More

    ಐಪಿಎಂ ಆವರಣದಲ್ಲಿ ರೆಸಾರ್ಟ್

    ದಾಂಡೇಲಿ: ಇಂಡಿಯನ್ ಪ್ಲೈವುಡ್ ಮ್ಯಾನುಫ್ಯಾಕ್ಚರ್ಸ್ (ಐಪಿಎಂ) ಕಾರ್ಖಾನೆ ಇರುವುದು ದಾಂಡೇಲಿ ತಾಲೂಕಿನ (ಈ ಮೊದಲು ಜೊಯಿಡಾ ತಾಲೂಕು) ದಾಂಡೇಲಿ ಹೋಬಳಿ ವ್ಯಾಪ್ತಿಯ ಕುಂಬಾರಕೊಪ್ಪ ಗ್ರಾಮದಲ್ಲಿ. ಈ ಜಾಗೆಯು ದಾಂಡೇಲಿ ಪಟ್ಟಣಕ್ಕೆ ಹೊಂದಿಕೊಂಡೇ ಇದೆ. ಅಲ್ಲದೆ, ಕಾಳಿ ನದಿ ಪಕ್ಕದಲ್ಲೇ ಇದೆ. ಹೀಗಾಗಿ, ಈ ಜಾಗೆಯ ಕೆಲ ಭಾಗದಲ್ಲಿ ರೆಸಾರ್ಟ್ ಚಟುವಟಿಕೆಗಳು ಅನೇಕ ವರ್ಷಗಳಿಂದ ನಡೆಯತೊಡಗಿವೆ.

    ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರ್ಖಾನೆ 1995ರಲ್ಲಿ ಬಂದ್ ಆಯಿತು. ಉತ್ಪಾದನೆ ಸ್ಥಗಿತಗೊಂಡ ನಂತರ ಈ ಜಾಗೆ ಪಾಳು ಬೀಳತೊಡಗಿತು. ಈ ಹಿನ್ನೆಲೆಯಲ್ಲಿ, ಕಳೆದ 10-12 ವರ್ಷಗಳಿಂದ ಕಾರ್ಖಾನೆಯ ಆವರಣದಲ್ಲಿ ಕಾರ್ಖಾನೆಯ ಮಾಲೀಕರ ಗೆಸ್ಟ್ ಹೌಸ್, ವಸತಿ ಕಾಂಪ್ಲೆಕ್ಸ್​ಗಳು ಹಾಗೂ ಕೆಲ ಭವ್ಯ ಮನೆಗಳನ್ನು ರೆಸಾರ್ಟ್​ಗಳಿಗಾಗಿ ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. 6 ಕಡೆಗಳಲ್ಲಿ ರೆಸಾರ್ಟ್​ಗೆ ಇಲ್ಲಿ ಬಾಡಿಗೆ ಕೊಡಲಾಗಿದೆ ಎನ್ನಲಾಗಿದೆ. ಸಾಕಷ್ಟು ಪ್ರವಾಸಿಗರು ಆಗಮಿಸಿ ಈ ರಿಸಾರ್ಟ್​ಗಳಲ್ಲಿ ಉಳಿದುಕೊಂಡು ಹೋಗುತ್ತಿದ್ದಾರೆ.

    ಐಪಿಎಂ ಕಾರ್ಖಾನೆ ಆವರಣದಲ್ಲಿ ರೆಸಾರ್ಟ್ ಚಟುವಟಿಕೆ ನಡೆಸುವುದು ಕಾನೂನುಬಾಹಿರ ಎಂದು ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಜೊಯಿಡಾ ತಹಸೀಲ್ದಾರ್ ಕೂಡ ನೋಟಿಸ್ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ರೆಸಾರ್ಟ್ ಮಾಲೀಕರನ್ನು ಕರೆದು, ಕಾರ್ಖಾನೆಯ ಜಾಗೆ ಅರಣ್ಯ ಇಲಾಖೆಗೆ ಕಾನೂನು ಬದ್ಧವಾಗಿ ಹಸ್ತಾಂತರವಾಗಲಿದ್ದು, ರೆಸಾರ್ಟ್​ಗಾಗಿ ಯಾವುದೇ ಅನಾವಶ್ಯಕ ವೆಚ್ಚ ಮಾಡದೆ ಶೀಘ್ರದಲ್ಲಿ ರಿಸಾರ್ಟ್​ಗಳನ್ನು ತೆರವು ಮಾಡುವ ಪರಿಸ್ಥಿತಿ ಬಂದೊದಗಬಹುದೆಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

    ಮುಂದೇನಾಗಬಹುದು?: ಕಾರ್ಖಾನೆಗೆ ಗುತ್ತಿಗೆ ನೀಡಲಾಗಿರುವ ಒಟ್ಟು ಜಾಗ 76 ಎಕರೆ ಜಾಗದ ಒಡೆತನ ಯಾರದ್ದಾಗಲಿದೆ ಎಂಬುದು ಶೀಘ್ರವೇ ನಿರ್ಣಯವಾಗುವ ಸಾಧ್ಯತೆಗಳಿವೆ. ಕಾರ್ಖಾನೆಯ ಪರವಾದರೆ, ಅವರು ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಈಗಿರುವ ಸ್ಥಿತಿಯಲ್ಲೇ ರಿಸಾರ್ಟ್​ಗಳಿಗೆ ಬಾಡಿಗೆ ಕೊಡುವುದನ್ನು ಮುಂದುವರಿಸಬಹುದಾಗಿದೆ. ಇನ್ನು ಮೂಲ ಮಾಲೀಕತ್ವ ಇರುವ ಅರಣ್ಯ ಇಲಾಖೆಯ ತೆಕ್ಕೆಗೆ ಈ ಜಾಗ ಮರಳಿದರೆ ಆಗ ಏನಾಗಬಹುದು? ಈ ಜಾಗವನ್ನು ರಿಸಾರ್ಟ್ ಮಾಡಿಕೊಳ್ಳಲು ಖಾಸಗಿಯವರಿಗೆ ಮಾರಬಹುದು. ಆದರೆ, ಇದಕ್ಕೆ ಕಾನೂನಿನಲ್ಲಿ ಸಾಕಷ್ಟು ಇತಿಮಿತಿಗಳಿವೆ. ಇನ್ನು, ಇದನ್ನು ನರ್ಸರಿಯಾಗಿ ಅಭಿವೃದ್ಧಿಪಡಿಸಬಹುದು ಇಲ್ಲವೇ ನಗರಸಭೆಗೆ ಹಸ್ತಾಂತರಿ ಸಬಹುದು. ಆಗ, ನಗರಸಭೆಯು ಏನು ಮಾಡಲು ಸಾಧ್ಯ? ಇಷ್ಟು ದೊಡ್ಡ ಜಾಗೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಪೂರಕ ಕ್ರಮ ಕೈಗೊಳ್ಳಬೇಕಾದರೆ ಅದಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯ. ನಗರಸಭೆಗೆ ಇರುವ ಸಂಪನ್ಮೂಲದಲ್ಲಿ ಇಂತಹ ಬೃಹತ್ ಯೋಜನೆ ಜಾರಿ ಕಷ್ಟಸಾಧ್ಯ. ಅಕ್ಕಪಕ್ಕದಲೇ ಜನವಸತಿ ಪ್ರದೇಶ ಇರುವುದರಿಂದ ಈ ಜಾಗವನ್ನು ವಸತಿಪ್ರದೇಶವಾಗಿ ಅಭಿವೃದ್ಧಿಪಡಿಸಲು ಒಂದಿಷ್ಟು ಅವಕಾಶಗಳಿವೆ.

    ಮತ್ತೆ ಕಾರ್ಖಾನೆ ಆರಂಭವಾಗಲಿ: ಈಗ ಬಂದ್ ಆಗಿರುವ ಪ್ಲೈವುಡ್ ಕಾರ್ಖಾನೆಯು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಬೇಕು. ಈ ಮೂಲಕ ಸಾವಿರಾರು ಜನರಿಗೆ ಮಂದಿಗೆ ಉದ್ಯೋಗ ಲಭಿಸುವಂತಾಗಬೇಕು ಎಂಬುದು ದಾಂಡೇಲಿ ಜನರ ಬಯಕೆಯಾಗಿದೆ. ಇದಾಗದಿದ್ದರೆ, ಸರ್ಕಾರವೇ ಈ ಜಾಗೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಪ್ರವಾಸೋದ್ಯಮಕ್ಕೆ ನೆರವಾಗುವಂತಹ ಸೂಕ್ತ ಯೋಜನೆ ಜಾರಿಗೊಳಿಸಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts