More

    ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಕಷ್ಟವಲ್ಲ

    ಧಾರವಾಡ: ವೈದ್ಯಕೀಯ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡುವುದು ಕಷ್ಟವಲ್ಲ. ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ವಹಿಸುವುದೇ ಮುಖ್ಯವಾಗಿದೆ ಎಂದು ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಎಂ.ಕೆ. ರಮೇಶ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ವೈದ್ಯ ಬರಹಗಾರರ ತೃತೀಯ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
    ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಇರಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಕಲಿಕೆ ಕಡ್ಡಾಯ ಮಾಡಬೇಕು. ಕನ್ನಡ ಅನ್ನದ ಭಾಷೆಯಾದರೆ ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚುವುದು ನಿಶ್ಚಿತ ಎಂದರು.
    ಸಮ್ಮೇಳನದ ಸರ್ವಾಧ್ಯಕ್ಷ ಡಾ. ಪಿ.ಎಸ್. ಶಂಕರ ವೈದ್ಯ ಸಂಪದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ನೀಡುವುದು ಕಷ್ಟ. ಆದರೆ, ಅಸಾಧ್ಯವಲ್ಲ. ಮೊದಲು ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಶಿಕ್ಷಕರನ್ನು ರೂಪಿಸುವುದು ಅಗತ್ಯ. ಆರಂಭಿಕ ಹಂತದಲ್ಲಿ ಅರೆ ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸಬೇಕು. ಈ ಕುರಿತು ಬಹುತೇಕ ಪಠ್ಯಕ್ರಮ ಕನ್ನಡದಲ್ಲಿ ಲಭ್ಯವಿದೆ ಎಂದರು.
    ಬಸವಪ್ರಭು ಹೊಸಕೇರಿ ಮಾತನಾಡಿ, ಈವರೆಗೆ ವಿವಿಧ ಕಾರಣಗಳಿಗೆ 110 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಪ್ರಾದೇಶಿಕ ಭಾಷೆಗಳನ್ನು ಉಳಿಸುವ ದಿಸೆಯಲ್ಲಿ ಮತ್ತೊಮ್ಮೆ ಸಂವಿಧಾನ ತಿದ್ದುಪಡಿ ಮಾಡುವುದು ಅವಶ್ಯಕ. ಇದಕ್ಕೆ ಎಲ್ಲ ಕನ್ನಡ ಪ್ರೇಮಿಗಳು ಒಂದಾಗಿ ಧ್ವನಿ ಎತ್ತಬೇಕು ಎಂದರು.
    ಡಾ. ನಾ. ಸೋಮೇಶ್ವರ ಹಾಗೂ ಡಾ. ವೀಣಾ ಸುಳ್ಯ ಅವರ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಡಾ. ನಾ. ಸೋಮೇಶ್ವರ ಹಾಗೂ ಡಾ. ಕೆ.ಎಸ್. ಪವಿತ್ರಾ ಅವರಿಗೆ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಡಾ. ಸರೋಜಾ, ಡಾ. ಸುರೇಶ ಕುಡ್ವಾ ಮಾತನಾಡಿದರು. ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ, ಡಾ. ರೂಪಾ ಜೋಶಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts