More

    ಕಂಪ್ಯೂಟರ್‌ನಲ್ಲಷ್ಟೇ ಅಭಿವೃದ್ಧಿ ತೋರಿಸುತ್ತೀರಾ : ಸಂಸದ ಜಿ.ಎಸ್.ಬಸವರಾಜು

    ತುಮಕೂರು: ಅಧಿಕಾರಿಗಳು ಕಂಪ್ಯೂಟರ್‌ನಲ್ಲಿ ಅಷ್ಟೇ ತುಮಕೂರಿನ ಅಭಿವೃದ್ಧಿ ತೋರಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ಹರಿಹಾಯ್ದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ತುಮಕೂರು ಸ್ಮಾರ್ಟ್ ಸಿಟಿ ಲಿ.,’ ಅಡ್ವೈಸರಿ ಫೋರಂ ಸಭೆಯಲ್ಲಿ ಮಾತನಾಡಿದರು.  ನಗರದ ರಾಜಕಾಲುವೆ ಡ್ರೋನ್ ಸರ್ವೇ ಮಾಡಿದ್ದೇವೆ ಎಂದು ಹಣ ಕಬಳಿಸಲಾಗಿದೆ, ಸರಿಯಾದ ಮಾಹಿತಿ ನೀಡದಿರುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಿ, ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಸರ್ವೇ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ ಸಂಸ್ಥೆಗಳಿಗೆ ಕಣ್ಮುಚ್ಚಿಕೊಂಡು ಹಣ ನೀಡಿರುವ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು, ನಿಮ್ಮ ನೀಲನಕ್ಷೆ ನೋಡಿಕೊಂಡು ಹೋಗಲು ನಾವು ಸಭೆ ನಡೆಸುತ್ತಿಲ್ಲ ಎಂದು ಕೆಂಡಾಮಂಡಲರಾದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಅಧಿಕಾರಿಗಳಿಗೆ ಜಿಐಎಸ್ ಕೆಲಸ ಗೊತ್ತಿದೆಯೋ, ಇಲ್ಲವೋ ಸ್ಪಷ್ಟಪಡಿಸಿ, ವಿನಾಕಾರಣ ಕಾಲಹರಣ ಮಾಡಬೇಡಿ, ಸರ್ವೇ ಹೆಸರಿನಲ್ಲಿ ಹಣ ಬಳಸಿದ್ದಷ್ಟೇ ಸಾಧನೆಯಾಗಿದೆ ಎಂದರು.

    ಸರ್ವೇಯರ್ ಸಮೀಕ್ಷೆ ಮಾಡಿದ್ದಾರೆ, ವಿಲೇಜ್ ಮ್ಯಾಪ್‌ನಲ್ಲಿ ಮಾಹಿತಿ ಇದೆ. ಪ್ರತಿಯೊಂದು ಪಹಣಿಯಲ್ಲಿ ಖರಾಬು ಮಾಹಿತಿ ಇರುತ್ತದೆ. ಇದಲ್ಲದೆ ಡ್ರೋನ್ ಸರ್ವೇ ಬೇರೆ ಮಾಡಿಸಿದ್ದೀರಿ, ನಿಖರವಾದ ಮಾಹಿತಿ ಸಂಗ್ರಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿದ್ದವರು, ಸ್ಮಾರ್ಟ್‌ಸಿಟಿ ಮುಖ್ಯ ಇಂಜಿನಿಯರ್ ಆಗಿದ್ದರೂ ಮೂಲ ಸೌಕರ್ಯಗಳ ಜಿಐಎಸ್ ಡೇಟಾ ಸಂಗ್ರಹಿಲು ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಮುಖ್ಯ ಇಂಜಿನಿಯರ್ ಸಿದ್ದಗಂಗಯ್ಯ ಅವರನ್ನು ತರಾಟೆ ತೆಗೆದುಕೊಂಡರು.

    ಪಾಲಿಕೆ ಆಯುಕ್ತೆ ರೇಣುಕಾ, ತುಮಕೂರು ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ, ಮುಖ್ಯ ಇಂಜಿನಿಯರ್ ಸಿದ್ಧಗಂಗಯ್ಯ, ಟೂಡಾ ಆಯುಕ್ತ ಯೋಗಾನಂದ್, ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯ ಕುಂದರನಹಳ್ಳಿ ರಮೇಶ್ ಮತ್ತಿತರರು ಇದ್ದರು.

    ಮಾಹಿತಿ ನೀಡದಿದ್ದರೆ ಏನರ್ಥ? : ಜಿಲ್ಲೆಯ ರಸ್ತೆಗಳ ಕೋರ್ ಮ್ಯಾಪ್ ಅನ್ನು ಪಿಎಂಜಿಎಸ್‌ವೈ ಇಲಾಖೆ ಮಾಡಿದೆ, ಅದರಲ್ಲಿ ಜಿಲ್ಲೆಯಲ್ಲಿ ಎಷ್ಟು ಕೀಮೀ ರಸ್ತೆ ಇದೆ, ಅದರಲ್ಲಿ ಡಾಂಬರ್ ರಸ್ತೆ ಎಷ್ಟು, ಸಿಮೆಂಟ್ ರಸ್ತೆ ಎಷ್ಟು, ಜಲ್ಲಿ ರಸ್ತೆ ಎಷ್ಟು, ಮಣ್ಣಿನ ರಸ್ತೆ ಎಷ್ಟು ಎಂಬ ಜಿಐಎಸ್ ಆಧಾರಿತ ಮಾಹಿತಿ ಇದೆ ಅವರಿಂದ ಮಾಹಿತಿ ಪಡೆಯಿರಿ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಸೂಚಿಸಿದರು. ತುಮಕೂರು ಸ್ಮಾರ್ಟ್‌ಸಿಟಿ ಅವಧಿಯೇ ಮುಗಿಯುತ್ತಾ ಬಂದರೂ ತುಮಕೂರಿನ ರಸ್ತೆ, ಚರಂಡಿ ಮಾಹಿತಿ ನೀಡದೇ ಇದ್ದರೆ ಏನರ್ಥ? ಸ್ಮಾರ್ಟ್‌ಸಿಟಿ ಯೋಜನೆ ಯಶಸ್ಸಿಗೆ ಏನು ಮಾಡಬೇಕು ಎಂಬ ಬಗ್ಗೆ ಕಡತ ತನ್ನಿ ನಿಮಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದರು.

    ತುಮಕೂರು ಅಮಾನಿಕೆರೆ ರಾಜಕಾಲುವೆ ಎರಡು ಬಾರಿ ಹೂಳು ತೆಗೆದಿದ್ದೇವೆ ಎಂದು ಬಿಲ್ ಮಾಡಿದ್ದೀರಿ, ರಾಜಕಾಲುವೆ ಅಗಲ, ಉದ್ದ ಎಷ್ಟಿದೆ ಎಂದು ಕರಾರುವಕ್ಕಾದ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ, ಆದರೂ ಹೇಗೆ ಕೆಲಸ ಮಾಡಿಸಿದ್ದೀರಾ?.
    ಜಿ.ಬಿ.ಜ್ಯೋತಿಗಣೇಶ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts