More

    ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲ

    ಮುಂಡರಗಿ: ಕಪ್ಪತಗುಡ್ಡದ ನಿರ್ಬಂಧಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಪಟ್ಟಣದ ಎಸ್.ವಿ. ಲಿಂಬಿಕಾಯಿ ಅವರ ಬಯಲು ಜಾಗದಲ್ಲಿ ಭೋವಿ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮೇಶ್ವರರ 849ನೇ ಜಯಂತಿ ಹಾಗೂ ಗದಗ ಜಿಲ್ಲಾ ಮಟ್ಟದ ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಕಲ್ಲು ಒಡೆಯುವುದನ್ನೇ ಕಸುಬಾಗಿಸಿಕೊಂಡಿರುವ ಭೋವಿ ಸಮಾಜದವರು ನಿರ್ಬಂಧಿತ ಅರಣ್ಯ ಪ್ರದೇಶ ಹೊರತುಪಡಿಸಿ ಉಳಿದೆಡೆ ತಮ್ಮ ಕಾಯಕ ಮಾಡಬೇಕು. ಕಲ್ಲು ಗಣಿಗಾರಿಕೆ ನಡೆಸುವವರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಸರ್ಕಾರದ ನಿಯಮಾನುಸಾರ ಕಲ್ಲು ಒಡೆಯುವ ಕಾರ್ಯದಲ್ಲಿ ತೊಡಗಿದವರಿಗೆ ತೊಂದರೆ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

    ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಭೋವಿ ಸಮಾಜದ ಸಮುದಾಯ ಭವನ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಮಾಜದ ಜನ ದುಶ್ಚಟಗಳಿಂದ ದೂರವಿದ್ದು, ಮಕ್ಕಳ ಶಿಕ್ಷಣಕ್ಕೆ ಪೋ›ತ್ಸಾಹ ನೀಡಬೇಕು. ಸಮಾಜದ ಅಭಿವೃದ್ಧಿಗಾಗಿ ಸಂಘಟಿತರಾಗಬೇಕು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ‘ಭೋವಿ ಸಮಾಜದವರು ಶ್ರಮಜೀವಿಗಳಾಗಿದ್ದು ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದರು.

    ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಪಟ್ಟಣದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ವಣಕ್ಕೆ ಅಗತ್ಯವಿರುವ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಎಂಎಲ್​ಸಿ ಸುನೀಲ ವಲ್ಯಾಪೂರ, ಮಾಜಿ ಸಚಿವ ಶಿವರಾಜ ತಂಗಡಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತಿತರರು ಮಾತನಾಡಿದರು. ಶ್ರೀ ಸಿದ್ಧರಾಮೇಶ್ವರ ಸಂಸ್ಥಾನಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೋವಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ರವಿ ಗುಂಜಿಕರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಈರಣ್ಣ ನಾಡಗೌಡ್ರ, ಸದಸ್ಯೆ ಶೋಭಾ ಮೇಟಿ, ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಉಪಾಧ್ಯಕ್ಷ ಶಿವಣ್ಣ ಚಿಕ್ಕಣ್ಣವರ, ಮುಖಂಡರಾದ ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಪರಶುರಾಮ ಕರಡಿಕೊಳ್ಳ, ವೆಂಕಪ್ಪ ಬಳ್ಳಾರಿ, ಯಲ್ಲಪ್ಪ ಹೂಲಗೇರಿ, ಡಾ.ಬಸವರಾಜ ಬಳ್ಳಾರಿ, ಚಿನ್ನಪ್ಪ ವಡ್ಡಟ್ಟಿ, ಡಾ.ಎಚ್. ರವಿ ಮಾಕಳೆ, ಓದುಗಂಗಪ್ಪ, ಎಚ್. ಆನಂದಪ್ಪ, ಹುಚ್ಚಪ್ಪ ಸುಂದಕದ, ರಾಮಚಂದ್ರ ಕಲಾಲ, ಕೆ.ವಿ. ಒಡೆಯರ್, ಆನಂದ ಗೊಡಬಿ, ಇತರರು ಉಪಸ್ಥಿತರಿದ್ದರು. ಡಾ.ಆರ್.ಎಚ್. ಜಂಗಣವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಹ್ಲಾದ ಗೆಜ್ಜಿ ಸ್ವಾಗತಿಸಿದರು. ಮಂಜುಳಾ ವಡೇಕರ್ ನಿರೂಪಿಸಿದರು.

    ಶೆಟ್ಟಿಕೆರೆ ಅಭಿವೃದ್ಧಿಗೆ ವಿಶೇಷ ಕಾರ್ಯ ಯೋಜನೆ

    ಲಕ್ಷ್ಮೇಶ್ವರ: ಕಪ್ಪತಗುಡ್ಡದಲ್ಲಿ ಸಂಭವಿಸುವ ಬೆಂಕಿ ಅವಘಡಕ್ಕೆ ಕಡಿವಾಣ ಹಾಕಿ ಔಷಧ ಸಸ್ಯಗಳ ಬೆಳವಣಿಗೆ-ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ. ವಿದೇಶಿ ಪಕ್ಷಿಗಳ ಅನುಕೂಲಕ್ಕಾಗಿ ತಾಲೂಕಿನ ಶೆಟ್ಟಿಕೆರೆ ಅರಣ್ಯ ಪ್ರದೇಶದ ಅಭಿವೃದ್ಧಿಗೆ ವಿಶೇಷ ಕಾರ್ಯ ಯೋಜನೆ ರೂಪಿಸಲಾಗುತ್ತದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಭಾನುವಾರ ಶೆಟ್ಟಿಕೆರೆ ಅರಣ್ಯ ಪ್ರದೇಶ ವೀಕ್ಷಿಸಿ ಅವರು ಮಾತನಾಡಿದರು. ಅರಣ್ಯಕ್ಕೆ ಬೆಂಕಿ ಹಚ್ಚುವ ಕಾರ್ಯದಲ್ಲಿ ಭಾಗಿಯಾದ ಆರೋಪದ ಮೇಲೆ 13 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕುರಿ ಕಾಯುವವರು ಅರಣ್ಯ ಪ್ರದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಔಷಧ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    200 ಎಕರೆ ವಿಸ್ತಾರವಾದ ಈ ಕೆರೆ ಹೂಳೆತ್ತುವ ಬಗ್ಗೆ ಶಾಸಕರ ಮೂಲಕ ಸಣ್ಣ ನೀರಾವರಿ ಇಲಾಖೆ ಸಚಿವರ ಗಮನ ಸೆಳೆಯುತ್ತೇನೆ. ಶೆಕೆರೆಯ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತವೆ ಎನ್ನಲಾದ ಅಕ್ರಮ ಕಲ್ಲು, ಮರಳಿನ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

    ರೈತರ ಮನವಿ: ಸಚಿವರನ್ನು ಭೇಟಿ ಮಾಡಿದ ಕಡಕೋಳ, ದೇವಿಹಾಳ ಗ್ರಾಮದ ಜನರು, ‘ಅನೇಕ ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದು, ಈಗ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ. ನಮಗೆ ನ್ಯಾಯ ಕೊಡಿಸಬೇಕು’ ಎಂದು ಕೋರಿದರು. ಪ್ರತಿಕ್ರಿಯಿಸಿದ ಸಚಿವರು, ‘ಸದ್ಯಕ್ಕೆ ರೈತರನ್ನು ಒಕ್ಕಲೆಬ್ಬಿಸಬಾರದು. ಅಲ್ಲದೆ, ಸ್ಥಳೀಯರು ಇಲ್ಲಿ ಎಷ್ಟು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸೂಕ್ತ ದಾಖಲೆ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

    ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್​ನ ಸಮ್ಮೇಳನದ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಸದ್ಯಕ್ಕೆ ಮತ್ತೆ ಲಾಕ್​ಡೌನ್ ಮಾಡುವ ಬಗ್ಗೆ ಚಿಂತನೆ ಇಲ್ಲ ಎಂದು ಸಚಿವರು ಹೇಳಿದರು.

    ಶಾಸಕ ರಾಮಣ್ಣ ಲಮಾಣಿ, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಡಿಎಫ್​ಒ ಸೂರ್ಯಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ವಿಭಾಗದ ಆರ್.ಎಸ್. ನಾಗಶೆಟ್ಟಿ, ಪರಿಮಳ ವಿ.ಎಚ್, ವಲಯ ಅರಣ್ಯಾಧಿಕಾರಿಗಳಾದ ಎ.ಎಚ್. ಮುಲ್ಲಾ, ಪ್ರದೀಪ ಪವಾರ, ತಿಪ್ಪಣ್ಣ ಕೊಂಚಿಗೇರಿ, ನಾಗರಾಜ ಲಕ್ಕುಂಡಿ, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts