More

    ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ – ಪ್ರೊ.ಡಾ. ತ್ಯಾಗರಾಜ

    ಬೆಳಗಾವಿ: ಪ್ರತಿದಿನ ಅಭ್ಯಾಸ ಹಾಗೂ ಸತತ ಪ್ರಯತ್ನದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂಬಿಎ ವಿಭಾಗದ ಅಧ್ಯಕ್ಷ ಪ್ರೊ.ಡಾ. ತ್ಯಾಗರಾಜ ಹೇಳಿದರು.

    ಕೆಎಲ್​ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ 2021&2022 ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ, ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಯುವಕರು ದೇಶದ ಶಕ್ತಿ. ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಅವರ ಮೇಲಿದೆ. ಅವರು ಬುದ್ಧಿವಂತಿಕೆ, ಜ್ಞಾನ ಮತ್ತು ಧೈರ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

    ಇಂದು ನ್ಯಾಯಾಂಗ ವ್ಯವಸ್ಥೆ ಸಾಕಷ್ಟು ವಿಸ್ತರಿಸಿಕೊಂಡಿದೆ. ಕಾನೂನು ಪದವೀಧರರಿಗೆ ಸಾಕಷ್ಟು ಉತ್ತಮ ಅವಕಾಶಗಳಿವೆ. ಜ್ಞಾನ ವೃದ್ಧಿಸಿಕೊಳ್ಳಬೇಕು. ಯಶಸ್ವಿ ವೃತ್ತಿಪರರಾಗಿ ಹೊರಹೊಮ್ಮಲು ನಿರಂತರ ಪ್ರಯತ್ನಿಸಬೇಕು. ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಪ್ರಾಮಾಣಿಕತೆ, ನಿಷ್ಠೆ, ಬದ್ಧತೆ, ನಂಬಿಕೆ ಮೇಲೆ ಜೀವನ ರೂಪಿಸಿಕೊಳ್ಳಬೇಕು ಎಂದರು.

    ನ್ಯಾಯವಾದಿಗಳಾಗಬೇಕಾದವರು ಭಾಷೆ ಮೇಲೆ ಪ್ರಭುತ್ವ ಸಾಧಿಸಬೇಕು. ನಮ್ಮಲ್ಲಿ ಸಂವಹನ, ತಾಂತ್ರಿಕ ಕೌಶಲ ಬೆಳೆಸಿಕೊಳ್ಳುತ್ತೇವೆಯೋ ಅಷ್ಟು ನಮ್ಮನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸ್ಥಳಿಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ರಾಜೇಂದ್ರ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿದರು. ಕಾಲೇಜಿನ ಪ್ರಧಾನ ಕಾರ್ಯದರ್ಶಿ ಪ್ರೀತಿ ಗಂಗಾಧರ ವಂದಿಸಿದರು. ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts