More

    ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಿ

    ಹಾನಗಲ್ಲ: ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಬೇಕು ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಹೇಳಿದರು.

    ಮಿನಿ ವಿಧಾನಸೌಧದ ಸಭಾಭವನದಲ್ಲಿ ಬ್ಯಾಂಕ್ ಸೇರಿ ಇತರ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ವ್ಯಾಪಾರಸ್ಥರಿಗೆ ಚುನಾವಣಾ ನೀತಿ ಸಂಹಿತೆ ಕುರಿತು ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಆವರು ಮಾತನಾಡಿದರು.

    ನೀತಿ ಸಂಹಿತೆ ನಿಮಿತ್ತ ಸರ್ಕಾರದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಫಲಕಗಳು, ರಾಜಕಾರಣಿಗಳ ಭಾವಚಿತ್ರಗಳು ಸಾರ್ವಜನಿಕರಿಗೆ ಕಾಣದಂತೆ ಮುಚ್ಚಬೇಕು ಅಥವಾ ತೆರವುಗೊಳಿಸಬೇಕು. ನೀತಿ ಸಂಹಿತೆ ಪಾಲಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಅಧಿಕಾರಿಗಳು ತಮ್ಮ ವಿಭಾಗದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬ್ಯಾಂಕ್​ಗಳಲ್ಲಿ ಒಂದೇ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಹಣಕಾಸಿನ ವ್ಯವಹಾರ ನಡೆದರೆ ಸಂಬಂಧಿಸಿದ ಅಧಿಕಾರಿಗಳ ತಂಡಕ್ಕೆ ವರದಿ ಸಲ್ಲಿಸಬೇಕು. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ 50 ಸಾವಿರಕ್ಕೂ ಅಧಿಕ ಹಣ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಪ್ರತಿದಿನ 50 ಸಾವಿರಕ್ಕಿಂತ ಹೆಚ್ಚು ನಗದನ್ನು ವರ್ಗಾಯಿಸುವಂತಿದ್ದರೆ ಮೊದಲೇ ಚುನಾವಣಾಧಿಕಾರಿಗಳ ಪರವಾನಗಿ ತೆಗೆದುಕೊಂಡಿರಬೇಕು. ಲಕ್ಷಕ್ಕೂ ಅಧಿಕ ಹಣವನ್ನು ವ್ಯಾಪಾರಸ್ಥರು ತಮ್ಮ ವ್ಯವಹಾರಕ್ಕಾಗಿ ಕೊಂಡೊಯ್ಯುವುದಾದರೆ ಜಿಲ್ಲಾ ಮಟ್ಟದ ಅಧಿಕಾರಿಗಳ ಪರವಾನಗಿ ಪಡೆದಿರಬೇಕು. ಇಲ್ಲವಾದಲ್ಲಿ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ವಿಶೇಷವಾಗಿ ಬಟ್ಟೆ ಹಾಗೂ ಪಾತ್ರೆಗಳ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಯಾರಾದರೂ ಒಂದೇ ಬಾರಿ ಹೆಚ್ಚು ಸಂಖ್ಯೆಯಲ್ಲಿ ಸೀರೆಗಳನ್ನಾಗಲಿ, ಕುಕ್ಕರ್, ಮಿಕ್ಸರ್​ಗಳಂಥ ವಸ್ತುಗಳನ್ನು ಕೊಂಡುಕೊಂಡರೆ ಅವರ ವಿವರಗಳನ್ನು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳಿಗೆ ನೀಡಬೇಕು. ಚುನಾವಣೆಗೆ ಸಂಬಂಧಿಸಿದ ಕರಪತ್ರ, ಬ್ಯಾನರ್, ಮುಂತಾದ ಪರಿಕರಗಳನ್ನು ಮುದ್ರಣ ಮಾಡಿಸಿದಲ್ಲಿ ಮುದ್ರಣಾಲಯದ ಮಾಲೀಕರು ಎಲ್ಲ ವಿವರ ನೀಡಬೇಕು. ಗ್ರಾಪಂ, ತಾಪಂಗಳಲ್ಲಿ ಯಾವುದೇ ಹೊಸ ಕ್ರಿಯಾಯೋಜನೆಗಳನ್ನು ತಯಾರಿಸುವುದಾಗಲಿ, ಫಲಾನುಭವಿಗಳನ್ನಾಗಲಿ ಆಯ್ಕೆ ಮಾಡುವಂತಿಲ್ಲ. ಚುನಾವಣಾ ಪ್ರಚಾರಕ್ಕೆ ವಾಹನಗಳಿಗೆ ಪರವಾನಗಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲ ಅಧಿಕಾರಿಗಳು ಜಾಗೃತಿ ವಹಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಪರವಾನಗಿ ಇಲ್ಲದೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ. ಇಲ್ಲವಾದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಗುರಿಯಾಗಬೇಕಾಗುತ್ತದೆ ಎಂದರು.

    ತಾಪಂ ಇಒ ಶಿವಕುಮಾರ, ಸಿಪಿಐ ಶಿವಶಂಕರ ಗಣಾಚಾರಿ, ಅಬಕಾರಿ ಇಲಾಖೆಯ ಪರಶುರಾಮ, ಸಮಾಜ ಕಲ್ಯಾಣ ಅಧಿಕಾರಿ ಜಿ.ಬಿ. ಹಿರೇಮಠ, ಬಿಸಿಎಂ ಅಧಿಕಾರಿ ಎಸ್.ಆನಂದ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಆದರ್ಶ ಶೆಟ್ಟಿ, ಪೆಟ್ರೋಲ್ ಬಂಕ್ ಮಾಲೀಕ ರಾಮಚಂದ್ರ ಬಮ್ಮನಹಳ್ಳಿ, ಪ್ರಿಂಟಿಂಗ್ ಪ್ರೆಸ್ ಮಾಲೀಕ ವೀರೇಶ ಕೊಂಡೋಜಿ, ಎಸ್​ಬಿಐ ವ್ಯವಸ್ಥಾಪಕ ಅಶೋಕ ನಾಯಕ, ವಿವಿಧ ಇಲಾಖೆಗಳ ಅಧಿಕಾರಿಗಳು, ವ್ಯಾಪಾರಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts