More

    ಒಳಚರಂಡಿ ಯೋಜನೆಗೆ ವಿರೋಧ

    ಹಳಿಯಾಳ: ಪಟ್ಟಣದಲ್ಲಿ ಅರಂಭಗೊಳ್ಳಲಿರುವ 76 ಕೋಟಿ ರೂ. ವೆಚ್ಚದ ಒಳಚರಂಡಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದೇ ಯೋಜನೆಯನ್ನು ತರಾತುರಿಯಲ್ಲಿ ಆರಂಭಿಸಲು ನಡೆಸಿದ ಪ್ರಯತ್ನಗಳ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ಬಾರಿ ವಿರೋಧ ವ್ಯಕ್ತವಾಯಿತು.

    ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರವಾರ ಉಪವಿಭಾಗ, ಹಳಿಯಾಳ ಪುರಸಭೆಯ ವತಿಯಿಂದ ಸೋಮವಾರ ಸಂಜೆ ಇಲ್ಲಿಯ ಡಾ. ಜಗಜೀವನರಾಮ ಸಭಾ ಭವನದಲ್ಲಿ ಒಳಚರಂಡಿ ಯೋಜನೆಯ ಬಗ್ಗೆ ಸಾರ್ವಜನಿಕರ ಸಲಹೆ ಸ್ವೀಕರಿಸುವ ಸಭೆ ಏರ್ಪಾಡಾಗಿತ್ತು. ಸಾರ್ವಜನಿಕರ ಸಂದೇಹ, ಆಕ್ಷೇಪಣೆಗಳಿಗೆ ಸಮರ್ಪಕ ಉತ್ತರ ದೊರೆಯುವವರೆಗೆ ಕಾಮಗಾರಿ ನಡೆಸಬಾರದೆಂದು ಸಭೆಯಲ್ಲಿ ಆಗ್ರಹ ಕೇಳಿಬಂತು.

    ಪಿಪಿಟಿ ಮಾಹಿತಿ: ಸಭೆಯ ಆರಂಭದಲ್ಲಿ ಒಳಚರಂಡಿ ಯೋಜನೆಯ ಬಗ್ಗೆ ಬೃಹತ್ ಪರದೆಯ ಮೇಲೆ ಪಿಪಿಟಿ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು. ಒಳಚರಂಡಿ ಇಲಾಖೆಯ ಅಧಿಕಾರಿಗಳು ಪಟ್ಟಣದಲ್ಲಿ ಕೈಗೊಳ್ಳುವ ಯೋಜನೆಯ ಬಗ್ಗೆ ವಿವರಿಸಲಾರಂಭಿಸಿದ್ದರು. ಅಧಿಕಾರಿಯ ವಿವರಣೆಯಿಂದ ಅಸಮಾಧಾನಗೊಂಡ ಸಾರ್ವಜನಿಕರು ಆಕ್ಷೇಪಿಸಿ ಯೋಜನೆಯ ಬಗ್ಗೆ ತಮಗಿರುವ ಸಂದೇಹಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.

    ಆಕ್ಷೇಪಣೆಗಳು: ಒಳಚರಂಡಿ ಯೋಜನೆ ಜೋಡಣೆ ಪಡೆಯಲು ಆಕರಿಸುವ ದರ, ವಾರ್ಷಿಕ ತೆರಿಗೆ ಎಷ್ಟು, ಪ್ರತಿ ಮನೆಯಿಂದ ಒಳಚರಂಡಿ ವಾಲ್​ಗೆ ಟ್ಗಪ್ ಜೋಡಿಸಲು ತಗಲುವ ಅಂದಾಜು ವೆಚ್ಚ? ಅದನ್ನು ಯಾರು ಭರಿಸುತ್ತಾರೆ?. ಪೈಪ್ ಜೋಡಣೆಗಾಗಿ ಹಿಂದುಳಿದ ವರ್ಗದವರಿಗೆ, ಬಡವರಿಗೆ ಇಲಾಖೆ ಯಿಂದ ಯಾವುದಾದರೂ ರಿಯಾಯಿತಿ ಯೋಜನೆ ಇದೆಯೇ?. ಈ ಯೋಜನೆಗೆ ಒಳಪಡುವ ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡಲಾಗಿದೆಯೇ? ಯೋಜನೆಯ ಗುತ್ತಿಗೆ ಪಡೆದ ಕಂಪನಿಯವರು ಈ ಹಿಂದೇ ಎಲ್ಲಿಯಾದರೂ ಕಾಮಗಾರಿಯನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆಯೇ, ಇದ್ದರೆ ಅವುಗಳನ್ನು ಹಳಿಯಾಳದ ಜನತೆಗೆ ತೋರಿಸಿ ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರ ಪರವಾಗಿ ಮಾಜಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಹೂಲಿ, ಉಮೇಶ ಬೊಳಶೆಟ್ಟಿ, ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ, ಹನುಮಂತ ಹರಿಜನ ಎತ್ತಿದ್ದರು. ವಿ.ಪ. ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿ, ಒಳಚರಂಡಿ ಯೋಜನೆಯು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಯೋಜನೆಯಾಗಿದ್ದು, ಇದನ್ನು ಬೆಂಬಲಿಸಬೇಕು, ಅದರ ಜೊತೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಂದೇಹಗಳಿಗೆ ಉತ್ತರಿಸಬೇಕು ಎಂದರು. ಒಳಚರಂಡಿ ಮಂಡಳಿ ಕಾರವಾರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪಿ. ಸುರೇಶ, ಕಿರಿಯ ಇಂಜಿನಿಯರ ತಾನಾಜಿ ಕಾಳಗಿಣಕರ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಇಂಜಿನಿಯರ್ ಹರೀಷ, ದರ್ಶಿತಾ, ಪುರಸಭೆಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

    ಯೋಜನೆ ವೀಕ್ಷಣೆಗೆ ವ್ಯವಸ್ಥೆ ಮಾಡಿ: ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ಯೋಜನೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ಈ ಹಿಂದೇ ಬೇರೆ ನಗರದಲ್ಲಿ ಮಾಡಿರುವ ಒಳಚರಂಡಿ ಯೋಜನೆಗಳ ವೀಕ್ಷಣೆಗೆ ಸ್ಥಳೀಯ ಪ್ರತಿನಿಧಿಗಳ ನಿಯೋಗಕ್ಕೆ ವ್ಯವಸ್ಥೆ ಮಾಡಬೇಕು, ಬಡವರು, ಹಿಂದುಳಿದವರು ತಮ್ಮ ಮನೆಗೆ ಒಳಚರಂಡಿ ಯೋಜನೆಯ ಜೋಡಣೆ ಪಡೆಯಲು ವಿವಿಧ ಯೋಜನೆಗಳಿಂದ ಆರ್ಥಿಕ ಸೌಲಭ್ಯಗಳಿದ್ದರೇ ಅದರ ಮಾಹಿತಿ ಕಲೆ ಹಾಕಿ. ಅಥವಾ ಈ ಜೋಡಣೆಯ ಖರ್ಚನ್ನು ಯಾರು ಭರಿಸಬೇಕು, ಯೋಜನೆಯ ನಿರ್ವಹಣೆಯನ್ನು ಹೇಗೆ ಮಾಡಬೇಕು ಇತ್ಯಾಧಿಗಳ ಬಗ್ಗೆ ಒಳಚರಂಡಿ ಮತ್ತು ಪುರಸಭೆಯವರು ಸಭೆ ನಡೆಸಿ, ವರದಿಯನ್ನು ಸಿದ್ದಪಡಿಸಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts