More

    ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ತಯಾರಿ

    ಭಟ್ಕಳ: ಕಳೆದೆರಡು ದಿನಗಳಿಂದ ಭಟ್ಕಳದಲ್ಲಿ ಕರೊನಾ ಕೊಂಚ ಬಿಡುವು ನೀಡಿದೆ. ಆದರೂ ಲಾಕ್​ಡೌನ್ ವಿಷಯದಲ್ಲಿ ಎಲ್ಲೂ ತೊಡಕಾಗಬಾರದು ಎಂಬ ಉದ್ದೇಶದಿಂದ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ತಯಾರಿ ನಡೆಸಿದ್ದಾರೆ.

    ತಾಲೂಕಿನಲ್ಲಿ ಎಷ್ಟೇ ಕಠಿಣ ಕ್ರಮ ಕೈಗೊಂಡಿದ್ದರೂ ಲಾಕ್​ಡೌನ್ ಉಲ್ಲಂಘನೆಯಾಗುತ್ತಿರುವ ಕುರಿತು ಆರೋಪ ಕೇಳಿ ಬರುತ್ತಿತ್ತು. ಒಂದೆಡೆ ಕರೊನಾ ಸೋಂಕಿತರ ಪ್ರಕರಣದಲ್ಲಿ ಹೆಚ್ಚಳ, ಇನ್ನೊಂದೆಡೆ ಮಾತು ಕೇಳದ ಸಾರ್ವಜನಿಕರು, ಇದರಿಂದ ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತಕ್ಕೆ ತಲೆನೋವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಭಟ್ಕಳ ತಾಲೂಕಿನ ಎಲ್ಲ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ವಹಿಸಿದ್ದರು.

    ಈ ಹೊಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಟ್ಟಣದಲ್ಲೇ ಇದ್ದುಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ. ಪಟ್ಟಣವನ್ನು ಐದು ವಲಯವನ್ನಾಗಿ ವಿಂಗಡಿಸಿ ಅಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಅನ್ನು ಒಂದೇ ಕಡೆ ಮಾಡಲಾಗಿದೆ. ಅದರಿಂದ ಜನರ ಚಲನವಲನಗಳ ಮೇಲೆ ನಿಗಾ ಇಡಬಹುದು. ನಿಜವಾದ ತೊಂದರೆ ಇದ್ದವರಿಗೆ ಸಹಕಾರ ನೀಡಲು ಅನುಕೂಲವಾಗುತ್ತದೆ ಎಂಬುದು ಎಸ್​ಪಿ ಅವರ ಅಭಿಪ್ರಾಯ.

    ಭಟ್ಕಳದ ಸರ್ಕಲ್​ನಲ್ಲಿ ಹೆದ್ದಾರಿ ಹೊರತುಪಡಿಸಿ ಸಾಗರ ಮತ್ತು ಬಂದರ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಆ ಪ್ರದೇಶದಲ್ಲಿ ಸಾರ್ವಜನಿಕರ ಅನಗತ್ಯ ತಿರುಗಾಟವನ್ನು ನಿರ್ಬಂಧಿಸಲಾಗಿದೆ. ಅಲ್ಲಿ ಒಂದು ಸಹಾಯವಾಣಿ ರಚಿಸಿ, ಪೊಲೀಸ್, ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನೋಡಲ್ ಅಧಿಕಾರಿಗಳೆಂದು ನಿಯೋಜಿಸಲಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಭಟ್ಕಳದ ಲಾಕ್​ಡೌನ್ ಸ್ಥಿತಿ ಸಂಪೂರ್ಣ ಬದಲಾಗಲಿದೆ. ಇನ್ನೂ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೋ ಎಂದು ಜನರು ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts