More

    ಕನ್ನಡ ಕಲಿಕೆ ಗಂಭೀರ ಚಿಂತನೆಯಾಗಲಿ

    ಸಿಂದಗಿ: ನಮ್ಮ ಮಕ್ಕಳಿಗೆ ಏಳನೆಯ ತರಗತಿವರೆಗೂ ಮಾತೃಭಾಷೆ ಕನ್ನಡವನ್ನು ಕಡ್ಡಾಯಗೊಳಿಸಬೇಕಿದೆ. ಹೊಸ ಶಿಕ್ಷಣ ನೀತಿ ಮಕ್ಕಳಿಗೆ ಪ್ರಥಮ ತರಗತಿಯಿಂದಲೇ ಇಂಗ್ಲಿಷ್ ಭಾಷಾ ಹೇರಿಕೆಯಿಂದಲೇ ಆರಂಭಗೊಳ್ಳುತ್ತಿರುವುದು ಆತಂಕದ ಸಂಗತಿ. ಇದರಿಂದ ಕನ್ನಡ ಭಾಷೆಗೆ ಬಹು ದೊಡ್ಡ ಪೆಟ್ಟು ಬಿದ್ದು, ಶೈಕ್ಷಣಿಕ ಆರಂಭಿಕ ಹಂತದಲ್ಲಿ ಮಗುವಿಗೆ ಅನ್ಯ ಭಾಷೆ ಪ್ರಭುದ್ಧತೆ ಬರದು. ಈ ಕ್ರಮವನ್ನು ಹೋಗಲಾಡಿಸಲು, ಕನ್ನಡ ಕಲಿಕೆಗೆ ಗಂಭೀರ ಚಿಂತನೆ ನಡೆಬೇಕಿದೆ ಎಂದು ಸರ್ವಾಧ್ಯಕ್ಷ ರಾ.ಶಿ. ವಾಡೇದ ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಹೇಳಿದರು.

    ಗುರುವಾರ ಎಚ್.ಜಿ. ಕಾಲೇಜು ಆವರಣದ ದಿ. ಎಂ.ಸಿ. ಮನಗೂಳಿ ವೇದಿಕೆಯಲ್ಲಿ ಜರುಗಿದ ಸಿಂದಗಿ ತಾಲೂಕು ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವಾತಂತ್ರೃ ಸಂಗ್ರಾಮ, ಗೋಕಾಕ ಚಳುವಳಿಗಳಿಗೆ ಸಾರಥ್ಯ ಪಡೆದ ಸಿಂದಗಿ, ಶೈಕ್ಷಣಿಕ, ಸಾಹಿತ್ಯಿಕ ಮತ್ತು ಭಾವೈಕ್ಯತೆಯ ಬಿಂಬಗಳಲ್ಲಿ ಬೆಳೆದು ನಿಂತಿದೆ. ಅಲ್ಪ ಪ್ರಮಾಣದ ನೀರಾವರಿ ಹೊಂದಿರುವ ಈ ಕ್ಷೇತ್ರವು ಬರಗಾಲದ ಬವಣೆಯಿಂದ ಹೊರತಾಗಿಲ್ಲ. ಕೊಂಡಗೂಳಿ ಕೇಶಿರಾಜನ ಕಾವ್ಯ ರಚನೆಯಿಂದ ಆರಂಭವಾಗಿ, ವಿವಿಧ ಕ್ಷೇತ್ರ ಸಾಧಕರನ್ನು ಹೊತ್ತು ನಿಂತಿದೆ. ಮಕ್ಕಳ ಸಾಹಿತ್ಯ, ಪ್ರೌಢ ಸಾಹಿತ್ಯ ಪ್ರಕಾರಗಳಲ್ಲೂ ತನ್ನದೇ ಆದ ಪ್ರೌಢಿಮೆ ಮೆರೆದು ನಿಂತಿದೆ. ಕರ್ನಾಟಕದಲ್ಲಿ ಕನ್ನಡದ ಅಂಕಿಗಳು ಮೊಳಗಬೇಕು. ಕನ್ನಡ ನಾಮಫಲಕಗಳು ರಾರಾಜಿಸಬೇಕು. ಶಿಕ್ಷಣದಲ್ಲಿ ಸಾಹಿತ್ಯ ಕಲಿಕೆ ಅಳವಡಿಸಬೇಕು. ದೂರದರ್ಶನದ ಮೂಲಕ ನೈತಿಕತೆಯ ಪಾಠಗಳನ್ನು ಬಿತ್ತರಿಸುವಂತಾಗಬೇಕು. ಉತ್ತರ ದಕ್ಷಿಣ ಭಾವ ತೊರೆಯಬೇಕು. ಪ್ರಾಚೀನ ದೇಗುಲಗಳನ್ನು ಸಂರಕ್ಷಿಸಬೇಕು. ಲೇಖಕ ಪ್ರಕಾಶಕರುಗಳಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದರು.

    ಶಾಸಕ ಅಶೋಕ ಮನಗೂಳಿ ಮಾತನಾಡಿ, ನಮ್ಮ ಪೂರ್ವಜರು ಮತ್ತು ನಾವು ಕಂಡ ಕನ್ನಡ ನಾಡಿನ ಸಾವಿರಾರು ವರ್ಷದ ಭವ್ಯ ಪರಂಪರೆಯ ಕರ್ನಾಟಕದ ಗತವೈಭವವನ್ನು ಭವಿಷ್ಯದ ಪೀಳಿಗೆಗೂ ಪಸರಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

    ಸರ್ವಾಧ್ಯಕ್ಷರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಕ್ಷೇತ್ರದ ನೀರಾವರಿಗೆ ಆದ್ಯತೆ ನೀಡಲು ಸೂಚಿಸಿದ್ದಾರೆ. ಸಂಪೂರ್ಣ ನೀರಾವರಿಗಾಗಿ ಈಗಾಗಲೇ ಫೆ. 21ರಂದು ಸಿಎಂ ಅವರ ಸಭೆಯಲ್ಲಿ ಚಿಮ್ಮಲಗಿ ಏತ ನೀರಾವರಿಯ ಕೋರವಾರ ಬ್ರಾೃಂಚ್ ಕ್ಯಾನಲ್‌ಗೆ 99.66ಕೋಟಿ ರೂ. ಅನುದಾನ ಮಂಜೂರಿ ಆಗಿದೆ. ನಮ್ಮ ತಂದೆ ಕಾಲದಲ್ಲಿ ಡಿಸ್ಟ್ರಿಬ್ಯೂಟರ್, ಲ್ಯಾಟರಲ್ ಮಂಜೂರಿ ಆಗಿರಲಿಲ್ಲ. ಸದ್ಯ ಈ ಅನುದಾನದಲ್ಲಿ ನಿರ್ಮಾಣಗೊಳ್ಳಲಿವೆ. ಜಿಲ್ಲೆಯನ್ನು ವಿಭಜಿಸಿ ಮತ್ತೊಂದು ಜಿಲ್ಲೆಯನ್ನು ಮಾಡಿದರೆ ನಮ್ಮದು ಮೊದಲ ಕೂಗಾಗಲಿದೆ ಎಂದರು.

    ನನ್ನ ಅಧಿಕಾರವಧಿಯಲ್ಲಿ ಚಿಮ್ಮಲಗಿ ಏತ ನೀರಾವರಿ ಮೂಲಕ ಕ್ಷೇತ್ರದ ರೈತರಿಗೆ ನೀರು ಒದಗಿಸುವುದು. ಚಾಲುಕ್ಯ ಹಾಗೂ ಹೊಯಸ್ಸಳರ ಕಾಲದ ಐತಿಹಾಸಿಕ ದೇಗುಲಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ಸಿಂದಗಿ ಜಿಲ್ಲಾ ಕೂಗನ್ನು ಗಟ್ಟಿಗೊಳಿಸುವ ಮೂರು ವಿಚಾರಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವೆ ಎಂದರು.

    ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು, ಶಾಂತಗಂಗಾಧರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಪಟ್ಟಣಶೆಟ್ಟಿ, ಅನ್ನಪೂರ್ಣ ಬೆಳಮಗಿ, ಆನಂದ ಭೂಸನೂರ, ಆರ್.ಎಚ್. ಬಿರಾದಾರ, ಝಾಕೀರ್‌ಹುಸೇನ ಮನಿಯಾರ, ಅಶೋಕ ಗಾಯಕವಾಡ, ಸಂತೋಷ ಮಣಗಿರಿ, ಶಿವಶರಣ ಗುಂದಗಿ, ಅಭಿಷೇಕ ಚಕ್ರವರ್ತಿ ಮತ್ತಿತರರಿದ್ದರು.
    ರಾಘವೇಂದ್ರ ಸಂಗೀತ ಪಾಠಶಾಲೆ ಬಳಗ ಪ್ರಾರ್ಥಿಸಿದರು. ರಾಗರಂಜಿನಿ ಸಂಗೀತ ಅಕಾಡೆಮಿ ತಂಡ ನಾಡಗೀತೆ ಹೇಳಿದರು. ಸಪ್ತಸ್ವರ ಸಂಗೀತ ಪಾಠಶಾಲೆ ಬಳಗ ರೈತಗೀತೆ ಹಾಡಿದರು. ಅಶೋಕ ಬಿರಾದಾರ ಸ್ವಾಗತಿಸಿದರು. ಪ್ರೊ. ರವಿ ಗೋಲಾ ನಿರೂಪಿಸಿದರು. ಎಸ್.ಎಂ. ಬಿರಾದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts