More

    ಒಂದೇ ದಿನ ಐದು ಲಕ್ಷ ರೂಪಾಯಿ ತೆರಿಗೆ ಸಂಗ್ರಹ

    ಬ್ಯಾಡಗಿ: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪುರಸಭೆ ತೆರಿಗೆ ಸಂಗ್ರಹ ಆರಂಭಿಸಿದ್ದು, ಗುರುವಾರ ಒಂದೇ ದಿನ 5 ಲಕ್ಷ ರೂಪಾಯಿ ಪಾವತಿಯಾಗಿದೆ.

    2020-21ನೇ ಸಾಲಿನ ತೆರಿಗೆ ಸಂಗ್ರಹ ಏ. 1ರಿಂದ ಆರಂಭವಾಗಬೇಕಿತ್ತು. ಲಾಕ್​ಡೌನ್​ನಿಂದ ಪುರಸಭೆಗೆ ಜಮೆಯಾಗಬೇಕಿದ್ದ ತೆರಿಗೆ ಸಂಗ್ರಹದ ಆದಾಯ ಸ್ಥಗಿತವಾಗಿತ್ತು. ಈಗ ಪುರಸಭೆ ಹಣ ತುಂಬಲು ಹೊಸ ಕೌಂಟರ್ ತೆರೆದಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ತೆರಿಗೆ ಭರಿಸಲು ಅವಕಾಶ ಕಲ್ಪಿಸಿದೆ.

    ಪುರಸಭೆ ವ್ಯಾಪ್ತಿಯ 23 ವಾರ್ಡ್​ಗಳ ಸುಮಾರು 35 ಸಾವಿರ ಜನರಿಗೆ ಕುಡಿಯುವ ನೀರು, ಸ್ವಚ್ಛತೆ, ವಿದ್ಯುದ್ದೀಪ ಸೇರಿ ಹಲವು ಸೌಲಭ್ಯ ಕಲ್ಪಿಸಬೇಕಿದೆ. ವಾರ್ಷಿಕ ಮನೆ ಕಂದಾಯ 86 ಲಕ್ಷ ರೂ, ನೀರಿನ ಕರ 69.35 ಲಕ್ಷ ರೂ. ಸಂಗ್ರಹ ಗುರಿಯಿದೆ. ಪ್ರತಿಬಾರಿಯೂ ಪುರಸಭೆ ವಿಶೇಷ ರಿಯಾಯಿತಿ ಹಾಗೂ ಅವಧಿ ವಿಸ್ತರಣೆಯ ಅನುಕೂಲ ಕಲ್ಪಿಸಿದೆ.

    ಪ್ರಸಕ್ತ ಸಾಲಿನ ಏ. 1ರಂದು ಹೊಸ ವರ್ಷದಲ್ಲಿ ತೆರಿಗೆ ತುಂಬಿಸಿಕೊಳ್ಳಲು ಸಿಬ್ಬಂದಿ ಮುಂದಾಗಿದ್ದರು. ಆದರೆ, ಲಾಕ್​ಡೌನ್ ಘೊಷಣೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರದಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಸಾರ್ವಜನಿಕರು ಹಣ ತುಂಬಲು ಬ್ಯಾಂಕ್​ಗಳಿಗೆ ತೆರಳಲಿಲ್ಲ. ಪುರಸಭೆ ಹಾಗೂ ಯೂನಿಯನ್ ಬ್ಯಾಂಕ್ ಜಂಟಿಯಾಗಿ ಹಣ ತುಂಬಿಸಿಕೊಳ್ಳುವ ನೂತನ ಕೌಂಟರ್ ತೆರೆದಿದ್ದು, ಒಂದೇ ಸ್ಥಳದಲ್ಲಿ ತೆರಿಗೆ ಅರ್ಜಿ ಹಾಗೂ ಹಣ ಪಡೆಯುವ ವ್ಯವಸ್ಥೆ ಮಾಡಿದೆ. ಹೀಗಾಗಿ ಏ. 24ರಿಂದ ರಜೆ ಹೊರತುಪಡಿಸಿ ಐದು ದಿನಗಳಲ್ಲಿ (ಏ. 24, 27, 28, 29 ಹಾಗೂ 30ರಂದು) ಒಟ್ಟು 19.73 ಲಕ್ಷ ರೂ. ಸಂಗ್ರಹಿಸುವ ಮೂಲಕ ದಾಖಲೆ ಕಂಡಿದೆ.

    ಸಾರ್ವಜನಿಕರು ಮೂಲಸೌಲಭ್ಯ ಪಡೆಯಲು ವಿವಿಧ ತೆರಿಗೆ ಜಮೆ ಮಾಡಬೇಕಿದೆ. ಇದರಿಂದ ಆಡಳಿತ ವ್ಯವಸ್ಥೆ ಸರಿದೂಗಿಸಲು ಸಾಧ್ಯ. ಲಾಕ್​ಡೌನ್​ನಿಂದ ತೆರಿಗೆ ಸಂಗ್ರಹ ಸ್ಥಗಿತಗೊಂಡಿತ್ತು. ಕಳೆದ ಬಾರಿ ಒಂದೆರಡು ತಿಂಗಳಲ್ಲಿ ಶೇ. 40ರಷ್ಟು ಸಂಗ್ರಹವಾಗಿತ್ತು. ಕರೊನಾ ಸಮಸ್ಯೆಯಿಂದ ಪುರಸಭೆ ತೀವ್ರ ನಷ್ಟ ಅನುಭವಿಸಿದೆ. ಏ. 30ರಂದು ಒಂದೇ ದಿನದಲ್ಲಿ 5 ಲಕ್ಷ ರೂ. ತೆರಿಗೆ ಸಂಗ್ರಹವಾಗಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರು ಕಡ್ಡಾಯವಾಗಿ ಸ್ಕ್ರೀನಿಂಗ್​ಗೆ ಒಳಪಟ್ಟು, ಸಾಮಾಜಿಕ ಅಂತರ ಪಾಲಿಸಿ, ಮುಖಗವಸು ಹಾಕಿಕೊಂಡು ಸರದಿಯಲ್ಲಿ ನಿಲ್ಲಲು ತಿಳಿಸಲಾಗಿದೆ.
    | ವಿ.ಎಂ. ಪೂಜಾರ ಪುರಸಭೆ ಮುಖ್ಯಾಧಿಕಾರಿ

    ಲಾಕ್​ಡೌನ್ ಪಾಲನೆಯಿಂದಾಗಿ ಬ್ಯಾಂಕ್​ಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಪುರಸಭೆ ಹಾಗೂ ಯೂನಿಯನ್ ಬ್ಯಾಂಕ್ ಜಂಟಿಯಾಗಿ ತೆರಿಗೆ ಕೌಂಟರ್ ತೆರೆದಿರುವುದು ಅನುಕೂಲವಾಗಿದೆ. ಬ್ಯಾಂಕ್​ನಲ್ಲಿ ಎರಡು ತಾಸುಗಟ್ಟಲೆ ಕಾಯಬೇಕಿತ್ತು. ಆದರೆ, ಇಲ್ಲಿ ಎಲ್ಲ ಅನುಕೂಲವಾಗಿದ್ದು, ಅರ್ಧ ಗಂಟೆಯಲ್ಲಿ ತೆರಿಗೆ ಪಾವತಿಸಿ ವಾಪಸಾಗುತ್ತಿದ್ದೇವೆ.
    | ನಾಗರಾಜ ಕುಂಬಾರ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts