More

    ಕಡಲೆ ಬೆಳೆಗೆ ಸಿಗದ ಬೆಲೆ!

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ನರೇಗಲ್ಲ ಹೋಬಳಿಯ ಪ್ರಮುಖ ಹಿಂಗಾರಿ ವಾಣಿಜ್ಯ ಬೆಳೆ ಕಡಲೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ಡ.ಸ. ಹಡಗಲಿ, ಯರೇಬೇಲೇರಿ, ಗುಜಮಾಗಡಿ, ಕುರಡಗಿ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿಕೊಪ್ಪ ಸೇರಿ ನರೇಗಲ್ಲ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿತ್ತು. ರೋಗ, ಕೀಟ ಭಾದೆ ಮಧ್ಯೆಯೂ ಉತ್ತಮ ಇಳುವರಿ ಬಂದಿದೆ. ಫಸಲು ಕೂಡ ರೈತರ ಕೈಸೇರಿದೆ. ಆದರೆ, ಅದಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    ಖರ್ಚು ಜಾಸ್ತಿ: ಒಂದು ಎಕರೆ ಕಡಲೆ ಬೆಳೆಯಲು ಕನಿಷ್ಠ 15- 20 ಸಾವಿರ ರೂ. ಖರ್ಚು ಬರುತ್ತದೆ. ದುಬಾರಿ ಬೆಲೆಯ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿ ಬಿತ್ತನೆ ಕಾರ್ಯ, ಎಡೆ ಹೊಡೆಯುವುದು, ಕಡಲೆ ಕಿತ್ತು ರಾಶಿ ಮಾಡಲು ಸಾಕಷ್ಟು ಪರಿಶ್ರಮದೊಂದಿಗೆ ಸಾಕಷ್ಟು ಹಣವೂ ಖರ್ಚಾಗುತ್ತದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ ಕೇವಲ 3 ಸಾವಿರದಿಂದ 3,500 ರೂ. ದರ ಇದೆ. ಅನಿವಾರ್ಯವಾಗಿ ರೈತರು ಬೇಕಾಬಿಟ್ಟಿ ದರಕ್ಕೆ ಕಡಲೆ ಮಾರಾಟ ಮಾಡುತ್ತಿದ್ದಾರೆ.

    ಕೇಂದ್ರ ಸರ್ಕಾರ 2017-18ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಗೆ ಕ್ವಿಂಟಾಲ್​ಗೆ ಒಟ್ಟು 4,400 ರೂ. ಬೆಂಬಲ ಬೆಲೆ ಘೊಷಿಸಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 4,620 ರೂ. ಬೆಂಬಲ ಬೆಲೆ ಘೊಷಣೆ ಮಾಡಲಾಗಿದೆಯಾದರೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಕಡಲೆ ಕಟಾವು ಕಾರ್ಯ ಪ್ರಾರಂಭವಾಗಿ ತಿಂಗಳು ಕಳೆದರೂ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ರಾಜ್ಯ ಸರ್ಕಾರದ ಉಪಸಂಪುಟ ಸಭೆಯಲ್ಲಿ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆಯ ಬಗ್ಗೆ ರ್ಚಚಿಸಲಾಗಿದ್ದು, ಖರೀದಿ ಕೇಂದ್ರ ಪ್ರಾರಂಭಕ್ಕೆ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಪ್ಪಿಗೆ ಬಂದ ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು.

    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಗದಗ

    ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎಂಬ ಪರಿಸ್ಥಿತಿ ಇಂದಿನ ರೈತರದ್ದಾಗಿದೆ. ಉತ್ತಮ ಮಳೆಯಾಗಿ ದಾಖಲೆ ಪ್ರಮಾಣದ ಕಡಲೆ ಇಳುವರಿ ಬಂದರೂ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಸರ್ಕಾರ ಕೂಡಲೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಸ್ಥಾಪಿಸಲು ಮುಂದಾಗಬೇಕು.

    | ಚಂದ್ರು ಹೊನವಾಡ, ಶರಣಪ್ಪ ಧರ್ವಯತ, ಆನಂದ ಕೋಟಗಿ ನರೇಗಲ್ಲ ರೈತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts