More

    ಕನ್ನಡ ಕೇವಲ ಭಾಷೆಯಲ್ಲ, ಅದು ಮೃದು ಮನಸ್ಸುಗಳ ಭಾವನೆಗಳ ಆಗರ: ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ರಕ್ಷಿತಾ ಪಿ.ಕೆಲುವೆ ಅಭಿಮತ

    ಸಾಗರ: ಕನ್ನಡ ಕೇವಲ ಭಾಷೆಯಲ್ಲ, ಅದು ಮೃದು ಮನಸ್ಸುಗಳ ಭಾವನೆಗಳ ಆಗರ. ಕನ್ನಡ ಭಾಷೆಗೆ ತನ್ನದೆ ಆದ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಕಟ್ಟುವುದಕ್ಕೆ ಸಂವಹನವೂ ಅಷ್ಟೇ ಮುಖ್ಯ ಎಂದು ಸರ್ವಾಧ್ಯಕ್ಷೆ ರಕ್ಷಿತಾ ಪಿ.ಕೆಲುವೆ ಹೇಳಿದರು.
    ಲಿಂಗದಹಳ್ಳಿಯ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಮಕೃಷ್ಣ ವಿದ್ಯಾಲಯ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಾಗರ ತಾಲೂಕು ಮಟ್ಟದ 11ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
    ಕರ್ನಾಟಕದ ಭೂಪಟದಲ್ಲಿ ಸಾಗರಕ್ಕೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವಿದೆ. ಇಲ್ಲಿಯ ಸಾಹಿತ್ಯ, ಸಂಸ್ಕೃತಿ, ಜಾನಪದ, ರಂಗಭೂಮಿ, ರಾಜಕೀಯ, ಜನಪರ ಹೋರಾಟಗಳು ದೇಶದ ಗಮನ ಸೆಳೆದಿದೆ. ನಾನು ವಾಸವಾಗಿರುವ ಪ್ರದೇಶದಲ್ಲಿ ಯಾವುದೇ ಪ್ರಚಾರವನ್ನೂ ಬಯಸದೆ ನಿಸ್ಪಕ್ಷಪಾತವಾಗಿ ಜಾನಪದ ಸಂಸ್ಕೃತಿಯನ್ನು ಜಾಗೃತಗೊಳಿಸುವ ಕೆಲಸ ಮಾಡಿದ ಹುಚ್ಚಪ್ಪ ಮಾಸ್ತರ್, ಲಕ್ಷ್ಮಮ್ಮ ಗಡೇಮನೆ, ಗೌರಮ್ಮ ಹುಚ್ಚಪ್ಪ ಮಾಸ್ತರ್, ಅಂತೆಯೇ ಹಸೆಚಿತ್ತಾರವನ್ನು ಪ್ರಸಿದ್ಧಗೊಳಿಸುವಲ್ಲಿ ಶಿರವಂತೆ ಚಂದ್ರಶೇಖರ್ ಅವರ ಪಾತ್ರ ದೊಡ್ಡದು. ಇನ್ನು ನಮ್ಮ ಭಾಗದ ಡೊಳ್ಳು ಕುಣಿತ, ಹೆಗ್ಗೋಡಿನ ನೀನಾಸಂ, ರಷ್ಯಾಕ್ಕೆ ಡೊಳ್ಳು ಕೊಡ್ಯೊಯ್ದ ಟಾಕಪ್ಪ ಅವರು, ಮಹಿಳೆಯರಿಗಾಗಿ ಡೊಳ್ಳು ಕಲಿಸಿ ಜನಪ್ರಿಯಗೊಳಿಸಿದ ಚೂಡಾಮಣಿ ರಾಮಚಂದ್ರ ಅವರ ಕಾರ್ಯ ವೈಖರಿ ದೊಡ್ಡದು ಎಂದು ಹೇಳಿದರು.
    ಸಾಗರದ ನೆಲದಲ್ಲಿ ನಡೆದ ಕಾಗೋಡು ಚಳವಳಿ ದೇಶದ ಹೋರಾಟದ ದಿಕ್ಕನ್ನೇ ಬದಲಿಸಿತು, ಗೇಣಿ ರೈತರಿಗೆ ಜಮೀನು ಕೊಡಿಸುವಲ್ಲಿ ನಮ್ಮೂರಿನ ಸಮೀಪ ಇರುವ ಕಾಗೋಡು ಗ್ರಾಮದಲ್ಲಿ ಡಾ. ಎಚ್.ಗಣಪತಿಯಪ್ಪ ಅವರು ನಡೆಸಿದ ಹೋರಾಟ, ಅದನ್ನು ವ್ಯವಸ್ಥಿತವಾಗಿ ಜನತೆಗೆ ತಲುಪಿಸುವಲ್ಲಿ ಕಾಗೋಡು ತಿಮ್ಮಪ್ಪ ಅವರು ಕೈಗೊಂಡ ಕಾರ್ಯಕ್ರಮಗಳು ಎಂದಿಗೂ ಸ್ಮರಣೀಯ. ಅಲ್ಲದೇ ನಮ್ಮ ಪ್ರದೇಶದ ಜನ ರಾಜ್ಯದ ಜನತೆಗೆ ಬೆಳಕು ನೀಡುವುದಕ್ಕಾಗಿ ಭೂಮಿ, ಬದುಕು ಕಳೆದುಕೊಂಡರು. ಆದರೆ ಅವರಿಗೆ ಈವರೆಗೂ ಪುನರ್ವಸತಿ ಸೌಲಭ್ಯ ಸಿಕ್ಕಿಲ್ಲ ಎಂಬ ಕೊರಗು ಕಾಡುತ್ತಿದೆ, ಇನ್ನಾದರೂ ಸರ್ಕಾರ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ವಿನಂತಿ ಎಂದು ಹೇಳಿದರು.
    ನಮ್ಮ ತಾಳಗುಪ್ಪ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ, ಭತ್ತದ ಗದ್ದೆಗಳು ವರದೆ ಉಕ್ಕುವುದರಿಂದ ಜಲಾವೃತವಾಗುತ್ತದೆ, ಬೀಸನಗದ್ದೆ ದ್ವೀಪವಾಗಿ ಬಿಡುತ್ತದೆ, ಪ್ರತಿ ವರ್ಷ ಇದಕ್ಕೆ ಪ್ರಚಾರ ದೊರಕುತ್ತದೆ. ಆಧುನಿಕ ತಂತ್ರಜ್ಞಾನ ಮುಂದುವರಿದಿದ್ದರೂ ಈ ಸಮಸ್ಯೆ ಪರಿಹಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಗ್ರಾಮೀಣ ಪ್ರತಿಭೆಗಳು ಹಿಮ್ಮುಖ:
    ಪ್ರತಿಯೊಬ್ಬ ಮನುಷ್ಯನು ತನ್ನ ಭಾವನೆಯನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಗೊಳಿಸುತ್ತಾನೆ, ಆಧುನಿಕತೆಯ ಭರಾಟೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಯಲ್ಲಿ ನಿಜವಾದ ಸಾಹಿತ್ಯ ಕೃಷಿ ಮಾಡುವ ಗ್ರಾಮೀಣ ಪ್ರತಿಭೆಗಳು ಇಂದು ಹಿಮ್ಮುಖರಾಗುತ್ತಿದ್ದಾರೆ ಅದಕ್ಕೆ ಬದುಕಿನ ಸವಾಲುಗಳೇ ಕಾರಣವಾಗಿದೆ ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಯುವ ಸಾಹಿತಿ ಪೃಥ್ವಿ ಎಸ್.ಸಾಗರ್ ಹೇಳಿದರು. ಸರ್ಕಾರ ಶಿಕ್ಷಣಕ್ಕೆ ಎಷ್ಟು ಆದ್ಯತೆ ನೀಡುತ್ತದೆಯೋ ಅಷ್ಟೇ ಪ್ರಾತಿನಿಧ್ಯತೆಯನ್ನು ಮಕ್ಕಳ ಸಾಹಿತ್ಯ, ಕಲೆ, ಸಂಸ್ಕೃತಿ, ಅಭ್ಯಾಸಕ್ಕೆ, ಪ್ರತಿಭೆಗೆ ಆದ್ಯತೆ ನೀಡಬೇಕು. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಪ್ರತ್ಯೇಕವಾಗಿ ನಡೆಸುವುದರಿಂದ ಅವರ ಪ್ರತಿಭೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ ಎಂದರು.
    ಪ್ರತಿಭೆ ಅನಾವರಣ ಆಗಲಿ:
    ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಕೆಲಸ ಆಗಬೇಕಾಗಿದೆ. ಅಂತಹ ಕೆಲಸಗಳಿಗೆ ಮಕ್ಕಳ ಸಾಹಿತ್ಯ ಸಮ್ಮೇಳನ ಎನ್ನುವುದು ಉತ್ತರ ನೀಡುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು. ಚಿಕ್ಕಮಕ್ಕಳ ಕೈಯಲ್ಲಿ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಕೊಟ್ಟು ಅವರ ಅಭಿವ್ಯಕ್ತಿ ಮತ್ತು ಕಲ್ಪನೆಗಳನ್ನೇ ನಾಶಮಾಡುತ್ತಿದ್ದೇವೆ. ಪಾಲಕರು ಅವುಗಳ ಬಳಕೆಗೆ ಒಂದು ಕಡಿವಾಣ ಹಾಕಿಕೊಂಡರೆ ವ್ಯವಸ್ಥೆಗಳು ಸರಿಯಾಗುತ್ತವೆ. ಜಿಲ್ಲಾದ್ಯಂತ ನಡೆಸುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನಾದಲ್ಲಿ ಮಕ್ಕಳು ನಿರೀಕ್ಷೆಗೆ ಮೀರಿ ತೊಡಗಿಕೊಳ್ಳುತ್ತಿದ್ದಾರೆ, ಇದು ಆರೋಗ್ಯಕರ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts