More

    ಕಡತದ ಗೋಳು ಕಚೇರಿಯಲ್ಲಿ ಧೂಳು!

    ಬೆಳಗಾವಿ: ಒಂದೆಡೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಕಡತಗಳ ರಾಶಿ. ಮತ್ತೊಂದೆಡೆ ಸಿಬ್ಬಂದಿಗೆ ಒಂದೇ ಒಂದು ಕಡತ ಕದಲದಂತೆ ಕಾಯುವ ಗೋಳು. ಮುಟ್ಟದಿದ್ದರೂ ದಿನವೂ ಕಚೇರಿ ತುಂಬೆಲ್ಲ ಕಡತಗಳ ಧೂಳು. ಇಂತಹದ್ದೊಂದು ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಲವು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಲೇ ಇದ್ದಾರೆ. ಅಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಕಚೇರಿಯಲ್ಲಿ ದಿನವೂ ಬಾಯಿ-ಮೂಗು ಮುಚ್ಚಿಕೊಂಡೇ ಕೆಲಸ ಮಾಡುವಂತಾಗಿದೆ.

    ಇದು ಬೆಳಗಾವಿ ಮಹಾನಗರ ಪಾಲಿಕೆಯ ಹಳೇ ಕಟ್ಟಡದಲ್ಲಿರುವ ಬೆಳಗಾವಿ ತಹಸೀಲ್ದಾರ್ ಕಚೇರಿಯ ಪಾಡು. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಪ್ರತಿಯೊಂದು ಕಡತಗಳ ವಿಲೇವಾರಿಗೆ ಒಂದಿಲ್ಲೊಂದು ಕಾರಣಕ್ಕೆ ಒತ್ತಡ ಇರುವುದು ಸರ್ವೇ ಸಾಮಾನ್ಯ. ಆದರೆ, ತಹಸೀಲ್ದಾರ್ ಕಚೇರಿಯಲ್ಲಿರುವ ರಾಶಿ ರಾಶಿ ಕಡತಗಳು ಯಾರಿಗೆ ಸಂಬಂಧಿಸಿದ್ದವು ಎನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ, ವಿಲೇವಾರಿಯೂ ಆಗದೆ, ನಾಶಪಡಿಸಲೂ ಆಗದೆ ಹೊರೆಯಾಗಿ ಪರಿಣಮಿಸಿವೆ.

    ಬೆಳಗಾವಿ ಮಹಾನಗರ ಪಾಲಿಕೆಯ ಗತವೈಭವಕ್ಕೆ ಸಾಕ್ಷಿಯಾಗಿದ್ದ ಪಾಲಿಕೆಯ ಹಳೆ ಕಟ್ಟಡ ಇಂದು ಸಮರ್ಪಕ ನಿರ್ವಹಣೆ ಇಲ್ಲದೆ, ಧೂಳುಹಿಡಿದಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡ 1942ರಲ್ಲಿ ಈ ಕಟ್ಟಡದಲ್ಲಿ ಆಡಳಿತ ಕಚೇರಿ ಆರಂಭಿಸಿ, ಸ್ವಾತಂತ್ರೃದ ಬಳಿಕ ಪಾಲಿಕೆ ಆಡಳಿತವೂ ಇಲ್ಲಿಂದಲೇ ನಡೆದಿತ್ತು.ಮಹಾನಗರ ಪಾಲಿಕೆ ನೂತನ ಕಟ್ಟಡಕ್ಕೆ 2008ರಲ್ಲಿ ಆಡಳಿತ ಕಚೇರಿ ಹೊಸ ಸ್ಥಳಾಂತರಗೊಂಡಿತ್ತು. ಈ ಕಟ್ಟಡದಲ್ಲಿ 2010ರಿಂದ ಬೆಳಗಾವಿ ತಾಲೂಕು ತಹಸೀಲ್ದಾರ್ ಕಚೇರಿಯು ಕಾರ್ಯನಿರ್ವಹಿಸುತ್ತಿದೆ.

    ಆಗ ಹಳೇ ಕಡತಗಳನ್ನು ಅದೇ ಕಟ್ಟಡದಲ್ಲಿ ಬಿಟ್ಟಿದ್ದ ಪಾಲಿಕೆ ಅಧಿಕಾರಿಗಳು ಇಂದಿಗೂ ಅವುಗಳತ್ತ ಮುಖ ಮಾಡಿಲ್ಲ. ಅಲ್ಲದೇ, ಪ್ರತಿ ವರ್ಷವೂ ಸಾವಿರಾರು ಕಡತಗಳ ರಾಶಿಯನ್ನು ತಂದು ಎಸೆಯುತ್ತಿದ್ದು, ಇಲಿ ಹೆಗ್ಗಣಗಳ ಕಾಟವೂ ಹೆಚ್ಚಾಗಿದೆ. ಇವುಗಳಿಂದ ಪ್ರಸ್ತುತ ಕಡಗಳೂ ಹಾಳಾದರೇ ತಾವೇ ಹೊಣೆ ಹೊರಬೇಕಾದೀತು ಎಂಬುದು ತಹಸೀಲ್ದಾರ್ ಕಚೇರಿ ಸಿಬ್ಬಂದಿಯ ಆತಂಕ.

    ಸ್ವಚ್ಛ ಭಾರತ ಅಭಿಯಾನ ಎಂದು ಕಳೆದ ಮೂರ‌್ನಾಲ್ಕು ವರ್ಷದಿಂದ ನಿರಂತರ ಜಾಗೃತಿ ಮೂಡಿಸುತ್ತಿರುವ ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಈ ಕಟ್ಟಡದ ಒಳಗೆ ಪ್ರವೇಶಿಸಿದರೆ, ಹಾಳು ಕೊಂಪೆಯಂಥ ವಾತಾವರಣ ಕಣ್ಣಿಗೆ ರಾಚುತ್ತದೆ. ಹಗಲಿನಲ್ಲೇ ವಿದ್ಯುತ್ ಹೋದರೆ ಸಿಬ್ಬಂದಿ ಭಯ ಬೀಳುವ ಪರಿಸ್ಥಿತಿ ಇದೆ. ಈ ಬಗ್ಗೆ ತಹಸೀಲ್ದಾರ್ ಕಚೇರಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಮಹಾನಗರ ಪಾಲಿಕೆಯ ಕಟ್ಟಡಗಳಲ್ಲಿ ಸರ್ಕಾರಿ ಇಲ್ಲವೆ ಖಾಸಗಿ ಕಂಪನಿಗಳ ಕಚೇರಿಗಳನ್ನು ಆರಂಭಿಸಿದರೂ ಬಾಡಿಗೆ ಕಟ್ಟಬೇಕು ಎಂಬುದು ನಿಯಮ ಇದೆ. ಆದರೆ, 2010 ರಿಂದ ತಹಸೀಲ್ದಾರ್‌ರು ಯಾವುದೇ ಬಾಡಿಗೆ ಪಾವತಿಸಿಲ್ಲ. ಇನ್ನೇನು ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲಿವರೆಗೂ ಇದ್ದರಾಯ್ತು ಎಂಬ ಧೊರಣೆ ತಹಸೀಲ್ದಾರ್ ಅವರದ್ದಾಗಿದೆ. ಹೀಗಾಗಿ, ಪಾಲಿಕೆಯವರು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷಿಸುತ್ತಿದ್ದಾರೆ ಎನ್ನುತ್ತಾರೆ.

    70 ವರ್ಷಗಳ ದಾಖಲೆಗಳ ರಾಶಿ

    ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುವಂತೆ ಈ ಕಟ್ಟಡ ಪಾಲಿಕೆಗೆ ಸೇರಿದ್ದರಿಂದ 1942 ರಿಂದ 2020ರ ನಡುವಿನ ಅವಧಿಯ ಪಾಲಿಕೆ ವ್ಯಾಪ್ತಿಯ ಎಲ್ಲ ದಾಖಲೆಗಳನ್ನು ಕಟ್ಟಡದ ಸಭಾಂಗಣದಲ್ಲಿ ಸಂಗ್ರಹಿಸಿ ಇಡಲಾಗಿದೆ. ಇನ್ನುಳಿದ ಕೊಠಡಿಗಳಲ್ಲಿ ಬೆಳಗಾವಿ ತಾಲೂಕು ತಹಸೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅದೇ, ಕೊಠಡಿಯಲ್ಲಿ ಕಚೇರಿಯ ಮೂರ‌್ನಾಲ್ಕು ಘಟಕಗಳನ್ನು ನಡೆಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ.

    ಮಹಾನಗರ ಪಾಲಿಕೆಯ ಹಳೇ ಕಟ್ಟಡದ ಪ್ರತ್ಯೇಕ ಕೊಠಡಿಯಲ್ಲಿ ಕಡತಗಳನ್ನು ಸಂಗ್ರಹಿಸಿ ಇಡಲಾಗಿದೆ. ಅವುಗಳಿಗೂ ಕಚೇರಿ ನಿರ್ವಹಣೆಗೂ ಸಂಬಂಧವಿಲ್ಲ. ಕಟ್ಟಡ ನಿರ್ವಹಣೆಯನ್ನು ತಹಸೀಲ್ದಾರ್ ಕಚೇರಿಯವರೇ ಮಾಡಬೇಕು.
    | ಡಾ.ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ

    ಕಡತಗಳನ್ನು ತೆಗೆದುಕೊಂಡು ಹೋಗುವಂತೆ ಈ ಹಿಂದಿನ ತಹಸೀಲ್ದಾರ್ ಈಗಾಗಲೇ ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪಾಲಿಕೆಗೆ ಇಂದಿಗೂ ನಮ್ಮಿಂದ ಕಟ್ಟಡದ ಬಾಡಿಗೆ ಪಾವತಿಯಾಗಿಲ್ಲ. ಪಾಲಿಕೆ ಕಟ್ಟಡವಾಗಿದ್ದರಿಂದ ಅವರೇ ನಿರ್ವಹಣೆ ಮಾಡುತ್ತಾರೆ.
    | ಆರ್.ಕೆ.ಕುಲಕರ್ಣಿ, ತಹಸೀಲ್ದಾರ್, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts