More

    ಏಕರೂಪ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕಿಲ್ಲ ಧಕ್ಕೆ -ಹಿರಿಯ ವಕೀಲ ಲಕ್ಷ್ಮೀನಾರಾಯಣ ಎನ್. ಹೆಗಡೆ ಅಭಿಮತ

    ದಾವಣಗೆರೆ: ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಯಾರ ಧಾರ್ಮಿಕ ಸ್ವಾತಂತ್ರ್ಯ ಹರಣ ಆಗದು. ಯಾವುದೇ ವೈವಿಧ್ಯತೆಗೂ ಧಕ್ಕೆಯಾಗದು ಎಂದು ಹೈಕೋರ್ಟ್‌ನ ಹಿರಿಯ ವಕೀಲ ಲಕ್ಷ್ಮೀನಾರಾಯಣ ಎನ್. ಹೆಗಡೆ ಹೇಳಿದರು.
    ಅಧಿವಕ್ತಾ ಪರಿಷತ್ ದಾವಣಗೆರೆ ವಿಭಾಗ, ಹರಿಹರ ತಾಲೂಕು ಘಟಕದ ಸಹಯೋಗದಲ್ಲಿ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಏಕರೂಪ ನಾಗರಿಕ ಸಂಹಿತೆ ಕುರಿತ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
    ಉದ್ದೇಶಿತ ಸಂಹಿತೆ ಅನುಷ್ಠಾನದಿಂದ ದೇಶಕ್ಕೆ ಆಘಾತವಾಗಲಿದೆ, ವೈವಿಧ್ಯತೆ ನಾಶವಾಗಲಿದೆ ಎಂಬ ಪುಕಾರು ಹಬ್ಬಿಸಲಾಗುತ್ತಿದೆ. ಅದೆಲ್ಲ ತಪ್ಪು ಕಲ್ಪನೆ. ಭಾರತ ದೇಶಕ್ಕೆ ತಕ್ಕಂತೆ ಸಂಹಿತೆ ಮಾರ್ಪಾಡಿಗೆ ಅವಕಾಶಗಳು ಹೆಚ್ಚಿವೆ ಎಂದರು.
    ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿ.ಆರ್.ಅಂಬೇಡ್ಕರ್ ಒಲವು ವ್ಯಕ್ತಪಡಿಸಿದ್ದರು. ಆದರೆ, ಆಗಿನ ಕಾಲಕ್ಕೆ ಗಲಭೆ ಇದ್ದುದರಿಂದ ಜನಾಭಿಪ್ರಾಯ ಪಡೆದೇ ಅನುಷ್ಠಾನಗೊಳಿಸುವ ಇರಾದೆ ಹೊಂದಿದ್ದರು ಎಂದು ಹೇಳಿದರು.
    ಜಾತಿ-ಮತ, ಧರ್ಮ, ಲಿಂಗ ಹಾಗೂ ಪ್ರಾದೇಶಿಕ ಆಧಾರದಡಿ ಈ ಕಾನೂನು ರಚನೆಯಾಗುತ್ತಿಲ್ಲ. ಸಾರ್ವಜನಿಕವಾಗಿ ಚರ್ಚೆಯಾದ ಆನಂತರವೇ ಸಂಹಿತೆಯಾಗಿ ರೂಪುಗೊಳ್ಳಬೇಕಿದೆ. ಇದು ನಿರ್ದಿಷ್ಟ ಮತ ಅಥವಾ ಜನಾಂಗಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.
    ಬಲಿಷ್ಠ ರಾಷ್ಟ್ರ ಕಟ್ಟಲು ಕಾನೂನಿನ ಅಂಶ ತಿಳಿಸಲು ಜನಜಾಗೃತಿ ಮೂಡಿಸಬೇಕಿದೆ. ಈ ದಿಸೆಯಲ್ಲಿ ದಾವಣಗೆರೆ ವಕೀಲರು ಕ್ರಾಂತಿ ಹಾಗೂ ವೈಚಾರಿಕ ಕಿಡಿ ಹೊತ್ತಿಸಬೇಕು ಎಂದು ಮನವಿ ಮಾಡಿದರು.
    ವಿವಿಧ ಸಮಾಜಗಳ ಕುರಿತಂತೆ ಪ್ರತ್ಯೇಕ ಕಾನೂನುಗಳಿವೆ. 1950 ರಿಂದ ಇದುವರೆಗೆ ಅನೇಕ ಕಾನೂನು ರಚನೆಯಾಗಿದ್ದು ಕಾಲ ಕಾಲಕ್ಕೆ ತಕ್ಕಂತೆ ಕೆಲವು ತಿದ್ದುಪಡಿಯಾಗಿವೆ. ಕೆಲವು ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕಾರಣಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
    ಆರ್.ಎಲ್. ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಸ್.ಯತೀಶ್ ಮಾತನಾಡಿ,ಸಮಾನ ನಾಗರಿಕ ಸಂಹಿತೆ ಜಾರಿಯಿಂದ ಆಗುವ ಒಳಿತೇನು ಎಂಬುದರ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದರು.
    ಕಾರ್ಯಕ್ರಮದಲ್ಲಿ ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷ ಎಲ್. ದಯಾನಂದ, ತಾಲೂಕು ಘಟಕದ ಅಧ್ಯಕ್ಷ ಡಿ.ಎನ್. ಬಸವರಾಜ್, ಹಿರಿಯ ವಕೀಲ ಮಂಜುನಾಥ ದೊಡ್ಡಮನಿ ಇದ್ದರು. ಜ್ಯೋತಿ ಪ್ರಾರ್ಥನೆ ಹಾಡಿದರೆ, ಎಸ್. ಶಿವಣ್ಣ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts