More

    ಒಂದು ಡೆಸ್ಕ್​ಗೆ ಒಬ್ಬನೇ ವಿದ್ಯಾರ್ಥಿ

    ಹಾವೇರಿ: ಜೂ. 25ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ನಕಲುಮುಕ್ತವಾಗಿ ಮಾಡಲು ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶ ಮಾಡಿಕೊಡದೆ ನಡೆಸುವ ಜೊತೆಗೆ ಕರೊನಾ ವೈರಸ್ ಹರಡದಂತೆ ತಡೆಯಲು ಶಿಸ್ತುಬದ್ಧವಾಗಿ ಪರೀಕ್ಷೆಗಳನ್ನು ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

    ಜಿಲ್ಲೆಯಲ್ಲಿ ಒಟ್ಟು 75 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 21,789 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 75ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು 908 ಕೊಠಡಿಗಳು ಅಗತ್ಯವಿದೆ. ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕೊಠಡಿಗಳ ಜೊತೆಗೆ 120 ಹೆಚ್ಚುವರಿ ಕೊಠಡಿಗಳನ್ನು ಗುರುತಿಸಲಾಗಿದೆ. ಅಲ್ಲದೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬಂದವರು, ವಸತಿ ನಿಲಯಗಳಲ್ಲಿದ್ದವರು ಇಚ್ಛಿಸಿದಲ್ಲಿ ಅವರ ವಾಸ್ತವ್ಯ ಸ್ಥಳದ ಸಮೀಪದ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶವಿದೆ. ಅಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 29ರವರೆಗೆ ಅವಕಾಶವಿದೆ. ಅಂಥ ವಿದ್ಯಾರ್ಥಿಗಳ ಸಂಖ್ಯೆ ಗಮನಿಸಿ ಕೊಠಡಿಗಳ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.

    ಈ ಮೊದಲು ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳ ವ್ಯವಸ್ಥೆಯ ಮೇಲೆ ಒಂದು ಡೆಸ್ಕ್​ಗೆ ಒಬ್ಬ ಇಲ್ಲವೇ ಇಬ್ಬರು ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪರೀಕ್ಷೆ ಬರೆಸಲು ಹಾಗೂ ಒಂದು ಕೊಠಡಿಗೆ 24ರಂತೆ ವಿದ್ಯಾರ್ಥಿಗಳನ್ನು ಕೂಡ್ರಿಸಲು ನಿರ್ಧರಿಸಲಾಗಿತ್ತು. ಆದರೆ, ಕರೊನಾ ತಡೆಗಟ್ಟಲು ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಡೆಸ್ಕ್​ಗೆ ಒಬ್ಬ ವಿದ್ಯಾರ್ಥಿಯನ್ನು ಕುಳ್ಳರಿಸಿ,ಒಂದು ಕೊಠಡಿಯಲ್ಲಿ ಗರಿಷ್ಠ 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ಪರೀಕ್ಷಾ ಕೇಂದ್ರಗಳಿಗೆ ಬೇರೆ ಶಾಲೆಗಳಿಂದ ಡೆಸ್ಕ್​ಗಳನ್ನು ತರಿಸಲಾಗುವುದು. ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಮಾಸ್ಕ್ ವಿತರಿಸಲಾಗುವುದು. ಅದಕ್ಕಾಗಿ ಕೆಲ ದಾನಿಗಳು ಈಗಾಗಲೇ 15 ಸಾವಿರಕ್ಕೂ ಅಧಿಕ ಮಾಸ್ಕ್​ಗಳನ್ನು ನೀಡಿದ್ದಾರೆ. ಇನ್ನು ಕೆಲವರು ಕೊಡಲು ಮುಂದೆ ಬಂದಿದ್ದಾರೆ. ಸರ್ಕಾರದಿಂದಲೂ ಮಾಸ್ಕ್ ಪೂರೈಕೆಯಾಗಲಿವೆ. ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ಅವರು ‘ವಿಜಯವಾಣಿ’ಗೆ ತಿಳಿಸಿದರು.

    ಈಗಾಗಲೇ ಮಾರ್ಚ್ ಮೊದಲ ವಾರದಲ್ಲಿಯೇ ಪರೀಕ್ಷೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಎಲ್ಲ ಅಧಿಕಾರಿಗಳಿಗೆ ಶಿಸ್ತುಬದ್ಧವಾಗಿ, ಪಾರದರ್ಶಕವಾಗಿ, ಗುಣಾತ್ಮಕವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರು ಈಗಾಗಲೇ ನೀಡಿರುವ ಮಾರ್ಗಸೂಚಿಗಳನ್ನು ಎಲ್ಲೆಡೆ ತಲುಪಿಸಲಾಗಿದೆ. ಈ ಬಾರಿಯ ಪರೀಕ್ಷೆಯು ಅತ್ಯಂತ ನಿಗಾದಲ್ಲಿ ನಡೆಯಬೇಕಿರುವುದರಿಂದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಯಾವುದೇ ಗೊಂದಲ, ಅಕ್ರಮ, ಅವಘಡಗಳಿಗೆ ಅವಕಾಶ ಮಾಡಿಕೊಡದಂತೆ ಸೂಚಿಸಲಾಗಿದೆ. ಕರೊನಾ ಭೀತಿಯಿರುವ ಈ ಸಮಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಮೂಲಸೌಕರ್ಯ, ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕರೊನಾ ಹರಡದಂತೆ ತಡೆಯಲು ಪ್ರತಿ ಕೇಂದ್ರಗಳಲ್ಲಿಯೂ ನೀರು, ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ.

    ಪ್ರಸ್ತುತ ವಾಸಸ್ಥಾನ ಸಮೀಪದಲ್ಲೇ ಪರೀಕ್ಷೆ ಬರೆಯಲು ಅವಕಾಶ

    ಜಿಲ್ಲೆ ಸೇರಿ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ವಸತಿ ಶಾಲೆ, ವಸತಿ ನಿಲಯಗಳಲ್ಲಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮರಳಿ ಊರಿಗೆ ಹೋಗಿದ್ದಾರೆ. ಅಲ್ಲದೆ, ಕೆಲ ವಸತಿ ಶಾಲೆ, ವಸತಿ ನಿಲಯಗಳನ್ನು ಈಗ ಕ್ವಾರಂಟೈನ್ ಕೇಂದ್ರಗಳನ್ನಾಗಿಸಿಕೊಳ್ಳಲಾಗಿದೆ. ಹೀಗಾಗಿ, ಅಲ್ಲಿನ ವಿದ್ಯಾರ್ಥಿಗಳಿಗೆ ಅವರು ವಾಸವಿರುವ ಸ್ಥಳದ ಸಮೀಪದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೆಲ ವಿದ್ಯಾರ್ಥಿಗಳು ಜಿಲ್ಲೆಯವರೇ ಆದರೆ ಕೆಲವರು ಹೊರ ಜಿಲ್ಲೆಯವರಿದ್ದಾರೆ. ಇನ್ನು ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ವಿವಿಧೆಡೆ ಉದ್ಯೋಗ ಅರಸಿ ನೆಲೆಯೂರಿದ್ದರು. ಅಂತಹವರ ಮಕ್ಕಳು ಅಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿದ್ದರು. ಈಗ ಅವರು ತಮ್ಮ ಸ್ವಂತ ಗ್ರಾಮಕ್ಕೆ ಬಂದಿದ್ದು, ಅವರು ಸಹ ಸದ್ಯ ವಾಸವಿರುವ ಸ್ಥಳದ ಸಮೀಪದ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು. ಅವರ ಸಂಖ್ಯೆಯನ್ನಾಧರಿಸಿ ಅಂತಿಮವಾಗಿ ಜೂನ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸ್ಪಷ್ಟವಾದ ಅಂಕಿ-ಅಂಶ ಲಭಿಸಲಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

    ಹೆಚ್ಚುವರಿ ಪರೀಕ್ಷಾ ಕೊಠಡಿಗಳನ್ನು ಗುರುತಿಸಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಒಟ್ಟು ಕೊಠಡಿಗಳ ಪೈಕಿ 892 ಕೊಠಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಎರಡು ಸೂಕ್ಷ್ಮ ಹಾಗೂ 73 ಸಾಮಾನ್ಯ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ 120 ಕೊಠಡಿಗಳನ್ನು ಗುರುತಿಸಲಾಗಿದ್ದು, ಅವು ಸಾಲದೇ ಇದ್ದಲ್ಲಿ 13 ಪರೀಕ್ಷಾ ಕೇಂದ್ರಗಳ ಸಮೀಪದ ಪ್ರಾಥಮಿಕ, ಪಿಯು ಕಾಲೇಜ್​ಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಭೀತಿಯಿಲ್ಲದೆ ಪರೀಕ್ಷೆ ಬರೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪರೀಕ್ಷಾ ಅವಧಿ ಮುಂದೂಡಿದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ವಿಷಯಗಳನ್ನು ಮನನ ಮಾಡಿಸುವ ಕಾರ್ಯವನ್ನು ಮಾಡಲಾಗಿದೆ.
    | ಅಂದಾನೆಪ್ಪ ವಡಗೇರಿ, ಡಿಡಿಪಿಐ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts