More

    ಕನ್ನಡಿಗರ ಮೇಲೆ ದೌರ್ಜನ್ಯ ಸಲ್ಲ

    ಬಾಗಲಕೋಟೆ: ಬೆಳಗಾವಿ ವಿವಾದ ಕೆಣಕಿ ಮಹರಾಷ್ಟ್ರದಲ್ಲಿ ಕನ್ನಡಿಗರು ಮೇಲೆ ಹಾಗೂ ಅವರ ಸಂಸ್ಥೆ, ಆಸ್ತಿ ಪಾಸ್ತಿಗಳ ಮೇಲೆ ದಾಳಿ ಮಾಡುತ್ತಿರುವ ಗೂಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಕರವೇ ಕಾರ್ಯಕರ್ತರು ಮಹಾರಾಷ್ಟ್ರದ ಸರ್ಕಾರದ ಸಚಿವರು, ಎಂಇಎಸ್ ಸಂಘಟನೆ ಮುಖಂಡರ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
    ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಕರ್ನಾಟಕ ಅನೇಕ ಕನ್ನಡ ಪ್ರದೇಶಗಳನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಆಗಬಾರದು ಎನ್ನುವ ಕಾರಣಕ್ಕೆ ಕನ್ನಡಿಗರು ಸಹನೆ ತೆಗೆದುಕೊಂಡಿದ್ದಾರೆ. ಅಪ್ಪಟ ಕನ್ನಡ ನೆಲವಾದ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ದಶಕಗಳಿಂದ ತಗಾದೆ ತೆಗೆದು ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮೇಲಿಂದ ಮೇಲೆ ಮಾಡುತ್ತದೆ. ಮಹಜನ್ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತ ತೀರ್ಪು ನೀಡಿದೆ. ಆದರೇ ಮಹರಾಷ್ಟ್ರದ ರಾಜಕೀಯಗೋಸ್ಕರ ಅಲ್ಲಿನ ರಾಜಕೀಯ ನಾಯಕರು ಕನ್ನಡಿಗರು, ಮರಾಠಿಗರ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬೆಳಗಾವಿ ವಿವಾದ ಈಗ ಸುಪ್ರೀಂಕೋರ್ಟನಲ್ಲಿ ವಿಚಾರಣೆ ಬಾಕಿ ಇದೆ. ಈ ನೆಲದ ಕಾನೂನಿಗೆ ಗೌರವ ನೀಡಿ ತೀರ್ಪಿಗಾಗಿ ಕಾಯುವ ಬದಲು ಬೆಳಗಾವಿ ವಿಷಯ ಪದೇ ಪದೇ ಮುನ್ನೆಲೆ ತಂದು ಸಂಘರ್ಷ ನಡೆಸಲು ಯತ್ನಿಸಲಾಗುತ್ತಿದೆ. ಪ್ರಮುಖವಾಗಿ ಎಂಇಎಸ್ ಸಂಘಟನೆ ಅಶಾಂತಿಗೆ ಕುಮ್ಮಕ್ಕು ನೀಡುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.
    ಇನ್ನು ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಕನ್ನಡಿಗರ ಮೇಲೆ ಹಲ್ಲೆ, ಅವರ ಆಸ್ತಿ-ಪಾಸ್ತಿ ಹಾನಿ ಉಂಟು ಮಾಡುವ ಘಟನೆಗಳು ನಡೆಯುತ್ತೀವೆ. ಕನ್ನಡಿಗರ ಸಂಸ್ಥೆಗಳನ್ನು ಗುರಿ ಮಾಡಲಾಗುತ್ತಿದೆ. ಕೂಡಲೇ ಅಲ್ಲಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕರವೇ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
    ಮುಖಂಡರಾದ ಮಲ್ಲು ಕಟ್ಟಿಮನಿ, ಆತ್ಮರಾಮ ನೀಲನಾಯಕ, ಬಸವರಾಜ ಅಂಬಿಗೇರ, ಡಿ.ಡಿ.ನದಾಫ ಗಣೇಶ ನಾಯಕ, ರಾಹುಲ್ ಶೆಟ್ಟರ, ಮುತ್ತು ಮ್ಯಾಗೇರಿ, ನಚಿಕೇತ ಬಟಕುರ್ಕಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts