More

    ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಚಿಕಿತ್ಸೆ

    ಬೆಳಗಾವಿ/ನಿಪ್ಪಾಣಿ: ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಚಾರಿಟೇಬಲ್ ಆಧಾರದಲ್ಲಿ ಕನ್ಹೇರಿಯ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ‘ಸಿದ್ಧಗಿರಿ ಜನನಿ ಐವಿಎಫ್’ ಆಸ್ಪತ್ರೆ ಆರಂಭಿಸಲಾಗಿದ್ದು, ಈ ಆಸ್ಪತ್ರೆ ಬಡಜನರಿಗೆ ನೆರವಾಗಲಿದೆ ಎಂದು ಕೊಲ್ಲಾಪುರದ ಸಿದ್ಧಗಿರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಕೊಲ್ಲಾಪುರ ಜಿಲ್ಲೆಯ ಕನ್ಹೇರಿಯ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜೊಲ್ಲೆ ಉದ್ಯೋಗ ಸಮೂಹದ ಆಶ್ರಯದಲ್ಲಿ ನಿರ್ಮಿಸಿರುವ ‘ಸಿದ್ಧಗಿರಿ ಜನನಿ ಐವಿಎಫ್’ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ಧಗಿರಿ ಮಠದಿಂದ ಬಡವರಿಗಾಗಿ 12 ವರ್ಷದಿಂದ ಧರ್ಮ ಆಸ್ಪತ್ರೆ ನಡೆಯುತ್ತಿತ್ತು. ಈಗ ದೇಶದಲ್ಲಿ ಹೊಸದೆನ್ನುವಂತೆ ಜೊಲ್ಲೆ ಉದ್ಯೋಗ ಸಮೂಹದ ಆಶ್ರಯದಲ್ಲಿ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ಆರಂಭಿಸಲಾಗಿದೆ. ಹೊರಗಡೆ ಈ ಚಿಕಿತ್ಸೆಗೆ 1.5 ಲಕ್ಷ ರೂ.ನಿಂದ 3 ಲಕ್ಷ ರೂ. ವರೆಗೆ ಖರ್ಚಾಗುತ್ತದೆ. ಆದರೆ, ‘ಸಿದ್ಧಗಿರಿ ಜನನಿ ಐವಿಎಫ್’ನಲ್ಲಿ 5 ಸಾವಿರ ರೂ.ದಿಂದ 70 ಸಾವಿರ ರೂ. ಖರ್ಚಿನಲ್ಲಿ ಉಪಚಾರವಿದೆ. 10 ವರ್ಷಗಳ ಪರ್ಯಂತ ಅಂಡಾಣುಗಳನ್ನು ಪ್ರೀಜಿಂಗ್ ಮಾಡುವ ವ್ಯವಸ್ಥೆಯಿದೆ. ಬೇರೆ ಕಡೆ ಈ ಕಾರ್ಯಕ್ಕೆ ಲಕ್ಷಾಂತರ ರೂ. ಖರ್ಚಾಗುತ್ತದೆ. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಐವಿಎಫ್ ಕೇಂದ್ರ ನಿರ್ಮಾಣಕ್ಕೆ 3-4 ಕೋಟಿ ರೂ. ಖರ್ಚು ಮಾಡಿದ್ದರಿಂದ ಕೇಂದ್ರದಲ್ಲಿ ಕಡಿಮೆ ಖರ್ಚಿನಲ್ಲಿ ಇಂತಹ ಸೇವೆ ಆರಂಭಿಸುತ್ತಿದ್ದೇವೆ ಎಂದರು.

    ಬಹಳಷ್ಟು ದಂಪತಿ ಬಂಜೆತನದ ಬಗ್ಗೆ ಸಂಕಷ್ಟ ತೋಡಿಕೊಂಡಿದ್ದರ ಹಿನ್ನೆಲೆಯಲ್ಲಿ ಈ ಕೇಂದ್ರ ಆರಂಭಿಸಲಾಗಿದೆ. ಜನಸೇವೆಯಲ್ಲಿ ಮುಂಚೂಣಿಯಲ್ಲಿರುವ ಜೊಲ್ಲೆ ದಂಪತಿ ಈಗ ಬಂಜೆತನದಿಂದ ಬಳಲುತ್ತಿರುವ ಬಡ ದಂಪತಿ ಆಶಾಕಿರಣವಾಗಿ ಪರಿಣಮಿಸಿದ್ದಾರೆ ಎಂದರು.

    ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಇಂದಿನ ಆಧುನಿಕ ಯುಗದ ಒತ್ತಡದ ಬದುಕಿನಲ್ಲಿ ನೈಸರ್ಗಿಕವಾಗಿ ಗರ್ಭಿಣಿಯರಾಗುವುದು ಹಾಗೂ ಹೆರಿಗೆಗಳಾಗುವುದು ಕಡಿಮೆಯಾಗಿದೆ. ಸೇವಿಸುವ ಆಹಾರ, ಪರಿಸರದಲ್ಲಾದ ಬದಲಾವಣೆಯಿಂದಾಗಿ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಮಕ್ಕಳಾಗದಿದ್ದಲ್ಲಿ ಮಹಿಳೆಯರು ಕುಗ್ಗುತ್ತಿದ್ದಾರೆ. ಪುರುಷರು ಮತ್ತೊಂದು ಮದುವೆಯಾಗುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಒಡೆಯುತ್ತಿವೆ. ಹೀಗಾಗಿ ಸಂಕಷ್ಟದಲ್ಲಿರುವ ದಂಪತಿಗೆ ನೆರವಾಗಲೆಂದು ನಾವು ಐವಿಎಫ್ ಕೇಂದ್ರ ಆರಂಭಿಸಿದ್ದೇವೆ. ಕಡಿಮೆ ಖರ್ಚಿನಲ್ಲಿ ಸೇವೆ ಆರಂಭಿಸುತ್ತಿದ್ದೇವೆ ಎಂದರು.

    ಬೇರೆ ಐವಿಎಫ್ ಕೇಂದ್ರದಲ್ಲಿ ಈ ಚಿಕಿತ್ಸೆಗೆ ಸುಮಾರು 2.50 ಲಕ್ಷ ರೂ. 3 ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ. ಆದರೆ, ಬಡವರಿಗೆ ಇದು ಅಸಾಧ್ಯ. ಇಂತಹ ಸಂಕಷ್ಟಗಳನ್ನು ಬಹಳಷ್ಟು ಜನರು ಹೇಳಿದ್ದರಿಂದ ಐವಿಎಫ್ ಕೇಂದ್ರ ಸ್ಥಾಪಿಸಿದ್ದೇವೆ. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಇಲ್ಲಿನ ವೈದ್ಯರು ಸೇವೆ ಒದಗಿಸುವುದಕ್ಕೆ ಮುಂದಾಗಿದ್ದಾರೆ. ಈ ಐವಿಎಫ್ ಕೇಂದ್ರದಲ್ಲಿ ಅಲೋಪಥಿ, ಆಯುರ್ವೇದ ಹಾಗೂ ಯೋಗ ಈ ಮೂರು ಅಂಶಗಳ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದರು.

    ಜನನಿ ಐವಿಎಫ್ ಕೇಂದ್ರದ ಮುಖ್ಯ ನಿರ್ದೇಶಕಿ ಡಾ. ವರ್ಷಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ಲೋಕಾಯುಕ್ತ ಎಸ್.ಪಿ. ಯಶೋದಾ ವಂಟಗೋಡಿ ಮಾತನಾಡಿ, ಮರಾಠಿ ಚಲನಚಿತ್ರ ನಟಿ ದೀಪಾಲಿ ಸಯ್ಯದ್ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಆಸ್ಪತ್ರೆ ನಿರ್ದೇಶಕ ಡಾ.ಶಿವಶಂಕರ ಮರಜಕ್ಕೆ, ಡಾ.ರೂಪಾಲಿ ಚಂದ್ರಶೇಖರ, ಡಾ. ಚಂದ್ರಶೇಖರ ಎಂ.ಎಸ್. ಇತರರಿದ್ದರು. ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ಆರ್.ವೈ. ಪಾಟೀಲ, ಮನಿಷಾ ರಾಂಗೋಳೆ, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ರಾಜೇಂದ್ರ ಗುಂದೇಶಾ ಇದ್ದರು. ಶುಭಾಂಗಿ ಶೇಲಾರ ನಿರೂಪಿಸಿದರು.

    ಸಿದ್ಧಗಿರಿ ಐವಿಎ್ ಕೇಂದ್ರದಲ್ಲಿ ಕಡು ಬಡವರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ಕಲ್ಪಿಸುವುದಕ್ಕೆ ದಾನಿಗಳ ಮೂಲಕವೂ ನೆರವು ಪಡೆಯುತ್ತೇವೆ. ಜತೆಗೆ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿ ಪಡೆಯುವುದಕ್ಕೆ ಪ್ರಯತ್ನಿಸುತ್ತೇವೆ.
    | ಶಶಿಕಲಾ ಜೊಲ್ಲೆ, ಮುಜರಾಯಿ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts