More

    ಒಂದು ಲಕ್ಷ ಮತಗಳ ಅಂತರದಲ್ಲಿ ಶ್ರೇಯಸ್ ಗೆಲವು:ಅನುಪಮಾ ಮಹೇಶ್

    ಹಾಸನ: ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯಲ್ಲಿ ಪ್ರಚಾರ ಮಾಡಿರುವುದ್ದರಿಂದ ಹೊಳೆನರಸೀಪುರ ಕ್ಷೇತ್ರದಲ್ಲಿ 20 ಸಾವಿರ ಲೀಡ್ ಪಡೆಯುವ ಮೂಲಕ ಒಂದು ಲಕ್ಷ ಮತಗಳ ಅಂತರದಲ್ಲಿ ಪುತ್ರ ಶ್ರೇಯಸ್ ಗೆಲ್ಲುತ್ತಾನೆ ಎಂದು ತಾಯಿ ಅನುಪಮಾ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೇಯಸ್ ಕೇವಲ 1600 ಮತಗಳ ಅಂತರದಿಂದ ಸೋತಿದ್ದಾರೆ. ಇದು ನಮ್ಮ ಕುಟುಂಬಕ್ಕೆ 5ನೇ ಚುನಾವಣೆಯಾಗಿದ್ದು, ಜಿಲ್ಲೆಯ ಮತದಾರರು ಆಶೀರ್ವಾದ ಮಾಡಬೇಕು. ದಿ.ಜಿ.ಪುಟ್ಟಸ್ವಾಮಿಗೌಡ ಅವರು ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜಿಲ್ಲಾ ರಾಜಕಾರಣದಲ್ಲಿ ಜೆಡಿಎಸ್ ದೊಡ್ಡ ಕುಟುಂಬ ಎಂಬುದನ್ನು ನಾನು ಒಪ್ಪುವುದಿಲ್ಲ, ಅವರ ಮನೆಗೆ ದೊಡ್ಡ ಕುಟುಂಬ ಹೊರತು ನಮಗಲ್ಲ. ಹಾಗೆ ನೋಡಿದರೆ ನಮ್ಮದೂ ದೊಡ್ಡ ಕುಟುಂಬ, ಅದಕ್ಕಿಂತ ದೊಡ್ಡದು ಕಾಂಗ್ರೆಸ್ ಪಕ್ಷ. ನಮಗೆ ಯಾರೂ ಬೆದರಿಕೆ ಹಾಕಿಲ್ಲ. ಆ ತಾಕತ್ತು ಅವರಿಗೆ ಇಲ್ಲ ಎಂದು ಜೆಡಿಎಸ್‌ಗೆ ತಿರುಗೇಟು ನೀಡಿದರು.
    ಮಗನನ್ನು ಚುನಾವಣೆಗೆ ನಿಲ್ಲಿಸಿ ತಾಯಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಜಿಲ್ಲೆಯ ಎಲ್ಲಾ ಕಡೆ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಸಾಕಷ್ಟು ಸೇವಾ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪರ ಕೆಲಸ ಮಾಡುತ್ತಿವೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಕೈ ಹಿಡಿಯುತ್ತವೆ. ಪುಟ್ಟಸ್ವಾಮಿಗೌಡರ ಕುಟುಂಬಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಕೋರುತ್ತೇವೆ ಎಂದರು.
    ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಕೆ.ಜವರೇಗೌಡ ಅವರು ಮಾತನಾಡಿ, ಹಾಸನ ಲೋಕಸಭೆ ಕ್ಷೇತ್ರ ಎರಡು ರಾಜಕೀಯ ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಶ್ರೇಯಸ್ ಪಟೇಲ್ ಸೌಮ್ಯ ಸ್ವಭಾವದ ಯುವಕನಾಗಿದ್ದು ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
    ಹಾಸನ ವಿಧಾನಸಭೆ ಕ್ಷೇತ್ರದಲ್ಲಿ 20 ಸಾವಿರ ಲೀಡ್ ಬರುವುದು ಖಚಿತ. ಬೇಲೂರು, ಸಕಲೇಶಪುರ ತಾಲ್ಲೂಕಿನಲ್ಲಿಯೂ ನಮ್ಮ ಅಭ್ಯರ್ಥಿ ಹೆಚ್ಚು ಮತ ಪಡೆಯುತ್ತಾರೆ. ಚುನಾವಣಾ ಕಣದಲ್ಲಿ ಯೋಗ್ಯ ಮತ್ತು ಅಯೋಗ್ಯ ಯಾರು ಎಂಬುದನ್ನು ಮತದಾರರು ತೀರ್ಮಾನಿಸಿದ್ದಾರೆ. ಸಮಾಜ ಭಾರೀ ಸೂಕ್ಷ್ಮವಾಗಿದ್ದು, ರಾಜಕಾರಣಿಗಳ ಯೋಗ್ಯತೆಯನ್ನು ಅಳೆದು ತೂಗುತ್ತದೆ. ಈ ಚುನಾವಣೆ ಯೋಗ್ಯತೆಯನ್ನು ಆಧರಿಸಿದೆ ಎಂದರು.
    ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳಾದ ಬನವಾಸೆ ರಂಗಸ್ವಾಮಿ, ಮುರುಳಿ ಮೋಹನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts