More

    ಕತ್ತಲೆ ಭಯಕಿಲ್ಲ ಬೆಳಕಿನ ಅಭಯ

    ಬೆಳಗಾವಿ: ಧೋಧೋ ಸುರಿಯುತ್ತಿರುವ ಮಳೆ, ಕಿವಿಗೆ ರಚ್ಚುವ ಹಾರ್ನ್​ ಸದ್ದು, ಕಣ್ಣು ಕುಕ್ಕುವ ವಾಹನಗಳ ಬೆಳಕು, ಸುತ್ತಮುತ್ತ ಒಂದೂ ವಿದ್ಯುತ್​ ದೀಪವಿಲ್ಲದೆ ಮಾರ್ದನಿಸುವ ಕಗ್ಗತ್ತಲು, ಇದೆಲ್ಲದರ ನಡುವೆ ಕಳ್ಳರ ಹಾವಳಿ ಇಂಥ ಭಯಾನಕ ಸನ್ನಿವೇಶ ಬೆಳಗಾವಿ ಹೃದಯ ಭಾಗದಲ್ಲಿ ಸಾಮಾನ್ಯವಾಗಿದೆ. ನಿತ್ಯವೂ ರಾತ್ರಿ ಇಲ್ಲಿ ಸಂಚರಿಸುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದೇ ಸಂಚರಿಸಬೇಕಿದೆ.

    ನಗರದಲ್ಲಿನ ಕೇಂದ್ರ ಬಸ್​ ನಿಲ್ದಾಣ, ಕೋಟೆ ಕೆರೆ ರಸ್ತೆ, ಪ್ರವಾಸಿ ಮಂದಿರ, ಅಶೋಕ ವೃತ್ತ, ಆರ್​ಟಿಒ ವೃತ್ತ, ಗಾಂಧಿ ನಗರ ರಸ್ತೆ, ಆಟೋನಗರ ರಸ್ತೆ, ಕಣಬರ್ಗಿ ರಸ್ತೆ, ಗೋವಾವೇಸ್​ ಸೇರಿ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆ ಹಳಿ ತಪ್ಪಿದೆ. ವಿದ್ಯುತ್​ ದೀಪಗಳು ಬೆಳಗುವುದು ದೂರುದ ಮಾತು. ಮೊದಲಿಗೆ ಅಲ್ಲಿ ವಿದ್ಯುತ್​ ದೀಪಗಳೇ ಇಲ್ಲದಿರುವುದರಿಂದ ಜನಪ್ರತಿನಿಧಿಗಳ ರ್ನಿಲಕ್ಷದ ವಿರುದ್ಧ ಸ್ಥಳಿಯರು ಹಾಗೂ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕೋಟೆ ಕೆರೆ ರಸ್ತೆ, ಅಶೋಕ ವೃತ್ತ, ಗಾಂಧಿ ನಗರ ರಸ್ತೆಗಳಲ್ಲಿ ನೂತನ ವಿದ್ಯುತ್​ ದೀಪಗಳನ್ನು ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಲಿಕೆ ಹಾಗೂ ಸ್ಮಾರ್ಟ್​ಸಿಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ವಿದ್ಯುತ್​ ಕಂಬ ಹಾಗೂ ದೀಪಗಳನ್ನು ಅಳವಡಿಸುವ ಕಾಮಗಾರಿ ಆರಂಭಿಸಿ ವರ್ಷವಾದರೂ ಇಂದಿಗೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂಬುದು ಸ್ಥಳಿಯ ಶಾಸಕರ ಇಚ್ಛಾಶಕ್ತಿ ಎಷ್ಟರಮಟ್ಟಿಗಿದೆ ಎಂಬುದನ್ನು ತೋರಿಸುತ್ತಿದ್ದು, ಬೆಳಗಾವಿ ಸ್ಮಾಟ್​ಸಿಟಿ ಕಾಮಗಾರಿ ಆಡೋಣ ಬಾ ಕೆಡಿಸೋಣ ಬಾ ಎಂಬಂತಾಗಿದೆ.
    ಸ್ಮಾರ್ಟ್​ ಸಿಟಿಯೋಜನೆಯಡಿ ನಡೆಯುತ್ತಿರುವ ಒಳಚರಂಡಿ ಹಾಗೂ ರಸ್ತೆ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಇಲೆಕ್ಟ್ರಿಕಲ್​ ಕೇಬಲ್​ಗಳು ತುಂಡಾಗಿವೆ.

    ಆರಂಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪಾಲಿಕೆಯಿಂದಲೇ ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದೂ ಸ್ಥಗಿತಗೊಂಡಿದ್ದು, ಸ್ಮಾರ್ಟ್​ಸಿಟಿ ಕಾಮಗಾರಿ ಪೂರ್ಣಗೊಂಡ ಬಳಿಕವೇ ಇನ್ನು ಆ ಮಾರ್ಗಗಳಲ್ಲಿ ಬೆಳಕಿನ ವ್ಯವಸ್ಥೆ ಆಗಲಿದೆ ಎನ್ನುವುದು ಪಾಲಿಕೆ ಅಧಿಕಾರಿಗಳ ಉತ್ತರ. ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರಿಗೆ ವಿಧಿಸಿರುವ ಷರತ್ತುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

    ಅಂಗಡಿ ಮುಚ್ಚಿಸಲಷ್ಟೇ ಗಸ್ತು!: ರ್ನಿಜನ ರಸ್ತೆಗಳಲ್ಲಿ ರಾತ್ರಿಹೊತ್ತು ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಅಪರಾಧ ಕೃತ್ಯಗಳೂ ಹೆಚ್ಚಾಗುತ್ತಿದ್ದು, ರಾತ್ರಿ ಪೊಲೀಸ್​ ಗಸ್ತು ಹೇಳಿಕೊಳ್ಳುವ ಹಾಗಿಲ್ಲ. ರಾತ್ರಿ ಹತ್ತರ ಸುಮಾರಿಗೆ ಅಂಗಡಿ&ಮುಂಗಟ್ಟುಗಳನ್ನು ಬಂದ್​ ಮಾಡಿಸಲು ಹೊಯ್ಸಳ ವಾಹನದಲ್ಲಿ ಬರುವ ಸಿಬ್ಬಂದಿ ಆ ಬಳಿಕ ಎಲ್ಲಿಯೂ ಕಾಣ ಸಿಗುವುದಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಳಗಾವಿ ರೈಲ್ವೆ ಹಾಗೂ ವಿಮಾನಗಳ ಮೂಲಕ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.

    ಹೀಗೆ ರಾತ್ರಿ ಬೆಳಗಾವಿಗೆ ಆಗಮಿಸುವವರು ಆಟೋ, ಖಾಸಗಿ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಅವರ ಸಂಬಂಧಿಗಳ ಮೂಲಕ ಮನೆ ಸೇರುತ್ತಿರುತ್ತಾರೆ. ಆದರೆ, ಪ್ರಮುಖ ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲದ ಕಾರಣ ಎಲ್ಲಿ? ಯಾವಾಗ? ಏನು ? ಎದುರಾಗುವುದೋ ಎಂಬ ಭಯ ಮನೆ ಮಾಡಿದೆ. ಹೀಗಾಗಿ ಪೊಲೀಸ್​ ಗಸ್ತು ಹೆಚ್ಚಿಸುವ ಮೂಲಕ ಅಭಯ ನೀಡಲಿ ಎನ್ನುವುದು ಸ್ಥಳಿಯ ನಿವಾಸಿಗಳ ಆಗ್ರಹ.

    ಅರ್ಧಕ್ಕರ್ಧ ದೀಪಗಳೇ ಮಾಯ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 58 ವಾರ್ಡ್​ಗಳಿದ್ದು, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಉದ್ದೇಶದಿಂದ 8 ಪ್ಯಾಕೇಜ್​ ರೂಪಿಸಿಕೊಳ್ಳಲಾಗಿದ್ದು, ಪ್ರತಿಯೊಂದ ಪ್ಯಾಕೇಜ್​ಗೂ ದೀಪಗಳನ್ನು ಅಳವಡಿಸಲು, ದುರಸ್ತಿಗೊಳಿಸಲು ತಲಾ ಒಂದು ವಾಹನ ನೀಡಲಾಗಿದೆ. ಕುರಬೆಟ್​, ಎ.ಜಿ.ಪವರ್​ ಸಿಸ್ಟಮ್​ ಹಾಗೂ ವಿಕ್ರಮ್​ ಎಂಟರ್​ಪೆಸಸ್​ ಎಂಬ ಮೂರು ಕಂಪನಿಗಳಿಗೆ ಬೀದಿ ದೀಪಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.

    ದಾಖಲೆಗಳ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 34,500 ಬೀದಿ ದೀಪಗಳಿವೆ. ಬಹುತೇಕ ರಸ್ತೆಗಳಲ್ಲಿ ಕೇವಲ ಕಂಬಗಳು ಮಾತ್ರ ಉಳಿದಿದ್ದು, ಅಲ್ಲಿ ದೀಪಗಳೇ ಇಲ್ಲ. ಅಲ್ಲೊಂದು ಇಲ್ಲೊಂದು ಎನ್ನುವಂತಿರುವ ಬೀದಿ ದೀಪಗಳನ್ನಾದರೂ ದುರಸ್ತಿ ಮಾಡಿ, ಬೆಳಕು ನೀಡುವಂತೆ ಸಾರ್ವಜನಿಕರು ನಿರಂತರವಾಗಿ ಪಾಲಿಕೆಗೆ ದೂರು ನೀಡುತ್ತಿದ್ದರೂ ಯಾವುದೇ ಪ್ರಯೋಜನ ಆಗದಿರುವುದು ವಿಪರ್ಯಾಸವೇ ಸರಿ.

    ಬಸ್​ ನಿಲ್ದಾಣದ ವ್ಯಾಪ್ತಿ ದಂಡು ಮಂಡಳಿಗೆ ಬರುತ್ತದೆ. ಆದರೂ, ಈ ಹಿಂದೆ ಎರಡ್ಮೂರು ಬಾರಿ ಪಾಲಿಕೆಯಿಂದಲೇ ದೀಪಗಳನ್ನು ಅಳವಡಿಸಲಾಗಿತ್ತು. ಸ್ಮಾರ್ಟ್​ಸಿಟಿಯ ವಿವಿಧ ಕಾಮಗಾರಿ ನಡೆಸುವ ವೇಳೆ ಯುಜಿ ಕೇಬಲ್​ ಮತ್ತು ಪ್ಯಾನಲ್​ ಬೋರ್ಡ್​ ಹಾಳಾಗಿವೆ. ದೀಪಗಳು ಉರಿಯದಿದ್ದರೆ ಟ್ರಾಫಿಕ್​ ಪೊಲೀಸ್​ ಸಿಬ್ಬಂದಿ ನಮ್ಮ ಗಮನಕ್ಕೆ ತರುತ್ತಿದ್ದರು. ಇದೀಗ ಪತ್ರಿಕೆ ಮೂಲಕ ತಿಳಿದುಬಂದಿದ್ದು, ಕೂಡಲೇ ದುರಸ್ತಿಗೆ ಕ್ರಮ ವಹಿಸಲಾಗುವುದು.
    | ಸುನಿಲ ಜೆ.ಕೆ. ಸಹಾಯಕ ಅಭಿಯಂತ,
    ಮಹಾನಗರ ಪಾಲಿಕೆ, ಬೆಳಗಾವಿ

    | ರವಿ ಗೋಸಾವಿ/ಶಿವಾನಂದ ಕಲ್ಲೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts