More

    ಒಂದೇ ತಳಿ ರಾಗಿ ಬೆಳೆದು ಮಾರಾಟ ಮಾಡಿ : ನಬಾರ್ಡ್ ಆರ್ಡರ್ ಸಂಸ್ಥೆ ಯೋಜನಾ ನಿರ್ದೇಶಕ ರಘು ಸಲಹೆ

    ತಿಪಟೂರು: ಗುಣಮಟ್ಟದ ರಾಗಿ ಬೆಳೆ ಬೆಳೆದು ಹೆಚ್ಚಿನ ಆದಾಯ ಗಳಿಸುವ ಕುರಿತು ರೈತರಿಗೆ ಮಾಹಿತಿ ಒದಗಿಸಲು ತಾಲೂಕಿನ ಅರಳಗುಪ್ಪೆಯಲ್ಲಿ ಜಿಲ್ಲಾ ಸಾವಯವ ಕೃಷಿ ಉತ್ಪಾದಕರ ಕಂಪನಿ ಹಾಗೂ ನಬಾರ್ಡ್ ಆರ್ಡರ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಕೃಷಿ ಇಲಾಖೆ ಕೊಡುತ್ತಿರುವ ರಾಗಿ ತಳಿ ಹಾಗೂ ರೈತರು ಮನೆಯಲ್ಲಿ ಶೇಖರಿಸಿಟ್ಟಿದ್ದ ರಾಗಿ ತಳಿ ಎರಡನ್ನೂ ಬಿತ್ತಿದಾಗ, ಕಟಾವಿನ ನಂತರ ಕೆಂಪು, ಕಪ್ಪು ಮಿಶ್ರಿತ ರಾಗಿ ಬೆಳೆ ಬರುತ್ತಿದೆ. ಅದನ್ನು ವಾರಲು ಹೋದಾಗ ಕೆಂಪು ಬಣ್ಣದ ರಾಗಿ ಖರೀದಿಗೆ ಹೆಚ್ಚು ಒಲವು ತೋರುವ ಖರೀದಿದಾರರು ಒಂದಕ್ಕೆ ಹೆಚ್ಚು ಬೆಲೆ, ಮತ್ತೊಂದಕ್ಕೆ ಕಡಿಮೆ ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ನಷ್ಟ ಉಂಟಾಗುತ್ತಿದೆ. ಹಾಗಾಗಿ ಒಂದೇ ತಳಿ ರಾಗಿ ಬೆಳೆದು, ಒಟ್ಟಿಗೆ ಮಾರಾಟ ಮಾಡಬೇಕು ಎಂದು ನಬಾರ್ಡ್ ಆರ್ಡರ್ ಸಂಸ್ಥೆಯ ಯೋಜನಾ ನಿರ್ದೇಶಕ ಜಿ.ವಿ.ರಘು ತಿಳಿಸಿದರು.

    ಸಂಸ್ಥೆಯಿಂದ ನೀಡಲಾಗುತ್ತಿರುವ ಎಂಆರ್-6 ತಳಿಯ ರಾಗಿಯನ್ನು ಗ್ರಾಮದ ಎಲ್ಲ ರೈತರು ಒಟ್ಟಿಗೆ ಬಿತ್ತನೆ ಮಾಡಿದರೆ ಒಂದೇ ತಳಿಯ ಗುಣಮಟ್ಟದ ರಾಗಿ ಕೈ ಸೇರುತ್ತದೆ. ಜತೆಗೆ ಒಂದೇ ಗುಣಮಟ್ಟದ ರಾಗಿ ಒಂದೆಡೆ ಸಿಗುವುದರಿಂದ ಖರೀದಿದಾರರು ಆಸಕ್ತಿಯಿಂದ ಮುಂದೆ ಬರುತ್ತಾರೆ ಮತ್ತು ಒಳ್ಳೆ ಬೆಲೆಯೂ ಸಿಗುತ್ತದೆ ಎಂದರು.

    ರೈತ ಕ್ಷೇತ್ರ ಪಾಠಶಾಲೆಯ ಉದ್ದೇಶ ಹಾಗೂ ಗುಂಪು ರಚನೆ, ರಾಗಿ ಬೆಳೆ ಆಯ್ಕೆ ಹಾಗೂ ಕೀಟಬಾಧೆಯನ್ನು ಹತೋಟಿಗೆ ತರುವ ಕುರಿತು ವಿವರಿಸಿದ ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ರಾಗಿ ಬೆಳೆಯ ಮಧ್ಯದಲ್ಲಿ ಅಂತರ ಬೆಳೆಯಾಗಿ ಹುಚ್ಚೆಳ್ಳು, ಜೋಳ, ಅವರೆ ಬೆಳೆಯುವುದರ ಬಗ್ಗೆ ರೈತ ಕೃಷಿ ಪಾಠಶಾಲೆಯಲ್ಲಿ ಹೆಚ್ಚಿನ ವಾಹಿತಿ ದೊರೆಯುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts