More

    ಒತ್ತುವರಿಯಿಂದ ಕಾಡು ನಾಶ

    ಚಿಕ್ಕಮಗಳೂರು: ಭಾರತದಲ್ಲಿ ಶೇ.33ರಷ್ಟು ಅರಣ್ಯ ಇರಬೇಕು. ಆದರೆ ಈಗಿರುವುದು ಶೇ.24 ಮಾತ್ರ. ರಾಜ್ಯದಲ್ಲಿ ಶೇ.20ರಷ್ಟು ಇದೆ. ಒತ್ತುವರಿ, ಧನದಾಹ ಮತ್ತಿತರ ಕಾರಣದಿಂದ ಕ್ರಮೇಣ ಅರಣ್ಯ ನಾಶವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು. ನಗರ ಹೊರವಲಯದ ಗವನಹಳ್ಳಿ ಶ್ರೀನಿವಾಸ ನಗರದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಿ.ಶ್ರೀನಿವಾಸ್ ಪುತ್ಥಳಿಗೆ ಗೌರವ ಸಲ್ಲಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ 9589 ಒತ್ತುವರಿ ಪ್ರಕರಣಗಳಿವೆ. ಅರಣ್ಯ ರಕ್ಷಣೆಯಲ್ಲಿ ಸಿಬ್ಬಂದಿ ಮಾಡಿದ ಸೇವೆ, ತ್ಯಾಗಗಳು ಮಹತ್ತರ. ಪ್ರಕೃತಿಯು ಸೃಷ್ಟಿಯ ವರದಾನ. ಇದನ್ನು ಸಂರಕ್ಷಣೆ ಮಾಡಬೇಕಾದ ಹೊಣೆ ಕೇವಲ ಅರಣ್ಯ ಇಲಾಖೆ ಸಿಬ್ಬಂದಿಯದಲ್ಲ. ನಮ್ಮೆಲ್ಲರದೂ ಹೌದು. ಒಂದೆಡೆ ಕಾಡುಪ್ರಾಣಿ, ಕಾಡುಗಳ್ಳರು, ಬೇಟೆಗಾರರು ಮತ್ತೊಂದೆಡೆ ರಾಜಕೀಯ ಒತ್ತಡ, ಒತ್ತುವರಿ ಸಮಸ್ಯೆಗಳ ನಡುವೆ ಕೆಲಸ ಮಾಡುವುದು ಸುಲಭದ ಮಾತಲ್ಲ ಎಂದರು.

    ವೀರಪ್ಪನ್ ಮೃತಪಟ್ಟು 19 ವರ್ಷವಾದರೂ ಮೈಸೂರಿನ ಕೆಲ ಭಾಗಗಳಲ್ಲಿ ಆನೆ ದಂತ ಕಳವು ವಿಷಯ ಆಗಾಗ ಕೇಳುಬರುತ್ತದೆ. ಇದರಿಂದ ನಮ್ಮ ಜವಾಬ್ದಾರಿ ಕೂಡ ಹೆಚ್ಚಾಗುತ್ತಿದೆ. ಪಿ.ಶ್ರೀನಿವಾಸ್ ಅವರು 1987ರಿಂದ ಡಿಸಿಎಫ್ ಆಗಿ ಈ ಭಾಗದಲ್ಲಿ ವಸತಿಗೃಹ, ಕಾಂಪ್ಲೆಕ್ಸ್, ಸಮುದಾಯ ಭವನ ನಿರ್ಮಾಣ ಮುಂತಾದ ಕೆಲಸ ಮಾಡಿದ್ದಾರೆ. ಅರಣ್ಯ ಸಂಪತ್ತು ರಕ್ಷಣೆಗಾಗಿ ಜೀವತ್ಯಾಗ ಮಾಡಿ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಇಂದು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ನೋಡುವ ರೀತಿಯೇ ಬೇರೆಯಾಗಿದೆ. ಆದರೆ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚೆತ್ತುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸಿ. ಜಿಲ್ಲಾಡಳಿತ ನಿಮ್ಮೊಂದಿಗಿದೆ ಎಂದು ಅಭಯ ನೀಡಿದರು.

    ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಮಾತನಾಡಿ, ದೇಶದಲ್ಲಿ ವನ ಸಂಪತ್ತು ರಕ್ಷಣೆ ಸಂದರ್ಭದಲ್ಲಿ ಜೀವವನ್ನೇ ತ್ಯಾಗ ಮಾಡಿದವರನ್ನು ಸ್ಮರಿಸುವ ಸಂದರ್ಭವಿದು. ಇತ್ತೀಚೆಗೆ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಇದರಿಂದ ಪ್ರಕೃತಿ ಸಂಪತ್ತಿನ ಪ್ರಾಮುಖ್ಯತೆಯ ಅರಿವಾಗುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಅರಣ್ಯ ಸಂಪತ್ತು ರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts