More

    ಐದು ಎಕ್ರೆ ಗದ್ದೆಯಲ್ಲಿ ಧಾನ್ಯ ಬೆಳೆದ ರೈತರು

    ಕೊಕ್ಕರ್ಣೆ: ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಮತ್ತು ಚಾರ ಗ್ರಾಮದ ಹಂದಿಕಲ್ಲು ಭಾಗಗಳಲ್ಲಿ ಭತ್ತದ ಕಟಾವಿನ ನಂತರ ಗದ್ದೆಗಳಲ್ಲಿ ಉಪಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿ ಕೃಷಿಕ ಬಿ.ಎಂ.ರವೀಂದ್ರನಾಥ್ ಶೆಟ್ಟಿ ಮತ್ತು ಸಮೀಪದ ರೈತರು ಮಾದರಿಯಾಗಿದ್ದಾರೆ. ಈ ಹಿಂದೆ ವರ್ಷದಲ್ಲಿ ಒಂದು ಬೆಳೆ ಬೆಳೆದು ಬಳಿಕ ಕೂಲಿ ಆಳು ಕೊರತೆ, ನೀರಿತ ಸಮಸ್ಯೆ, ಕಾಡುಪ್ರಾಣಿ ಹಾವಳಿ ಕಾರಣದಿಂದ ಭೂಮಿಯನ್ನು ಹಾಗೆಯೇ ಬಿಡಲಾಗುತ್ತಿತ್ತು. ಆದರೆ ಈ ಬಾರಿ ರವೀಂದ್ರನಾಥ್ ಶೆಟ್ಟಿ ತಮ್ಮ 5 ಎಕರೆಗೂ ಅಧಿಕ ಭೂಮಿಯಲ್ಲಿ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ನೆಲಗಡಲೆ, ಕಬ್ಬು ಹಾಗೂ ವಿವಿಧ ತರಕಾರಿ ಬೆಳೆ ಬಿತ್ತನೆ ಪ್ರಾರಂಭಿಸಿದ್ದಾರೆ. ಈಗ ಬೀಜಗಳು ಮೊಳಕೆಯೊಡೆದು ಕಾಳು ಕಟ್ಟಿ ಮುಂದಿನ 2 ತಿಂಗಳಲ್ಲಿ ಕಟಾವಿಗೆ ಬರಲಿದೆ. ಈ ಬಾರಿ ಉತ್ತಮ ಮಳೆಯಿಂದಾಗಿ ನೀರಿನ ಅಭಾವ ಕಾಣಿಸದು ಎನ್ನುವುದು ಕೃಷಿಕರ ಮಾತು. ಪ್ರಗತಿಪರ ಕೃಷಿಕರಾದ ಬಿ.ಎಂ.ರವೀಂದ್ರನಾಥ್ ಶೆಟ್ಟಿ ಹಲವು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕೃಷಿಯಲ್ಲಿ ಆಸಕ್ತಿ ಹೆಚ್ಚಿರುವುದರಿಂದ ತನ್ನ ಊರು ಹಂದಿಕಲ್ಲು ಹಾಗೂ ಪೆರಂಪಳ್ಳಿಯಲ್ಲಿ ವರ್ಷಪೂರ್ತಿ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಹಳ್ಳಿಗಳಿಂದ ಕೃಷಿ ಕೆಲಸಕ್ಕೆ ಕೂಲಿಗಳನ್ನು ಪೆರಂಪಳ್ಳಿಗೆ ಕರೆದುಕೊಂಡು ಹೋಗಿ ಕೃಷಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಟ್ರಾೃಕ್ಟರ್ ಖರೀದಿಸಿದ್ದು, ಯಾಂತ್ರೀಕೃತ ಬೇಸಾಯಕ್ಕೆ ಮುಂದಾಗಿದ್ದಾರೆ.

    ಕೃಷಿಯತ್ತ ಜನರ ಒಲವು ಕಡಿಮೆಯಾಗುತ್ತಿದೆ. ಹಡೀಲು ಭೂಮಿ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲಾಧಿಕಾರಿ ಕೃಷಿ ಭೂಮಿ ಪಾಳು ಬಿಟ್ಟವರಿಗೆ ನೋಟಿಸ್ ಜಾರಿಗೊಳಿಸಿರುವುದು ಒಳ್ಳೆಯ ಸಂಗತಿ. ಜನರು ಕೃಷಿಯತ್ತ ಚಿತ್ತ ಹರಿಸಬೇಕಾಗಿದೆ. ಯಾಂತ್ರೀಕೃತ ಬದುಕಿನಿಂದ ದೂರವಾಗಿ ಕೃಷಿ, ಬೇಸಾಯ, ಹೈನುಗಾರಿಕೆಯಂತಹ ಉದ್ಯೋಗಳತ್ತ ಮನಸ್ಸು ಮಾಡಬೇಕು. ಕೃಷಿಯಿಂದ ಆರ್ಥಿಕ ವೃದ್ಧಿ ಮಾತ್ರವಲ್ಲದೆ ಆರೋಗ್ಯ ವೃದ್ಧಿಯೂ ಆಗುತ್ತದೆ. ಯುವಜನತೆ ಕೃಷಿ ಕೆಲಸಕ್ಕೆ ಮುಂದಾಗಬೇಕು.
    -ಬಿ.ಎಂ.ರವೀಂದ್ರನಾಥ ಶೆಟ್ಟಿ, ಪ್ರಗತಿಪರ ಕೃಷಿಕ

    ಭೂಮಿಯನ್ನು ಹಡೀಲು ಬಿಡುವುದು ಭೂತಾಯಿಯನ್ನು ಬಂಜೆ ಮಾಡಿದಂತೆ. ನಮಗೆ ಅನ್ನ ಕೊಡುವ ಭೂಮಿ ತಾಯಿ ದೇವತೆ. ರೈತರು ಕೃಷಿ ಕೆಲಸಗಳನ್ನು ಕೈಬಿಡುತ್ತಿರುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಕೃಷಿ ಲಾಭದಾಯಕವಾಗಿದ್ದು, ತೊಡಗಿಸಿಕೊಂಡರೆ ಉತ್ತಮ ಪ್ರತಿಫಲ ದೊರಕುತ್ತದೆ.
    -ಸಾಧು ಶೆಟ್ಟಿ ಬಾವಿಗದ್ದೆ. ಚಾರ ಪ್ರಗತಿಪರ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts