More

    ಒಂದು ವರ್ಷ ತೆಗೆದಿಟ್ಟ ಅನ್ನದಿಂದಲೇ ಇಲ್ಲಿ ಪ್ರಸಾದ! ನಾಗನೂರಲ್ಲಿ ಉಮಾ ಮಹೇಶ್ವರ ಜಾತ್ರೆ ಸುಸಂಪನ್ನ

    ದಾವಣಗೆರೆ: ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದಲ್ಲಿ
    ಐತಿಹಾಸಿಕ ಶ್ರೀ ಉಮಾ ಮಹೇಶ್ವರ ಜಾತ್ರೆ ಬುಧವಾರ ಸಂಜೆ ಸುಸಂಪನ್ನಗೊಂಡಿತು. ಜಾತ್ರೆಯ ಎರಡು ದಿನದಂದು ನೆರೆಹೊರೆಯ ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
    ಗ್ರಾಮದಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್‌ಗಳು, ಸ್ವಾಗತ ಕಮಾನುಗಳು, ದೇವಸ್ಥಾನದ ಹೊರಗೆ ಹೂವಿನಲಂಕಾರದ ಆಕರ್ಷಣೆ ಮಾಡಲಾಗಿತ್ತು.
    ಸೋಮವಾರ ಸಂಜೆ ಶಿರಮಗೊಂಡನಹಳ್ಳಿಯ ಶ್ರೀ ಚನ್ನಬಸವೇಶ್ವರ ಸ್ವಾಮಿಯನ್ನು ಸ್ವಾಗತಿಸಿ, ಗ್ರಾಮದ ಶ್ರೀ ಬಸವೇಶ್ವರ,ಶ್ರೀ ಆಂಜನೇಯ ಸ್ವಾಮಿ ಮೂರ್ತಿಗಳನ್ನೂ ಪಲ್ಲಕ್ಕಿಯಲ್ಲಿರಿಸಿ, ಮಹೇಶ್ವರ ಸ್ವಾಮಿ ಗದ್ದುಗೆ ಸ್ಥಳದವರೆಗೆ ಮೆರವಣಿಗೆ ನಡೆಸಲಾಯಿತು.

    ಯುವಕರ ಉರುಳುಸೇವೆ
    ಮಂಗಳವಾರ ಬೆಳಗ್ಗೆ, ವಿರಾಮ ಮಂಟಪದ ಆವರಣದಿಂದ ಬಸವೇಶ್ವರ ದೇವಸ್ಥಾನ ಆವರಣದವರೆಗೆ ನೂರಾರು ಯುವಕರು, ಚಿಣ್ಣರು ಉರುಳುಸೇವೆ ಮಾಡಿದ್ದು ವಿಶೇಷವಾಗಿತ್ತು.
    ಶೈಕ್ಷಣಿಕ ಪ್ರಗತಿ, ಮದುವೆ, ಆರೋಗ್ಯ ಸಮಸ್ಯೆ ನಿವಾರಣೆ ಮತ್ತಿತರೆ ಹರಕೆ ಹೊತ್ತು, ಓಂ ನಮಃ ಶಿವಾಯ ಎಂಬ ಉದ್ಗಾರದೊಂದಿಗೆ ಸುಮಾರು ಅರ್ಧ ಮೈಲಿವರೆಗೆ ಉರುಳುಸೇವೆ ಮಾಡಿ ಭಕ್ತಿ ಮೆರೆದರು. ಇವರ ಹಾದಿಯುದ್ದಕ್ಕೂ ಹೆಣ್ಣುಮಕ್ಕಳು ಬಿಂದಿಗೆಗಳಿಂದ ಹೊತ್ತು ತಂದ ನೀರೆರೆದರು.
    ಹೊರವಲಯದ ಉಮಾಮಹೇಶ್ವರ ಸ್ವಾಮಿ ಗದ್ದುಗೆ ಸ್ಥಳವನ್ನು ನೆರಕೆ-ಬಟ್ಟೆಗಳಿಂದ ಸಿಂಗರಿಸಿ, ಉತ್ಸವಮೂರ್ತಿಗಳನ್ನು ಕೂರಿಸಲಾಗಿತ್ತು. ವಿವಿಧೆಡೆಯ ನೂರಾರು ಭಕ್ತರು ದೇವರ ದರ್ಶನ ಪಡೆದರು.
    ಉಮಾ ಮಹೇಶ್ವರ ಜಾತ್ರೆಗೆ ಶತಮಾನಕ್ಕೂ ಹಿಂದಿನ ಇತಿಹಾಸವಿದೆ. ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆಯಲ್ಲಿನ ಜಾತ್ರೆ ವೈಭವ ಕಂಡಿದ್ದ ಇಲ್ಲಿನ ಹಿರಿಯರೊಬ್ಬರು ಇಲ್ಲಿಯೂ ಜಾತ್ರೆ ಆರಂಭಿಸಿದ್ದರು ಎಂದು ಹೇಳಲಾಗುತ್ತದೆ.
    ಜಾತ್ರೆಯ ಎರಡು ದಿನದಂದೂ ಗದ್ದುಗೆ ಬಳಿ ಅನ್ನ-ಹಾಲು, ಬೆಲ್ಲ-ಬಾಳೆಹಣ್ಣಿನ ಪ್ರಸಾದ ನಡೆಯಿತು. ಬುಧವಾರ ಸಂಜೆ ಗದ್ದುಗೆ ಬಳಿಯ ಸ್ವಾಮಿಯನ್ನು ಗ್ರಾಮಕ್ಕೆ ಕಲಾ ತಂಡಗಳೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನ ಎದುರು ಆಯೋಜಿಸುವ ಪ್ರಸಾದದಲ್ಲಿ ಲಿಂಗ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
    ವರ್ಷಗಟ್ಟಲೆ ತಾಜಾ ಇರುವ ಪ್ರಸಾದ!
    ಪ್ರತಿ ವರ್ಷದ ಜಾತ್ರೆಯ ಕೊನೆಯ ದಿನದಂದು ಸ್ವಲ್ಪ ಪ್ರಸಾದವನ್ನು ಮಣ್ಣಿನ ಮಡಕೆಯಲ್ಲಿರಿಸಿ, ಸ್ವಾಮಿಯ ಗದ್ದುಗೆ ಸಮೀಪದ ಕಟ್ಟೆಯೊಳಗೆ ಮುಚ್ಚಿ ಇರಿಸಲಾಗುತ್ತದೆ. ಮುಂದಿನ ವರ್ಷದ ಜಾತ್ರೆಗೆ ಅದನ್ನು ತೆರೆದಾಗ ಅದು ಶುದ್ಧವಾಗಿರಲಿದೆ, ಕೊಳೆತ ಇತಿಹಾಸವಿಲ್ಲ! ಅದೇ ಪ್ರಸಾದವನ್ನೇ ಹೊಸ ಎಡೆಗೆ ಮಿಶ್ರಣ ಮಾಡಿ ಅಡುಗೆ ತಯಾರಿಸಲಾಗುತ್ತದೆ ಎನ್ನುತ್ತಾರೆ ದೇವಸ್ಥಾನದ ಕನ್ವೀನರ್ ಎ. ಹನುಮಂತಪ್ಪ.
    ಜಾತ್ರೆಗೂ ಮುನ್ನ ಗಂಗಾ ಪೂಜೆ ಮಾಡುವ ವಾಡಿಕೆ ಇದೆ. 30 ಅಡಿಯ ಪೂಜಾ ಬಾವಿಗಿಳಿವ ಜಂಗಮರೊಬ್ಬರು ಅದರಲ್ಲಿ ಇಳಿದು, ಕೆಳಭಾಗದ ಮಣ್ಣನ್ನು ತಂದು, ಗದ್ದುಗೆಯಲ್ಲಿ ಇರಿಸಿ ಚಾಲನೆ ನೀಡುತ್ತಾರೆ. ಕಡೇ ಗಳಿಗೆಯಲ್ಲಿ ಮೂಲ ಸ್ಥಳದಲ್ಲಿ ಇರಿಸಿ ಬರುತ್ತಾರೆ ಎಂದೂ ಹೇಳುತ್ತಾರೆ.
    ದಾನಿಗಳ ನೆರವು
    ಎರಡು ದಿನದಲ್ಲಿ 2 ಟನ್ ಬಾಳೆಹಣ್ಣು, ತಲಾ 1 ಟನ್ ಅಕ್ಕಿ ಹಾಗೂ ಬೆಲ್ಲ, 200 ಲೀ. ನಷ್ಟು ಹಾಲನ್ನು ಭಕ್ತರೇ ದಾನವಾಗಿ ನೀಡುತ್ತಾರೆ. ಕೆಲವರು ಮೀಸಲು ತುಪ್ಪವನ್ನೂ ಅರ್ಪಿಸುತ್ತಾರೆ. ಜಾತ್ರೆಗೆ ಸುಮಾರು 5 ಲಕ್ಷ ರೂ. ವೆಚ್ಚವಾಗಲಿದೆ.
    ಗ್ರಾಮದಲ್ಲಿ ಯಾರ ಮನೆಯಲ್ಲಿ ಕರು ಹಾಕಿದರೂ ಗಿಣ್ಣವನ್ನು ಗದ್ದುಗೆ ಬಳಿ ತಂದು ನೈವೇದ್ಯ ಮಾಡಿ ಇಲ್ಲಿಯೇ ಸೇವಿಸುವ ಸಂಪ್ರದಾಯವಿದೆ. ಪ್ರತಿ ಸೋಮವಾರವೂ ಹಣ್ಣು-ತೆಂಗಿನಕಾಯಿ ತಂದು ಪೂಜಿಸುವವರೂ ಇಲ್ಲಿಯೇ ಸೇವನೆ ಮಾಡುತ್ತಾರೆ, ಮನೆಗೆ ಏನನ್ನೂ ಒಯ್ಯುವುದಿಲ್ಲ ಎನ್ನುತ್ತಾರೆ ಸ್ಥಳೀಯರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts