More

    ಒತ್ತುವರಿ ತೆರವು ವಿಳಂಬ

    ಶಿರಸಿ: ಜಿಲ್ಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ವರ್ಷದಿಂದ ನಡೆಯುತ್ತಿರುವ ಸರ್ಕಾರಿ ಕೆರೆ ಸರ್ವೆ ಹಾಗೂ ಒತ್ತುವರಿ ತೆರವು ಕಾರ್ಯ ವಿಳಂಬ ಗತಿಯಿಂದ ಸಾಗಿದೆ. ಇಲಾಖೆಯ ನಡೆ ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

    ಸರ್ಕಾರಿ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 5503 ಎಕರೆ ವಿಸ್ತೀರ್ಣದಲ್ಲಿ 2067 ಕೆರೆಗಳಿವೆ. ಇವುಗಳಲ್ಲಿ 3542 ಎಕರೆ ವ್ಯಾಪ್ತಿಯ 1392 ಕೆರೆಗಳ ಸರ್ವೆ ಈಗಾಗಲೇ ಪೂರ್ಣಗೊಂಡಿದೆ. ಸರ್ವೆ ಆಗಿರುವ ಕೆರೆಗಳಲ್ಲಿ 312 ಕೆರೆಗಳ 106 ಎಕರೆ ಪ್ರದೇಶ ಒತ್ತುವರಿಯಾಗಿದೆ. ಈ ಪೈಕಿ 164 ಕೆರೆಗಳ 50 ಎಕರೆ ಒತ್ತುವರಿ ಪ್ರದೇಶ ತೆರವು ಮಾಡಲಾಗಿದೆ. ಸಮಾಧಾನಕರ ಸಂಗತಿ ಏನೆಂದರೆ 1080 ಕೆರೆಗಳು ಅತಿಕ್ರಮಣ ಮುಕ್ತವಾಗಿವೆ.

    ಸರ್ವೆ ಬಾಕಿ: ವರ್ಷದಿಂದ ನಡೆಯುತ್ತಿರುವ ಕೆರೆಗಳ ಸರ್ವೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕರೊನಾ, ಲಾಕ್​ಡೌನ್ ಕಾರಣದಿಂದ ಸರ್ವೆ ಕಾರ್ಯ ತೀರಾ ಹಿನ್ನಡೆಯಾಗಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ 1960 ಎಕರೆ ವ್ಯಾಪ್ತಿಯ 675 ಕೆರೆಗಳ ಸರ್ವೆ ಕಾರ್ಯ ಬಾಕಿಯಿದೆ. ಇದರಲ್ಲಿ ನೂರಾರು ಎಕರೆ ಅತಿಕ್ರಮಣ ಆಗಿದೆ ಎನ್ನುವುದು ಇಲಾಖೆ ಮೂಲಗಳ ಮಾಹಿತಿಯಾಗಿದೆ. ಈಗಾಗಲೇ ಸರ್ವೆ ಆಗಿರುವ ಕೆರೆಗಳಲ್ಲಿ ಇನ್ನೂ 148 ಕೆರೆಗಳ 55 ಎಕರೆ ಒತ್ತುವರಿ ಪ್ರದೇಶ ತೆರವು ಕಾರ್ಯ ಬಾಕಿಯಿದೆ.

    ನಿವೇಶನ, ಜಮೀನು ವಿಸ್ತರಣೆಗೆ ಕೆರೆ ಬಲಿ: ಕೃಷಿ ಕ್ಷೇತ್ರ ವಿಸ್ತರಣೆಯ ಕಾರಣದಿಂದ ಜಿಲ್ಲೆಯ ಹಲವೆಡೆ ಸರ್ಕಾರಿ ಕೆರೆಗಳು ಅತಿಕ್ರಮಣ ಆಗಿದೆ. ನಗರ ಹಾಗೂ ನಗರದ ಹೊರವಲಯಗಳಲ್ಲಿ ನಿವೇಶನಗಳ ವಿಸ್ತರಣೆಗೆ ಕೆರೆಗಳು ಬಲಿಯಾಗಿವೆ. ಕೆಲವೆಡೆ ನಗರ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಮತ್ತಷ್ಟು ಒತ್ತುವರಿ ನಡೆದಿದೆ. ಕೆಲ ಕೆರೆಗಳು ಜಲ ಬತ್ತಿಸಿಕೊಂಡು ಬಯಲಿನಂತಾದರೆ, ಇನ್ನೂ ಕೆಲವು ಚಿಕ್ಕ ಹೊಂಡದಷ್ಟು ಅಳತೆಗೆ ಕುಗ್ಗಿವೆ.

    ಜಲಮೂಲಗಳ ನಾಶ: ಜಿಲ್ಲೆ ಮಲೆನಾಡು ಪ್ರದೇಶವಾದರೂ ಬೇಸಿಗೆ ಆರಂಭದೊಂದಿಗೆ ನೀರಿನ ಕೊರತೆ ಎದುರಾಗುತ್ತದೆ. ನದಿಗಳು, ಹಳ್ಳ-ಕೊಳ್ಳಗಳಿಗೆ ಜಲಮೂಲವಾಗಿದ್ದ ಕೆರೆಗಳ ನಾಶದಿಂದ ಅಂತರ್ಜಲ ಮಟ್ಟವೂ ಸಾಕಷ್ಟು ಕುಸಿದಿದೆ. ಈ ಹಿಂದೆ ಹಳ್ಳಿಗಳಿಗೆ ಜಲಮೂಲವಾಗಿದ್ದ ಹಲವು ಕೆರೆಗಳ ನಾಶದಿಂದ ಕುಡಿಯುವ ನೀರಿಗಾಗಿ ಬೇರೆ ಬೇರೆ ವ್ಯವಸ್ಥೆಯತ್ತ ಹೊರಳುವಂತಾಗಿದೆ. ಅತಿಕ್ರಮಣವಾಗಿ ನಾಶವಾಗುತ್ತಿರುವ ಕೆರೆಗಳ ಪುನರುಜ್ಜೀವನಕ್ಕೆ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕೆರೆ ಸಮ್ಮೇಳನ ಸಂಘಟಿಸಿದರೂ ಹೆಚ್ಚಿನ ಪ್ರಯೋಜನ ಆಗಿಲ್ಲ.

    ಇನ್ನಷ್ಟು ಚುರುಕು ಬೇಕು: ಸರ್ಕಾರದ ಕಾಗದ ಪತ್ರಗಳಲ್ಲಿ ಮಾತ್ರ ಕೆರೆ ಒತ್ತುವರಿ ತೆರವುಗೊಂಡಿದೆ ಎಂಬ ಮಾತು ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ತೆರಳಿ, ಕೆರೆಗಳ ಅಂಚು ಗುರುತಿಸಿ, ಗಟ್ಟಿಯಾದ ಕಲ್ಲು ಅಥವಾ ಟ್ರೆಂಚ್ ಹೊಡೆಸಿ, ಕೆರೆಯಂಗಳ ಅನ್ಯರ ಪಾಲಾಗದಂತೆ ನೋಡಿಕೊಳ್ಳುವ ಕೆಲಸ ಇಲಾಖೆಯಿಂದ ಇನ್ನಷ್ಟು ಚುರುಕಾಗಿ ಆಗಬೇಕಾಗಿದೆ ಎನ್ನುತ್ತಾರೆ ನೀರಾವರಿ ಮತ್ತು ಪರಿಸರ ತಜ್ಞರು.

    ಸರ್ಕಾರಿ ಕೆರೆಗಳ ನಿರ್ವಹಣೆ ನಿರ್ಲಕ್ಷ್ಯಂದ ಅತಿಕ್ರಮಣದಂತ ಅಧ್ವಾನಗಳು ನಡೆಯುತ್ತಿವೆ. 2016ರ ನಂತರ ಕೆರೆ ಅತಿಕ್ರಮಣ ತೆರವಿನಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದರೂ, ಹೆಚ್ಚು ವೇಗ ಪಡೆದಿಲ್ಲ. ಹಲವು ಕಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆಗಳಿದ್ದು, ಪಂಚಾಯಿತಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಧಿಕಾರಿಗಳು ಖುಲ್ಲಾಪಡಿಸಿದ ಕೆರೆಗಳಿಗೆ ಮರುಜೀವ ಕೊಡುವ ಕಾರ್ಯವಾಗಿಲ್ಲ. ಜನರ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಬೇಕು. ಕೆರೆಗಳ ಮಹತ್ವ ಜನರಿಗೆ ತಿಳಿಸುವ ಕೆಲಸ ಆಗಬೇಕು. ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು.

    | ಶಿವಾನಂದ ಕಳವೆ ಪರಿಸರ ಕಾರ್ಯಕರ್ತ

    ಈಗಾಗಲೇ ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ನಡೆದಿದೆ. ಕೆಲವು ಕೆರೆಗಳ ಅತಿಕ್ರಮಣ ಖುಲ್ಲಾಪಡಿಸಲಾಗಿದೆ. ಅದರ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನೂ ಕೆಲವು ಕೆರೆಗಳ ಸರ್ವೆ ಕಾರ್ಯ ನಡೆಸಬೇಕಿದ್ದು, ಅತಿಕ್ರಮಣವಾದಲ್ಲಿ ತೆರವು ಮಾಡಲು ಕ್ರಮ ವಹಿಸಲಾಗುವುದು.

    | ಮುಲ್ಲೆ ೖ ಮುಗಿಲನ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts