More

    ‘ಕನ್ನಡ ಗಡಿ’ ನಿರ್ಣಯಕ್ಕೆ ಹೊಸ ದಾಖಲೆ

    ಬೆಳಗಾವಿ : ‘ಬೆಳಗಾವಿ ಕರ್ನಾಟಕದ್ದೇ, ಇಲ್ಲಿಯ ಮೂಲ ಭಾಷೆ ಕನ್ನಡವೇ’ ಎಂಬುವುದಕ್ಕೆ ಬ್ರಿಟಿಷ್ ಆಡಳಿತಾವಧಿಯಲ್ಲಿನ ಮತ್ತೊಂದು ಮಹತ್ವದ ಕನ್ನಡ ದಾಖಲೆ ಲಭಿಸಿದೆ. ಈವರೆಗಿನ ಎಲ್ಲ ಸರ್ಕಾರಗಳು ನೇಮಿಸಿರುವ ಸಮಿತಿಗಳ ವರದಿಗೂ ಮುನ್ನವೇ ಇದು ಪ್ರಕಟಗೊಂಡಿರುವುದರಿಂದ ಗಡಿ ನಿರ್ಣಯಕ್ಕೆ ಇದು ಪ್ರಮುಖ ಸಾಕ್ಷಿಯಾಗಲಿದೆ.

    ಈ ದಾಖಲೆಯಲ್ಲಿ ಕರ್ನಾಟಕದ ಗಡಿ ಪ್ರದೇಶ ಮಾತ್ರವಲ್ಲ, ಎಲ್ಲ ಪುಟಗಳಲ್ಲೂ ಕನ್ನಡ ಅಂಕಿಗಳನ್ನೇ ಬಳಸುವುದರ ಜತೆಗೆ ಕನ್ನಡಿಗರ ಗುಣ ಸ್ವಭಾವವನ್ನೂ ಉಲ್ಲೇಖಿಸಲಾಗಿದೆ. ಹೀಗಾಗಿ ಬೆಳಗಾವಿ ಹಾಗೂ ಕಾರವಾರ ಕರ್ನಾಟಕದ್ದೇ ಆಗಿದೆ ಎಂಬ ಕಾನೂನು ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

    ‘ಬೆಳಗಾವಿ ಕರ್ನಾಟಕದ್ದು’ ಎಂಬ ಬಗ್ಗೆ ದಾಖಲೆ ಸಂಗ್ರಹಕಾರ, ವಕೀಲ ಡಾ.ರವೀಂದ್ರ ತೋಟಗೇರ ಅವರಲ್ಲಿರುವ ನೂರಾರು ಸಾಕ್ಷಾೃಧಾರಗಳ ಜತೆಗೆ ‘ಕರ್ನಾಟಕದ ವರ್ಣನೆಯೂ ಇತಿಹಾಸವೂ’ ಎಂಬ ಪುಸ್ತಕ ಸೇರಿದೆ. ಆ ಪುಸ್ತಕವನ್ನೂ ಕರ್ನಾಟಕದ ಗಡಿಭಾಗ ನಿರ್ಧರಿಸುವುದಕ್ಕೆ ಪರಿಗಣಿಸಬೇಕು ಎಂಬ ಹಕ್ಕೊತ್ತಾಯ ಕನ್ನಡಿಗರಿಂದ ಕೇಳಿಬರುತ್ತಿದೆ.

    1926ರಲ್ಲಿ ಪ್ರಕಟ: ‘ಕರ್ನಾಟಕದ ವರ್ಣನೆಯೂ ಇತಿಹಾಸವೂ’ ಪುಸ್ತಕವು ಒಟ್ಟು 110 ಪುಟ ಹೊಂದಿದ್ದು, 1926ರಲ್ಲಿ 13ನೇ ಆವೃತ್ತಿಯಾಗಿ ಸಾವಿರ ಪ್ರತಿಗಳಲ್ಲಿ ಪ್ರಕಟವಾದ ಪುಸ್ತಕ ಇದಾಗಿದೆ. ಮುಂಬೈ ಇಲಾಖೆಯೊಳಗಿನ ಸರ್ಕಾರಿ ವಿದ್ಯಾಖಾತೆ (ಡಿಪಾರ್ಟ್‌ಮೆಂಟ್‌ಆಫ್ ಪಬ್ಲಿಕ್ ಇನ್‌ಸ್ಟ್ರಕ್ಷನ್) ವತಿಯಿಂದ ಆಗಿನ ಪುಣೆಯ ಫೆರ್ಗ್ಯೂಸನ್ ಕಾಲೇಜ್‌ನ ವೆಂಕಟೇಶ ನರದಿಂಗರಾವ ಮಗದಾಳ ಎಂಬವರು ಪುಸ್ತಕ ಬರೆದಿದ್ದಾರೆ. ಭಾರತ ಸರ್ಕಾರದ 1967ರ ಕಾಪಿ ರೈಟ್ ಕಾಯ್ದೆ ನಕಲು ಹಕ್ಕು ಕಾಯ್ದಿರಿಸಿಕೊಂಡು ಮಂಗಳೂರಿನ ‘ಕೆನರಿಸ್ ಮಿಶನ್ ಪ್ರೆಸ್ ಮತ್ತು ಬುಕ್ ಡಿಪೋ’ ಈ ಪುಸ್ತಕವನ್ನು ಪ್ರಕಟಿಸಿದೆ.

    ಕರ್ನಾಟಕದ ಭೂಪ್ರದೇಶದ ಉಲ್ಲೇಖ: ಪುಸ್ತಕ ತೆರೆಯುತ್ತಿದ್ದಂತೆಯೇ ಕರ್ನಾಟಕ ಭೂಪ್ರದೇಶದ ವಿವರಣೆ ಓದಬಹುದಾಗಿದೆ. ಪುಸ್ತಕದ ಮೊದಲ ಪುಟದ ಮೊದಲ ವ್ಯಾಕ್ಯದಲ್ಲೇ ಕರ್ನಾಟಕ ಭೂ ಭಾಗವನ್ನು ಹೀಗೆ ವಿವರಿಸಲಾಗಿದೆ.

    ‘ಕನ್ನಡ ನುಡಿಯು ನಡೆಯುವ ನಾಡಿಗೆ ಕನ್ನಡ ನಾಡು ಇಲ್ಲವೇ ಕರ್ನಾಟಕ ಎಂಬ ಹೆಸರು. ಈ ದೇಶದ ಉತ್ತರ ಮೇರೆ ಕೊಲ್ಲಾಪುರದಿಂದ ಜತ್ತಿ-ಅಂಕಲಕೋಟೆ,-ಕಲ್ಯಾಣಪಟ್ಟಣಗಳ ಮೇಲಿಂದ ಬೇದರ (ಬೀದರ)ದ ವರೆಗೆ ಹೋಗಿವೆ. ಪೂರ್ವಮೇರೆ ಬೀದರದಿಂದ ರಾಯಚೂರು-ಆದವಾನಿ-ತಾಡಪತ್ರಿ-ಬೆಂಗಳೂರಗಳ ಮೇಲಿಂದ ನೀಲಗಿರಿಯ ತನಕ; ದಕ್ಷಿಣ ಮೇರೆ ನೀಲಗಿರಿಯೇ; ನೀಲಗಿರಿಯಿಂದ ಮಾಲಿಯಾಳದ ದಂಡೆ ಹಿಡಿದು ಸದಾಶಿವಗಡದ ತನಕ ಹೋಗಿ, ಮುಂದೆ ಗೋಮಾಂತಕದ ಸೀಮೆಯನ್ನು ಎಡಗಡೆಗೆ ಬಿಟ್ಟು, ಕೊಲ್ಲಾಪುರದ ವರೆಗೆ ಸಹ್ಯಾದ್ರಿಯ ಪಶ್ಚಿಮ ಮೇರೆಯಾಗಿದೆ’ ಎನ್ನುವುದು ಈ ಪುಸ್ತಕದ ಮೊದಲ ಸಾರ.

    ಕನ್ನಡಿಗರು ಶೀಘ್ರಕೋಪಿಗಳು, ದೀರ್ಘ ದ್ವೇಷಿಗಳಲ್ಲ: ಕನ್ನಡಿಗರ ಗುಣಗಳ ಬಗ್ಗೆಯೂ ಉಲ್ಲೇಖಿಸುವ ಈ ಪುಸ್ತಕವು ‘ಕನ್ನಡಿಗರು ಬಹುತರವಾಗಿ ಸಭ್ಯರೂ, ಸುಸ್ವಭಾವದವರೂ ಉಂಟು. ಇವರು ಸ್ನೇಹಕ್ಕೆ ಯೋಗ್ಯರು; ಕಪಟಿಗಲ್ಲ; ಬಂಧು ಬಳಗದವರನ್ನು ವಿಶೇಷವಾಗಿ ಹಚ್ಚಿಕೊಳ್ಳುವರು. ಇವರಿಗೆ ದೇವರಲ್ಲಿಯೂ ತಮ್ಮ ಧರ್ಮದಲ್ಲಿಯೂ ವಿಶೇಷ ಭಕ್ತಿಯಂಟು. ಆದರೆ. ಇವರಲ್ಲಿ ಉದ್ಯೋಗವೂ ದೀರ್ಘಪ್ರಯತ್ನವೂ ಬಹುಕಡಿಮೆ. ಅಹಂಕಾರ ವಿಶೇಷ, ಡಾಂಭಿಕತನದ ಮೇಲೆ ಪ್ರೀತಿ ಹೆಚ್ಚು. ಇವರು ಶೀಘ್ರಕೋಪಿಗಳು; ಆದರೆ, ದೀರ್ಘ ದ್ವೇಷಿಗಳಲ್ಲ ಎಂದು 15ನೇ ಪುಟದಲ್ಲಿ ವಿವರಿಸಲಾಗಿದೆ.

    ಹೊತ್ತಿಗೆಯಲ್ಲಿದೆ ಬೆಳಗಾವಿ ಮಾಹಿತಿ

    ಪುಸ್ತಕದಲ್ಲಿ ಬೆಳಗಾವಿ ಎಂದೇ ಕರೆಯಲಾಗಿದೆ. ಬೆಳಗಾವಿ ಜಿಲ್ಲೆಯ ಉತ್ತರಕ್ಕೆ ಕೊಲ್ಲಾಪುರ, ಸಾಂಗಲಿ, ಮಿರ್ಜಿ ಸಂಸ್ಥಾನಗಳು. ಪೂರ್ವಕ್ಕೆ ರಾಮದುರ್ಗ, ಜಮಖಂಡಿ, ಮುದೋಳ ಸಂಸ್ಥಾನಗಳು, ವಿಜಾಪುರ ಜಿಲ್ಲೆ. ದಕ್ಷಿಣಕ್ಕೆ ಕಾರವಾರ, ಧಾರವಾಡ, ಪಶ್ಚಿಮಕ್ಕೆ ಗೋವೆಯ ಸೀಮೆ, ಸಾವಂತವಾಡಿ ಅಥವಾ ಸುಂದರವಾಡಿ ಸಂಸ್ಥಾನವಿದ್ದವು.

    ಮಹಾರಾಷ್ಟ್ರಿಗರೂ ಒಳನುಗ್ಗಿದವರೇ..!

    ಪ್ರಾಚೀನ ಕರ್ನಾಟಕದ ಮೇರೆಯ ನಾಡುಗಳಲ್ಲಿ ಬೇರೆ ಬೇರೆ ಭಾಷೆಗಳು ರೂಢಿಯಲ್ಲಿದ್ದವೆಂದು ಗೊತ್ತಾಗಿದೆ. ದಕ್ಷಿಣದ ತೆಲಗರು, ತಮಿಳರೂ, ಉತ್ತರದ ಮಹಾರಾಷ್ಟ್ರದವರೂ ಕನ್ನಡ ನಾಡನ್ನು ಒಳನುಗ್ಗಿ ಪ್ರಾಚೀನ ಕರ್ನಾಟಕದ ವಿಸ್ತಾರವನ್ನು ಕಡಿಮೆ ಮಾಡಿರುವವರು. ಕೃಷ್ಣಾ ತುಂಗಭದ್ರೆಗಳ ನಡುವಿನ ನಾಡು ಒಂದು ಸಾವಿರ ವರ್ಷಗಳ ತಿರುಳುಕನ್ನಡದ ಸೀಮೆಯಾಗಿತ್ತು ಎಂದು ಕರ್ನಾಟಕದಲ್ಲಿನ ಪ್ರದೇಶವಾರು ಭಾಷೆಗಳ ಬಳಕೆ ಬಗ್ಗೆಯೂ ವಿವರಣೆ ನೀಡಲಾಗಿದೆ.

    ಅಂಕಲಿಯ ಶಾಂತಿನಾಥ ಶೆಟ್ಟಿ ಅವರಲಿದ್ದ ‘ಕರ್ನಾಟಕದ ವರ್ಣನೆಯೂ ಇತಿಹಾಸವೂ’ ಎಂಬ ಈ ಮಹತ್ವದ ಪುಸ್ತಕವನ್ನು ಅವರ ಮಗ ಪ್ರದೀಪ ಶೆಟ್ಟಿ ಅವರು, ಕಾಯಂ ಜನತಾ ನ್ಯಾಯಾಲಯದ ಸದಸ್ಯ ಅನಿಲಕುಮಾರ ಪಾಟೀಲ ಮೂಲಕ ನನಗೆ ತಲುಪಿಸಿದ್ದಾರೆ. ಇದರಲ್ಲಿ ಸ್ಪಷ್ಟವಾಗಿ ಬೆಳಗಾವಿ ಜಿಲ್ಲೆ ಹಾಗೂ ಕರ್ನಾಟಕದ ಗಡಿ ಪ್ರದೇಶಗಳನ್ನು ವಿವರಿಸಲಾಗಿದೆ. ಹೀಗಾಗಿ ಗಡಿ ನಿರ್ಧರಿಸುವಲ್ಲಿ ಈ ಪುಸ್ತಕ ಮಹತ್ವ ಪಡೆದಿದೆ. ಕರ್ನಾಟಕ ರಾಜ್ಯ ಗಡಿ ಸಂರಕ್ಷಣಾ ಆಯೋಗ ಅಧ್ಯಕ್ಷ ಕೆ.ಎಲ್. ಮಂಜುನಾಥ ಅವರಿಗೆ ಈ ಪುಸ್ತಕದ ನಕಲು ಪ್ರತಿ ತಲುಪಿಸಲಾಗಿದೆ.
    | ಡಾ.ರವೀಂದ್ರ ತೋಟಗೇರ. ಗಡಿ ತಜ್ಞ, ವಕೀಲ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts