More

    ಒಂಟಿ ಮಹಿಳೆಗೆ ದೇವಸ್ಥಾನದ ಅಂಗಳವೇ ಆಸರೆ!

    ಧಾರವಾಡ: ಕಳೆದ ಆಗಸ್ಟ್​ನಲ್ಲಿ ಸುರಿದ ಮಳೆ ಅನೇಕರ ಬದುಕನ್ನು ಬೀದಿಗೆ ತಂದಿದ್ದು, ಅಂದಿನ ನೋವಿನಿಂದ ಇನ್ನೂ ಹೊರಬರಲು ಆಗಿಲ್ಲ. ಮನೆ ಬಿದ್ದ ಬಳಿಕ ಸರ್ಕಾರ ಒಂದಿಷ್ಟು ಹಾನಿಯ ಲೆಕ್ಕಾಚಾರ ಹಾಕಿ ಪರಿಹಾರ ಕೊಟ್ಟಿದೆಯಾದರೂ, ಅದರಿಂದ ಮನೆ ಕಳೆದುಕೊಂಡ ಅದೆಷ್ಟೊ ಜನರಿಗೆ ಹೊಸ ಮನೆ ಕಟ್ಟಿಕೊಳ್ಳುವುದಕ್ಕೆ ಆಗಿಯೇ ಇಲ್ಲ. ಅಂತಹ ಓರ್ವ ನಿರ್ಗತಿಕ ಮಹಿಳೆ ಈಗ ಮನೆ ಕಟ್ಟಲೂ ಆಗದೇ, ಬಾಡಿಗೆ ಮನೆಯೂ ಸಿಗದೇ ದೇವಸ್ಥಾನದ ಅಂಗಳವನ್ನೇ ತನ್ನ ಆಸರೆಯನ್ನಾಗಿ ಮಾಡಿಕೊಂಡಿದ್ದಾಳೆ.

    ಇದು ನಡೆದಿರುವುದು ತಾಲೂಕಿನ ಮಾರಡಗಿ ಗ್ರಾಮದಲ್ಲಿ. ಸುಮಾರು 50 ವರ್ಷದ ನೀಲಮ್ಮ ಕಲಕೇರಿ ಎಂಬ ಒಂಟಿ ಮಹಿಳೆಯ ಬದುಕು ಈಗ ಬೀದಿಗೆ ಬಂದಂತಾಗಿದೆ. ಕಳೆದ ಆಗಸ್ಟ್ ನಲ್ಲಿ ಸುರಿದ ಮಳೆಯಲ್ಲಿ ನೀಲಮ್ಮನ ಮನೆಯ ಗೋಡೆಗಳು, ಪುನಃ ದುರಸ್ತಿ ಮಾಡುವುದಕ್ಕೂ ಆಗದಷ್ಟು ಬಿದ್ದು ಹೋಗಿವೆ. ಹೊಸದಾಗಿ ಕಟ್ಟಲು ಆರ್ಥಿಕವಾಗಿ ಸಬಲರಲ್ಲದ ನೀಲಮ್ಮಗೆ ದಿಕ್ಕು ತೋಚದಿದ್ದಾಗ ಊರಲ್ಲಿಯೇ ಒಬ್ಬರು ಖಾಲಿ ಇದ್ದ ತಮ್ಮ ಮನೆಯನ್ನು ಬಾಡಿಗೆಗೆ ನೀಡಿದ್ದರು. ಆದರೆ, ಈಗ ಅವರು ಮನೆ ತಮಗೆ ಬೇಕಿದೆ, ಬೇರೆ ಕಡೆ ನೋಡಿಕೊ ಎಂದು ಹೇಳಿದ್ದರಿಂದ ನೀಲಮ್ಮ ಶನಿವಾರವೇ ಮನೆ ಖಾಲಿ ಮಾಡಿದ್ದಾಳೆ. ಸದ್ಯ ನೀಲಮ್ಮ ಊರಲ್ಲಿನ ಆಂಜನೇಯ ದೇವಸ್ಥಾನದ ಪ್ರಾಂಗಣದಲ್ಲೇ ಹಗಲು-ರಾತ್ರಿ ಕಳೆಯುವಂತಾಗಿದೆ.

    ನೀಲಮ್ಮನ ಮನೆ ಹಾನಿ ಪರಿಶೀಲಿಸಿದ್ದ ಅಧಿಕಾರಿಗಳು ಸಲ್ಲಿಸಿದ ವರದಿಯನ್ವಯ 50 ಸಾವಿರ ರೂ. ಪರಿಹಾರ ಸಿಕ್ಕಿದೆ. ಮನೆ ದುರಸ್ತಿಯಾಗಲೀ, ಹೊಸದಾಗಿ ನಿರ್ವಣವಾಗಲೀ ಆಕೆಯಿಂದ ಸಾಧ್ಯವಾಗಿಲ್ಲ. ಸರ್ಕಾರ ಕೊಟ್ಟಿರುವ ಐವತ್ತು ಸಾವಿರ ಮೊತ್ತದಲ್ಲೇ ಬಾಡಿಗೆಯನ್ನೂ ಕೊಡುತ್ತ ಜೀವನ ಸಾಗಿಸುತ್ತಿದ್ದಳು.

    ಇನ್ನೊಂದು ಬಾಡಿಗೆ ಮನೆಗಾಗಿ ಶನಿವಾರ ಸಂಜೆಯವರೆಗೂ ಊರೆಲ್ಲ ಸುತ್ತಾಡಿದರೂ ಸಿಗಲಿಲ್ಲ. ಹೀಗಾಗಿ ಆಂಜನೇಯ ದೇವಸ್ಥಾನದ ಪ್ರಾಂಗಣದಲ್ಲಿಯೇ ರಾತ್ರಿ ಕಳೆದಿದ್ದಾಳೆ. ಭಾನುವಾರ ಬೆಳಗ್ಗೆ ಅಲ್ಲೇ 3 ಕಲ್ಲು ಇಟ್ಟು ಒಲೆ ಮಾಡಿ, ಜೋಳದ ದಂಟನ್ನೇ ಉರುವಲನ್ನಾಗಿಸಿ ಸ್ವಲ್ಪ ಅಡುಗೆ ಮಾಡಿಕೊಂಡಿದ್ದಾಳೆ.

    ಸರ್ಕಾರದ ಪರಿಹಾರಕ್ಕೆ ನಿಯಮಾವಳಿ ಇರುತ್ತದೆ, ಮಾನವೀಯತೆ ಇರುವುದಿಲ್ಲ ಎಂಬುದಕ್ಕೆ ನೀಲಮ್ಮನ ಪ್ರಕರಣ ಸಾಕ್ಷಿಯಾಗಿದೆ. ನೀಲಮ್ಮ ಪತಿಯಿಂದ ಪರಿತ್ಯಕ್ತಳಾಗಿ 25 ವರ್ಷದಷ್ಟು ಹಿಂದೆಯೇ ತವರೂರು ಸೇರಿದವಳು. ಸ್ವಂತ ಜಮೀನು ಇಲ್ಲ. ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತ ಬಂದವಳು. ಇತ್ತೀಚೆಗೆ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯೂ ಕಾಡುತ್ತಿದ್ದು ಕೂಲಿ ಮಾಡಲೂ ಸಾಧ್ಯವಾಗುತ್ತಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲಿರುವ ನೀಲಮ್ಮಗೆ ಈಗ ಊರ ಆಂಜನೇಯನ ದೇವಸ್ಥಾನದ ಪ್ರಾಂಗಣವೇ ಆಸರೆಯಾಗಿದೆ. ಸರ್ಕಾರ ಮಾನವೀಯತೆ ಆಧಾರದಲ್ಲಿ ನೀಲಮ್ಮನ ರಕ್ಷಣೆಗೆ ಬರಬೇಕಿದೆ.

    ಸರ್ಕಾರ ಕೊಟ್ಟ ಪರಿಹಾರದಲ್ಲಿ ಮನೆ ಕಟ್ಟಿಕೊಳ್ಳಲು ಆಗುವುದಿಲ್ಲ. ಬಿದ್ದ ಮನೆಯ ಅವಶೇಷ ತೆರವು ಮಾಡುವುದಕ್ಕೆ ಸಾಕಷ್ಟು ಖರ್ಚು ಆಗುತ್ತದೆ. ಊರಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ. ಬೇರೆ ದಾರಿ ಕಾಣುತ್ತಿಲ್ಲ. ನಾನು ಬದುಕಲಿ ಅಥವಾ ಸಾಯಲಿ, ಏನಾದರೂ ಆಗಲಿ ಎಂದುಕೊಂಡು ಆಂಜನೇಯ ದೇವಾಲಯ ಪ್ರಾಂಗಣಕ್ಕೆ ಬಂದಿದ್ದೇನೆ.
    | ನೀಲಮ್ಮ ಕಲಕೇರಿ ನೊಂದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts