More

    ಒಂದೂ ಮನೆ ಮಂಜೂರು ಮಾಡಿಲ್ಲ

    ಎಚ್.ಡಿ.ಕೋಟೆ: ನಾಲ್ಕೈದು ವರ್ಷಗಳಿಂದ ಸರ್ಕಾರ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಹೀಗಾದರೆ ತಾಲೂಕಿನ ಜನರ ಸಮಸ್ಯೆಗೆ ಶಾಸಕನಾದ ನಾನು ಹೇಗೆ ಸ್ಪಂದಿಸಲು ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ಅಸಮಾಧಾನ ವ್ಯಕ್ತಪಡಿಸಿದರು.


    ಪಟ್ಟಣದ ತಾಲೂಕು ಆಡಳಿತಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಈವರೆಗೂ ಸರ್ಕಾರ ಮನೆಗಳನ್ನು ಮಂಜೂರು ಮಾಡಿಲ್ಲ. ಕ್ಷೇತ್ರದ ಫಲಾನುಭವಿಗಳಿಗೆ ಏನು ಉತ್ತರ ಕೊಡಬೇಕು? ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಬಿದ್ದ ಮಳೆಗೆ 3 ಸಾವಿರಕ್ಕೂ ಹೆಚ್ಚು ವಾಸದ ಮನೆಗಳು ಹಾನಿಗೊಳಗಾಗಿವೆ. ಇದರಿಂದಾಗಿ ಜನರು ವಾಸಿಸಲು ಮನೆ ಇಲ್ಲದೆ ಪರಿತಪಿಸುವಂತಾಗಿದೆ. ಈಗಾಗಲೇ ಸರ್ಕಾರದಿಂದ ಬಿದ್ದು ಹೋದ ಮನೆಗಳ ಮರು ನಿರ್ಮಾಣಕ್ಕೆ ಕ್ಷೇತ್ರಕ್ಕೆ 4.5 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವರದಿ ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

    ಕಳೆದ ಮೂರ‌್ನಾಲ್ಕು ತಿಂಗಳ ಹಿಂದೆ ಬಿದ್ದ ಮಳೆಗೆ ಮನೆಗಳು ಕುಸಿದು ಹೋಗಿದ್ದು ಅಂತಹ ಮನೆಗಳಲ್ಲಿ ಪ್ರಸ್ತುತ ಯಾರೂ ವಾಸ ಮಾಡುತ್ತಿಲ್ಲ. ಅಧಿಕಾರಿಗಳು ಪರಿಶೀಲನೆ ವೇಳೆ ವಾಸ ಇರುವುದಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದರೆ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಲಿದೆ. ಬಿದ್ದು ಹೋಗಿರುವ ಮನೆಗಳಲ್ಲಿ ಯಾರೂ ವಾಸಿಸಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ನೀಡಬೇಕು. ಅದೇ ರೀತಿ ಸಾರ್ವಜನಿಕರು ಕೂಡ ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡದೆ ವಾಸ್ತವ ಸಂಗತಿ ತಿಳಿಸಬೇಕು ಎಂದು ಮನವಿ ಮಾಡಿದರು.

    ಅನಾರೋಗ್ಯ ಕಾರಣ ಕೆಲ ದಿನಗಳಿಂದ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವ ಕೆಲಸ ಮಾಡದೆ ಜನರನ್ನು ಅಲೆದಾಡುವಂತೆ ಮಾಡಿರುವುದು ಸರಿಯಲ್ಲ. ತುರ್ತು ಸಂದರ್ಭದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಬೇಕಿತ್ತು. ಆ ಕೆಲಸ ಕೂಡ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ತಹಸೀಲ್ದಾರ್ ರತ್ನಾಂಬಿಕಾ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನಲ್ಲಿ 646, ಸರಗೂರು ತಾಲೂಕಿನಲ್ಲಿ 1,515 ಮನೆಗಳು ಮಳೆಗೆ ಹಾನಿಯಾಗಿವೆ. ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳಿಂದ ವರದಿ ತರಿಸಿ ಸರ್ಕಾರಕ್ಕೆ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದಿಂದ ಎಚ್.ಡಿ.ಕೋಟೆ ತಾಲೂಕಿಗೆ 6 ಕೋಟಿ ರೂ., ಸರಗೂರು ತಾಲೂಕಿಗೆ 9.5 ಕೋಟಿ ರೂ.ಹಣ ಬಿಡುಗಡೆಯಾಗಿದೆ. ಆರ್‌ಟಿಜಿಎಸ್ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts