More

    ಕಂದವಾರ ಕೆರೆಗೆ ಹೊಸ ಜೀವಕಳೆ

    ಚಿಕ್ಕಬಳ್ಳಾಪುರ : ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯ ತ್ಯಾಜ್ಯ ಸಂಸ್ಕರಿಸಿದ ನೀರಿನ ಪೂರೈಕೆಯಿಂದ ಜಿಲ್ಲಾ ಕೇಂದ್ರದಲ್ಲಿನ ಕಂದವಾರ ಕೆರೆಗೆ ಹೊಸ ಜೀವಕಳೆ ಬಂದಿದೆ.

    ಹಿಂದೆ ಮಳೆಗಾಲ ಸಂದರ್ಭದಲ್ಲೂ ಅನೇಕ ಬಾರಿ ನೀರಿಲ್ಲದೇ ಮೈದಾನದ ಮಾದರಿಯಲ್ಲಿ ಕಂದವಾರ ಕೆರೆ ಕಾಣಿಸುತ್ತಿತ್ತು. ಆದರೆ, ಇದೀಗ ಇಲ್ಲಿ ಎರಡು-ಮೂರು ದಿನಗಳಲ್ಲಿ ಕೋಡಿ ತುಂಬಿ ಹರಿಯಲಿದೆ. ಇದರಿಂದಲೇ ಮುಂದಿನ ದಿನಗಳಲ್ಲಿ ವಿವಿಧ ಕೆರೆಗಳಿಗೆ ನೀರು ಹರಿಯಲಿದೆ.

    ನಗರದಲ್ಲಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಮಾರ್ಗದಲ್ಲಿರುವ ಕಂದವಾರ ಕೆರೆಯು 500 ಎಕರೆ ಪ್ರದೇಶಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಒಂದು ಕಾಲದಲ್ಲಿ ನಗರಕ್ಕೆ ನೀರಿನ ಮೂಲವಾಗಿತ್ತು. ಸಮೀಪದ ಸ್ಕಂದಗಿರಿ ಸೇರಿ ವಿವಿಧ ಬೆಟ್ಟ ಗುಡ್ಡಗಳಿಂದ ಹರಿದು ಬರುವ ನೀರು ಕೆರೆಯಲ್ಲಿ ಸಂಗ್ರಹವಾಗುತ್ತದೆ. ಆದರೆ, ಇದರ ಪ್ರಮಾಣ ಇತ್ತೀಚೆಗೆ ತುಂಬಾ ಕಡಿಮೆಯಾಗಿದೆ. ಇದಕ್ಕೆ ಹಲವೆಡೆ ಕಾಲುವೆಗಳ ಅಕ್ರಮ ಒತ್ತುವರಿಯಾಗಿರುವುದೇ ಪ್ರಮುಖ ಕಾರಣ. ಇದರ ನಡುವೆ ಕಳೆದ ೆಬ್ರವರಿಯಲ್ಲಿ ಬಾಗಲೂರು ಕೆರೆಯಿಂದ ಕಂದವಾರ ಕೆರೆಗೆ ನೀರು ಹರಿಯುವಿಕೆ ಪ್ರಾರಂಭವಾಗಿದ್ದು ಮೂರು ತಿಂಗಳಲ್ಲಿ ಭರ್ತಿಯಾಗಿದ್ದರಿಂದ ಕೆರೆಯು ಗತವೈಭವಕ್ಕೆ ಮರಳಿದಂತಾಗಿದೆ.

    ಇನ್ನು 43 ಕೆರೆಗಳಿಗೆ ನೀರು : 2017 ನೇ ಸಾಲಿನ ಸೆ.18 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 883.54 ಕೋಟಿ ರೂ ವೆಚ್ಚದ ಎಚ್.ಎನ್.ವ್ಯಾಲಿ ಯೋಜನೆಗೆ ಚಾಲನೆ ನೀಡಿದ್ದರು. ಇದರಡಿ ಜಿಲ್ಲೆಯ 4 ತಾಲೂಕುಗಳಲ್ಲಿನ 44 ಕೆರೆಗಳಿಗೆ ವಾರ್ಷಿಕ 2.70 ಟಿಎಂಸಿ ನೀರು ಹರಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಇದಕ್ಕೆ ಈಗಾಗಲೇ ಬರೋಬ್ಬರಿ 114 ಕಿ.ಮೀ. ಉದ್ದದ ಪೈಪ್ ಲೈನ್ ಕಾಮಗಾರಿ ಕೈಗೊಂಡಿದ್ದು ಬಾಗಲೂರು ಕೆರೆಯಿಂದ ಕಂದವಾರ ಕೆರೆಗೆ ಎಚ್.ಎನ್.ವ್ಯಾಲಿ ನೀರು ಹರಿದಿದೆ. ಇನ್ನು ಉಳಿದ 43 ಕೆರೆಗಳನ್ನು ತುಂಬಿಸಬೇಕಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುವ ನಿರೀಕ್ಷೆ ಹೊಂದಲಾಗಿದೆ.

    ಪರ, ವಿರೋಧ ಅಭಿಪ್ರಾಯ : ಕಂದವಾರ ಕೆರೆಗೆ ನೀರು ಪೂರೈಕೆ ಪ್ರಕ್ರಿಯೆ ಪ್ರಾರಂಭದಲ್ಲಿಯೇ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಎಚ್.ಎನ್. ವ್ಯಾಲಿಯ ನೀರಿನಲ್ಲಿ ವೈದ್ಯಕೀಯ ಮತ್ತು ಕೈಗಾರಿಕೆಯ ತ್ಯಾಜ್ಯ ಮಿಶ್ರಣವಾಗಿದ್ದು ಈ ನೀರಿನ ಪೂರೈಕೆಯಿಂದ ಅಂತರ್ಜಲ ಮಟ್ಟ ಕಲುಷಿತಗೊಳ್ಳುವುದರ ಜತೆಗೆ ಕೆರೆಗಳು ಹಾಳಾಗುತ್ತವೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಇನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಯು ನ್ಯಾಯಾಲಯದಲ್ಲಿ ನೀರಿನ ಶುದ್ಧತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿದೆ. ಮತ್ತೊಂದೆಡೆ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಕಂದವಾರ ಕೆರೆಗೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಜಲಜಾತ್ರೆಯನ್ನು ಕೈಗೊಂಡು ಸಂಭ್ರಮಿಸಿದ್ದು ಸಚಿವ ಡಾ ಕೆ.ಸುಧಾಕರ್ ಬಾಗಿನ ಅರ್ಪಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts