More

    ಕದಂಬೋತ್ಸವ ಜನರ ಉತ್ಸವ

    ಶಿರಸಿ: ಕದಂಬೋತ್ಸವ ನಿಮಿತ್ತ ಕದಂಬ ಜ್ಯೋತಿ ಉದ್ಘಾಟನೆ ಗುಡ್ನಾಪುರದ ಕದಂಬರಾಜ ರವಿವರ್ಮನ ಅರಮನೆ ಆವರಣದಲ್ಲಿ ಗುರುವಾರ ನೆರವೇರಿತು. ಗುಡ್ನಾಪುರದ ಬಂಗಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕದಂಬ ಜ್ಯೋತಿಯನ್ನು ಹತ್ತಿರದ ರಾಣಿ ನಿವಾಸದವರೆಗೆ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದ ಮೆರವಣಿಗೆ ಮೂಲಕ ತರಲಾಯಿತು.

    ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಕದಂಬ ಜ್ಯೋತಿ ಉದ್ಘಾಟಿಸಿ ಮಾತನಾಡಿ, ಕದಂಬೋತ್ಸವ ಜನರ ಉತ್ಸವವಾಗಿದೆ. ಕದಂಬ ವಂಶದ ಕೊಡುಗೆಗಳನ್ನು ನಾಡಿನ ಉದ್ದಗಲಕ್ಕೂ ಹರಡುವಂತೆ ಮಾಡಲು ಉತ್ಸವ ಪೂರಕವಾಗಿದೆ ಎಂದರು.

    ಜಿಲ್ಲಾಧಿಕಾರಿ ಕೆ. ಹರೀಶಕುಮಾರ ಮಾತನಾಡಿ, ಮುಂದಿನ ವರ್ಷದಿಂದ ಸರ್ಕಾರದ ಸ್ವಂತ ಅನುದಾನದಲ್ಲಿ ನಿಗದಿತ ದಿನದಂದು ನಡೆಸಲು ಕ್ರಮವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.

    ಗುಡ್ನಾಪುರ ಗ್ರಾಪಂ ಅಧ್ಯಕ್ಷ ಭೋಜಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಉಷಾ ಹೆಗಡೆ, ಬನವಾಸಿ ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಗುಡ್ನಾಪುರ ಗ್ರಾಪಂ ಉಪಾಧ್ಯಕ್ಷ ಫಿಲಿಪ್ ಪಿಂಟೋ, ಮುಂಡಗೋಡ ತಹಸೀಲ್ದಾರ್ ಶ್ರೀಧರ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ತಾಪಂ ಇಒ ಎಫ್.ಜಿ. ಚಿನ್ನಣ್ಣನವರ, ಡಿಡಿಪಿಐ ದಿವಾಕರ ಶೆಟ್ಟಿ, ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ವಿ.ಆರ್. ನಾಗರಾಜ, ಇತರರಿದ್ದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಸ್ವಾಗತಿಸಿದರು. ಉದಯಕುಮಾರ ಕಾನಳ್ಳಿ ನಿರ್ವಹಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮ

    ಕಾರ್ಯಕ್ರಮದ ಅಂಗವಾಗಿ ಗುಡ್ನಾಪುರದ ರಾಣಿ ನಿವಾಸದಲ್ಲಿ ಶಿರಸಿಯ ಪ್ರಕಾಶ ಹೆಗಡೆ ಅವರ ಭಕ್ತಿಗೀತೆ, ಗುಡ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಕಿರುನಾಟಕ, ಅಭಿಷೇಕ ನೇತ್ರೇಕರ ಅವರಿಂದ ಮೂನ್ ವಾಕರ್ ನೃತ್ಯ, ಸ್ನೇಹಶ್ರೀ ಹೆಗಡೆ ಅವರ ರಿಂಗ್ ಡಾನ್ಸ್, ಸ್ಮಾರ್ಟ್ ಗ್ರುಪ್ ಕಲಾವಿದರಿಂದ ಆಧುನಿಕ ನೃತ್ಯ, ನೈದಿಲೆ ಹೆಗಡೆ ಅವರಿಂದ ಹಿಂದುಸ್ತಾನಿ ಸಂಗೀತ, ದಿವ್ಯಶ್ರೀ ಶೇಟ್ ಅವರಿಂದ ದೇವಿ ನೃತ್ಯ ವೈಭವ ರೂಪಕ, ಶ್ರುತಿ ಭಟ್ಟ ಹಾಗೂ ತಂಡದವರಿಂದ ಸುಗಮ ಸಂಗೀತ ಹಾಗೂ ಭಟ್ಕಳದ ಫ್ರೆಂಡ್ಸ್ ಮೆಲೋಡೀಸ್ ಕಲಾವಿದರಿಂದ ರಸಮಂಜರಿ ಪ್ರದರ್ಶನಗೊಂಡಿತು.

    ಮೂರು ದಿನ ಜ್ಯೋತಿ ಸಂಚಾರ

    ಬನವಾಸಿ ಕದಂಬೋತ್ಸವ ಕುರಿತು ಜನಸಮೂಹಕ್ಕೆ ಮಾಹಿತಿ ನೀಡುವ ಮತ್ತು ಆಹ್ವಾನಿಸುವ ಉದ್ದೇಶದಿಂದ ವಿವಿಧೆಡೆ ಕದಂಬ ಜ್ಯೋತಿ ಸಂಚರಿಸಲಿದೆ. ಈ ಮೊದಲು ಪ್ರಚಾರಾರ್ಥವಾಗಿ ಶಿವಮೊಗ್ಗದವರೆಗೆ ತೆರಳುತ್ತಿದ್ದ ಜ್ಯೋತಿ, ಈ ಬಾರಿ ಹಾವೇರಿ, ಹಾನಗಲ್ಲ, ಸಾಗರ ಮತ್ತಿತರೆಡೆ ಸಂಚರಿಸಲಿದೆ. ಮೂರು ದಿನಗಳವರೆಗೆ ಸಂಚರಿಸಿ ಅಂತಿಮವಾಗಿ ಕದಂಬೋತ್ಸವದ ಪ್ರಮುಖ ವೇದಿಕೆಗೆ ಆಗಮಿಸಲಿದೆ. ಈ ಜ್ಯೋತಿಯಿಂದಲೇ ಕದಂಬೋತ್ಸವ ಉದ್ಘಾಟಿಸಲಾಗುತ್ತದೆ. 1995ರಿಂದ ಈ ಆಚರಣೆ ಜಾರಿಯಲ್ಲಿದೆ.

    ಗೈರಾದ ಜನಪ್ರತಿನಿಧಿಗಳು

    ಕದಂಬ ಜ್ಯೋತಿ ಉದ್ಘಾಟನಾ ಸಮಾರಂಭಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಟಿ.ರವಿ, ಸಂಸದ ಅನಂತಕುಮಾರ ಹೆಗಡೆ ಗೈರು ಹಾಜರಿದ್ದರು. ಉದ್ಘಾಟನೆ ನೆರವೇರಿಸಬೇಕಿದ್ದ ಶಾಸಕ ಶಿವರಾಮ ಹೆಬ್ಬಾರ ಅವರು ಸಚಿವ ಸಂಪುಟ ಸೇರ್ಪಡೆ ನಿಮಿತ್ತ ಬೆಂಗಳೂರಿಗೆ ತೆರಳಿದ ಕಾರಣ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉದ್ಘಾಟನೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts