More

    ಕಂದಾಯ ಅಧಿಕಾರಿ, ಗುಮಾಸ್ತೆ ಬಂಧನ: ಜಿಲ್ಲಾಧಿಕಾರಿ ಸಹಿ ನಕಲು ಪ್ರಕರಣಕ್ಕೆ ತಿರುವು, ಶಿರಸ್ತೇದಾರ್​ ಶ್ರೀನಿವಾಸ್​ಗೆ ನೋಟಿಸ್​

    ಕೋಲಾರ: ಸರ್ಕಾರಿ ಜಮೀನನ್ನು ಖಾಸಗಿ ಕಂಪನಿಗೆ ನೀಡಲು ಜಿಲ್ಲಾಧಿಕಾರಿ ಸಹಿ ನಕಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕ್ಕಲೇರಿ ಕಂದಾಯ ಅಧಿಕಾರಿ ಮಂಜುನಾಥ್​, ತಾಲೂಕು ಕಚೇರಿಯ ಕೇಸ್​ ವರ್ಕರ್​ ಶೈಲಜಾ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ತಿಳಿಸಿದ್ದಾರೆ.


    ನಗರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರು ತನಿಖೆಗೆ ಕರೆಯುತ್ತಿದ್ದಂತೆ ಮೊಬೈಲ್​ ಸ್ವಿಚ್ಡ್​ಆಫ್​ ಮಾಡಿಕೊಂಡಿರುವ ಶಿರಸ್ತೇದಾರ್​ ಶ್ರೀನಿವಾಸ್​ಗೆ ತನಿಖೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗುವುದು ಎಂದು ತಿಳಿಸಿದರು.


    ವಕ್ಕಲೇರಿ ಹೋಬಳಿ ಆಲಹಳ್ಳಿಯ ಸ.ನಂ.127ರಲ್ಲಿ 3.23 ಎಕರೆ ಸರ್ಕಾರಿ ಕೆರೆ&ಕಟ್ಟೆ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿ ಸನ್​ಲಾರ್ಜ್​ ಕಂಪನಿಗೆ ಒಪ್ಪಿಸಲು ಸಹಿ ನಕಲು ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲು ಮಾಡಬೇಕು ಎಂದು ಸಾರ್ವಜನಿಕರು ಮತ್ತು ವಿವಿಧ ಸಂಘ&ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿ ವೆಂಕಟ್​ರಾಜುಗೆ ಮನವಿ ಮಾಡಿದ್ದರು.

    ಪ್ರಕರಣ ದಾಖಲಿಸಿಕೊಂಡಿದ್ದ ಗಲ್​ಪೇಟೆ ಪೊಲೀಸರು ತನಿಖೆ ನಡೆಸಿದ್ದು, ಸನ್​ಲಾರ್ಜ್​ ಕಂಪನಿಯವರು ಕೆರೆ&ಕಟ್ಟೆ ಜಾಗವನ್ನು ತಮಗೆ ಕೊಡಬೇಕು ಎಂದು ಕೋರಿದ್ದು, ಇದು ಸರ್ಕಾರದ ಕಾರ್ಯದರ್ಶಿಯಿಂದ ತಿರಸತವಾಗಿತ್ತು. ಆದರೆ ಉಲ್ಲೇಖ ಪತ್ರವನ್ನು ಬೋಗಸ್​ ದಾಖಲೆ ಸೃಷ್ಟಿ ಮಾಡಿ, ಜಿಲ್ಲಾಧಿಕಾರಿ ಸಹಿ ನಕಲು ಮಾಡಿ ತಿರಸತ ಎಂದಿದ್ದ ದಾಖಲೆಯನ್ನು ತಿರುಚಿ ಪುರಸ್ಕರಿಸಲಾಗಿದೆ ಎಂದು ವಿವರಿಸಿದರು.


    ತನಿಖೆಯಲ್ಲಿ ಕಂಪನಿಯವರು, ಕೆಲವು ಹೋರಾಟಗಾರರು ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಮಗ್ರ ತನಿಖೆ ನಡೆದ ನಂತರವಷ್ಟೇ ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದು ತಿಳಿಯಲಿದೆ. ಹದಿನೈದು ದಿನದ ಹಿಂದೆ ಕಂಪನಿ ಅಧಿಕಾರಿಗಳು ಅರ್ಜಿ ಸಲ್ಲಿಸಿ, ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ, ಶಿರಸ್ತೇದಾರ್​ ಶ್ರೀನಿವಾಸ್​ ಕೈವಾಡದಿಂದ ಹೀಗಾಗಿದೆ ಎಂದು ತಿಳಿಸಲಾಗಿದೆ. ಕೆಲವರು ಪ್ರಕರಣ ಮುಚ್ಚಿ ಹಾಕಿಸುವುದಾಗಿ ಹಣಕಾಸು ವ್ಯವಹಾರ ಮಾಡಲೆತ್ನಿಸಿದ್ದಾರೆ ಎಂಬ ದೂರುಗಳೂ ಇದ್ದು, ಎಲ್ಲವನ್ನು ತನಿಖೆಯಲ್ಲಿ ಪರಿಶೀಲಿಸಲಾಗುವುದು ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts