More

    ಒಳಚರಂಡಿ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಆಗ್ರಹ

    ಹಳಿಯಾಳ: ಪಟ್ಟಣದ ಬಸವ ನಗರದಲ್ಲಿ ಪ್ರಾರಂಭಿಸಲು ಯೋಜಿಸಿರುವ ಒಳಚರಂಡಿ ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆ ಸ್ಥಾಪಿಸಬೇಕೆಂದು ಬಸವ ನಗರದ ನಿವಾಸಿಗಳು ಆಗ್ರಹಿಸಿದರು.

    ಪುರಸಭೆಗೆ ಗುರುವಾರ ಆಗಮಿಸಿದ ಬಸವ ನಗರದ ನಿವಾಸಿಗಳು ಮುಖ್ಯಾಧಿಕಾರಿ ಕೇಶವ ಚೌಗುಲೆ ಅವರಿಗೆ ಮನವಿಯನ್ನು ಸಲ್ಲಿಸಿದರು. ‘ಬಸವ ನಗರದಲ್ಲಿ ಒಳಚರಂಡಿ ತ್ಯಾಜ್ಯ ಘಟಕ ಆರಂಭಿಸುವುದರಿಂದ ಈ ಭಾಗದಲ್ಲಿ ಪರಿಸರ ಮಾಲಿನ್ಯವಾಗಲಿದೆ. ಅದರ ಜತೆಯಲ್ಲಿ ರೋಗಗಳು ವ್ಯಾಪಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ನಾಗರಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಕೊಂಡು ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

    ಸಾರ್ವಜನಿಕರ ಅಹವಾಲು ಆಲಿಸಿದ ಮುಖ್ಯಾಧಿಕಾರಿ ಕೇಶವ ಚೌಗುಲೆ, ‘ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಅನಗತ್ಯ ಗೊಂದಲವಾಗಿದೆ. ಅದಕ್ಕಾಗಿ ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಬಸವ ನಗರಕ್ಕೆ ಕಳುಹಿಸಿ ಸಾರ್ವಜನಿಕ ಜಾಗೃತಿ ಸಭೆಯನ್ನು ನಡೆಸಲಾಗುವುದು. ನಾಗರಿಕರ ಸಂದೇಹವನ್ನು ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

    ಪುರಸಭಾ ಸದಸ್ಯ ಸಂತೋಷ ಘಟಕಾಂಬ್ಳೆ, ಬಸವ ನಗರದ ಶ್ರೀ ನಾಗದೇವತಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸಪ್ಪ ದ್ಯಾಮಟ್ಟಿ ವಹಿಸಿದ್ದರು. ವಿಜಯಕುಮಾರ ದೊಡ್ಮಣಿ, ಟಿ.ಟಿ. ಜಂಗೂಬಾಯಿ, ಎಪ್.ಸಿ. ಭಜಂತ್ರಿ, ಆರ್.ಆರ್. ಗುನಗಾ ಮೊದಲಾದವರು ಉಪಸ್ಥಿತರಿದ್ದರು.

    ಮುಖ್ಯಮಂತ್ರಿಗೆ ಮನವಿ: ಬಸವ ನಗರ ನಿವಾಸಿಗಳು ಮಿನಿ ವಿಧಾನಸೌದಕ್ಕೆ ತೆರಳಿ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ವಿದ್ಯಾಧರ ಗುಳಗುಳೆಯವರಿಗೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts