More

    ಒಣಮೆಣಸಿನಕಾಯಿಗೂ ಇ-ಟೆಂಡರ್

    ಗದಗ: ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರದಿಂದ ಒಣಮೆಣಸಿನಕಾಯಿ ಬೆಳೆಗೂ ಇ-ಟೆಂಡರ್ ವ್ಯವಸ್ಥೆ ಆರಂಭಿಸಲಾಗಿದೆ. ಇದರಿಂದ ದರ ಕುಸಿತ ತಪ್ಪಿಸಲು ಹಾಗೂ ಮಾರುಕಟ್ಟೆಯಲ್ಲಿ ರೈತರಿಗೆ ಯೋಗ್ಯ ಬೆಲೆ ಸಿಗಲಿದೆ.

    ಗದಗ ಎಪಿಎಂಸಿಯಲ್ಲಿ ಈಗಾಗಲೇ ಎಲ್ಲ ಉತ್ಪನ್ನಗಳನ್ನು ಇ-ಟೆಂಡರ್ ಮೂಲಕವೇ ಖರೀದಿಸಲಾಗುತ್ತಿದೆ. ಗದಗ ಹಾಗೂ ಸುತ್ತಮುತ್ತಲಿನ ರೈತರ ಒತ್ತಾಯದ ಮೇರೆಗೆ ಎಪಿಎಂಸಿ ಸಮಿತಿ ಸದಸ್ಯರು, ಖರೀದಿದಾರರು ಹಾಗೂ ದಲಾಲರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿ ಇ-ಟೆಂಡರ್​ಗೆ ಚಾಲನೆ ನೀಡಲಾಗಿದೆ. ಹುಬ್ಬಳ್ಳಿ ಹಾಗೂ ಬ್ಯಾಡಗಿ ಖರೀದಿದಾರರೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗದಗ ಮಾರುಕಟ್ಟೆಯಲ್ಲಿ 1ರಿಂದ ಒಣಮೆಣಸಿನಕಾಯಿಯ ಆನ್​ಲೈನ್ ಟೆಂಡರ್ ಮಾರಾಟ ಪ್ರಕ್ರಿಯೆ ಜಾರಿಗೊಳಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ಅವರು 10 ದಿನ ಮುಂಚಿತವಾಗಿ ಕರಪತ್ರ ಹಂಚಿ ಪ್ರಚಾರ ಕೈಗೊಂಡಿದ್ದರು. ನೂತನ ಪದ್ಧತಿ ವಿರೋಧಿಸಿದರೆ ಸಂಬಂಧಿಸಿದವರ ದಲಾಲಿ ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರಿಂದ ಹೊಸ ಪದ್ಧತಿಗೆ ಯಾವುದೇ ಅಡ್ಡಿಯಾಗಿಲ್ಲ. ಬುಧವಾರ ಪ್ರತಿ ಕ್ವಿಂಟಾಲ್ ಮೆಣಸಿನಕಾಯಿ 22,500 ರೂ.ಗೆ ಮಾರಾಟವಾಗಿದೆ. ಇಲ್ಲಿವರೆಗೆ 18 ಸಾವಿರ ರೂ. ಗರಿಷ್ಠ ದರವಿತ್ತು.

    ರೈತರು ಮಾರುಕಟ್ಟೆಗೆ ತರುವ ಉತ್ಪನ್ನವನ್ನು ತಮಗೆ ಇಷ್ಟವಾದ ದಲಾಲಿ ಅಂಗಡಿಯಲ್ಲಿ ಇಟ್ಟಿರುತ್ತಾರೆ. ಅಲ್ಲಿಗೆ ಬರುವ ಒಣಮೆಣಸಿನಕಾಯಿ ಖರೀದಿದಾರರು ಉತ್ಪನ್ನ ಗುಣಮಟ್ಟ ಪರಿಶೀಲಿಸಿ ದರ ನಿಗದಿಪಡಿಸುತ್ತಾರೆ. ಇದರಲ್ಲಿ ದಲಾಲರು, ಖರೀದಿದಾರರು ಹಾಗೂ ಸವಾಲು ಕೂಗುವ ವ್ಯಕ್ತಿಯೊಂದಿಗೆ ಒಳ ಒಪ್ಪಂದ ಏರ್ಪಟ್ಟಿರುತ್ತದೆ ಎಂಬ ಸಾಮಾನ್ಯ ಆರೋಪವಿತ್ತು.

    ಅಲ್ಲದೆ, ಒಬ್ಬರು ಇಲ್ಲವೆ ಇಬ್ಬರು ಖರೀದಿದಾರರು ಸವಾಲು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ರೈತರಿಗೆ ಉತ್ತಮ ದರ ಸಿಗುವುದಿಲ್ಲ. ಜತೆಗೆ ಎಷ್ಟು ದರಕ್ಕೆ ಉತ್ಪನ್ನ ಮಾರಾಟವಾಯಿತು ಎಂಬ ನಿಖರ ಮಾಹಿತಿ ಕೂಡ ಅನೇಕ ರೈತರಿಗೆ ಗೊತ್ತಿರುವುದಿಲ್ಲ. ಖರೀದಿದಾರರು ಮತ್ತು ದಲಾಲರು ಹೇಳಿದಷ್ಟು ದರಕ್ಕೆ ಉತ್ಪನ್ನ ಮಾರಾಟ ಮಾಡಿ ಹೋಗುವಂತಹ ಪರಿಸ್ಥಿತಿ ಈ ಹಿಂದೆ ಇತ್ತು. ಈ ಎಲ್ಲ ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗುತ್ತದೆ ಎಂಬುದನ್ನು ಮನಗಂಡು ಎಪಿಎಂಸಿ ಅಧಿಕಾರಿಗಳು ಒಣಮೆಣಸಿನಕಾಯಿಗೂ ಆನ್​ಲೈನ್ ಟೆಂಡರ್ ಪದ್ಧತಿ ಆರಂಭಿಸಿದ್ದಾರೆ.

    ಹೀಗೆ ಆನ್​ಲೈನ್ ವ್ಯವಹಾರ: ಒಣಮೆಣಸಿನಕಾಯಿ ತರುವ ರೈತರು ಯಾವ ಅಂಗಡಿಗೆ ಸಾಗಿಸುತ್ತಿದ್ದಾರೆ ಎಂದು ಎಪಿಎಂಸಿ ಗೇಟ್​ನಲ್ಲಿರುವ ಸಿಬ್ಬಂದಿಗೆ ಮಾಹಿತಿ ನೀಡಬೇಕು. ರೈತನ ಹೆಸರು, ಊರು, ಎಷ್ಟು ಚೀಲ ಮತ್ತು ದಲಾಲಿ ಅಂಗಡಿಯ ಹೆಸರನ್ನು ಕಡ್ಡಾಯವಾಗಿ ನೀಡಬೇಕು. ನಂತರ ಸಂಬಂಧಿಸಿದ ದಲಾಲಿ ಅಂಗಡಿಗೆ ಉತ್ಪನ್ನ ಇಳಿಸಬೇಕು. ಬೆಳಗ್ಗೆ 10 ಗಂಟೆಯೊಳಗೆ ಬರುವ ಅಷ್ಟೂ ರೈತರ ಹೆಸರು ಮತ್ತು ಎಷ್ಟು ಚೀಲ ಎಂಬ ಮಾಹಿತಿಯನ್ನು ದಲಾಲರು ತಮ್ಮಲ್ಲಿರುವ ಎಪಿಎಂಸಿ ಕಚೇರಿಗೆ ಸಲ್ಲಿಸುತ್ತಾರೆ. ಎಪಿಎಂಸಿಯಲ್ಲಿರುವ ಎಲ್ಲ ಒಣಮೆಣಸಿನಕಾಯಿ ದಲ್ಲಾಳಿಗಳು ಕಚೇರಿಗೆ ಮಾಹಿತಿ ನೀಡಬೇಕು. ಅದರ ಒಂದು ಪ್ರತಿಯನ್ನು ಖರೀದಿದಾರರು ಪಡೆದುಕೊಳ್ಳುತ್ತಾರೆ. ಬೆಳಗ್ಗೆ 11ರ ನಂತರ ಟೆಂಡರ್ ತೆರೆಯಲಾಗುತ್ತಿದೆ. ಖರೀದಿದಾರರು ಎಲ್ಲ ಅಂಗಡಿಗೆ ತೆರಳಿ ಆಯಾ ಉತ್ಪನ್ನಗಳಿಗೆ ದರ ನಿಗದಿಪಡಿಸಿ ಕಚೇರಿಗೆ ಮಾಹಿತಿ ನೀಡಬೇಕು. ಹೆಚ್ಚು ಬಿಡ್ ಮಾಡಿದವರ ಹೆಸರು ಮತ್ತು ದರವನ್ನು ಆನ್​ಲೈನ್​ನಲ್ಲಿ ಪ್ರಕಟಿಸಲಾಗುತ್ತದೆ.

    ******

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts