೋಪ ತಂಡವಾಗಿ ಬರುತ್ತಿವೆ ಕುರಿ ಹಿಂಡು: ಉತ್ತಮ ಮಳೆಯಾಗಿದ್ದರಿಂದ ಕಪ್ಪತ್ತ ಗುಡ್ಡದಲ್ಲಿ ಸಮೃದ್ಧವಾಗಿ ಹುಲ್ಲು ಬೆಳೆದಿದ್ದು ಮೇವು ಅರಸಿ ಬೆಳಗಾವಿ, ರಾಯಭಾಗ, ಅಥಣಿ, ಮಧೋಳ ಸೇರಿದಂತೆ ವಿವಿಧ ಭಾಗಗಳಿಂದ ಕುರಿಗಾಹಿಗಳ ಹಿಂಡು ತಂಡೋಪ ತಂಡವಾಗಿ ಕಪ್ಪತ್ತ ಗುಡ್ಡಕ್ಕೆ ಬರುತ್ತಿವೆ. ಗುಡ್ಡದಲ್ಲಿರುವ ಕೆರೆ, ಹಳ್ಳ ಕೊಳ್ಳಗಳು, ಚೆಕ್ ಡ್ಯಾಂ ಅಲ್ಪಸ್ವಲ್ಪ ಭರ್ತಿಯಾಗಿದ್ದು ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿಗೆ ಆಸರೆಯಾಗಿದೆ.

    ಕರೊನಾ ರೋಗದಿಂದ ಕಪ್ಪತ್ತ ಗುಡ್ಡಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕಪ್ಪತ್ತ ಗುಡ್ಡದಲ್ಲಿ ನಡೆಯುತ್ತಿರುವ ಅರಣ್ಯ ನಾಶಕ್ಕೆ, ವ್ಯನಜೀವಿ ಬೇಟೆಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.

    | ಪ್ರದೀಪ ಪವಾರ ವಲಯ ಅರಣ್ಯಧಿಕ ಾರಿ ಮುಂಡರಗಿ

    ಎಪ್ಪತ್ತು ಗಿರಿಗಿಂತ ಕಪ್ಪತ್ತ ಗಿರಿ ಮೇಲು ಎಂಬ ಸಾರಾಂಶ ಸ್ಕಂದ ಪುರಾಣದಲ್ಲಿದೆ. ಆ. 13ರಂದು ಕಪ್ಪತ್ತ ಮಲ್ಲೇಶ್ವರ ಮತ್ತು ಭ್ರಮರಾಂಭದೇವಿ ಜಾತ್ರೆ ನಡೆಯಬೇಕಿತ್ತು, ಪ್ರತಿವರ್ಷ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದರು. ಕಪ್ಪತ್ತ ಗಿರಿ ಹಸಿರಿನ ಸಿರಿ ಕಣ್ತುಂಬಿಕೊಂಡು ಹೋಗುತ್ತಿದ್ದರು. ಆದರೆ, ಈ ಬಾರಿ ಕರೊನಾ ಹಾವಳಿಯಿಂದ ಜಾತ್ರೆಯನ್ನು ರದ್ದುಪಡಿಸಲಾಗಿದೆ.

    | ಮಲ್ಲಿಕಾರ್ಜುನ ಸ್ವಾಮೀಜಿ

    ಕಪ್ಪತ್ತ ಮಲ್ಲೇಶ್ವರ ದೇವಸ್ಥಾನದ ಧರ್ಮಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts