More

    ಏಕರೂಪ ನಾಗರಿಕ ಸಂಹಿತೆಯಿಂದ ಕಂದಕ ಒಪ್ಪಲಾಗದು -ಸಿದ್ದನಗೌಡ ಪಾಟೀಲ್ -ದಲಿತ ಮುಸ್ಲಿಂ ಮಹಿಳಾ ಸಮಾವೇಶ 

    ದಾವಣಗೆರೆ: ಏಕರೂಪ ನಾಗರಿಕ ಸಂಹಿತೆ ಎಂಬುದು ಬಿಜೆಪಿಯ ರಾಜಕೀಯ ಸಂಹಿತೆ ಹಾಗೂ ಬರುವ ಲೋಕಸಭಾ ಚುನಾವಣೆ ಗೆಲ್ಲುವ ಹುನ್ನಾರವಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಟೀಕಿಸಿದರು.
    ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಆಯೋಜಿಸಿದ್ದ ದಲಿತ-ಮುಸ್ಲಿಂ ಮಹಿಳಾ ಸಮಾವೇಶ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಯ ಸಾಧಕ-ಬಾಧಕಗಳ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಾಗರಿಕ ಸಂಹಿತೆ ದೇಶಕ್ಕೆ ಸೂಕ್ತವಲ್ಲ ಎಂದು 21ನೇ ಕಾನೂನು ಆಯೋಗವು 2018ರಲ್ಲೇ ಸ್ಪಷ್ಟಪಡಿಸಿ ವರದಿ ನೀಡಿದೆ. ಹಾಗಿದ್ದರೂ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಮುನ್ನೆಲೆಗೆ ತಂದಿದೆ ಎಂದು ದೂರಿದರು.
    ಕೇಂದ್ರ ಸರ್ಕಾರ ದೇಶದಲ್ಲಿ ಕೃಷಿ ಕಾನೂನು, ರಾಷ್ಟ್ರೀಯ ಶಿಕ್ಷಣ ನೀತಿ ಕಾಯ್ದೆ ಮೊದಲಾದ ಕಾನೂನು ಜಾರಿಗೆ ತರುವ ಸಂದರ್ಭದಲ್ಲಿ ದೇಶದ ಜನರ ಬಳಿ ಹಾಗೂ ಸಂಸತ್ತಿನಲ್ಲಿ ಚರ್ಚೆ ನಡೆಸಲಿಲ್ಲ. ಇದೀಗ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿ ಹೆಸರಲ್ಲಿ ಧಾರ್ಮಿಕ ಹಕ್ಕು ಹಾಗೂ ಸಮಾನತೆ ನಡುವೆ ಕಂದಕ ತರಲು ಹೊರಟಿದೆ. ಇದನ್ನು ನಾವು ಒಪ್ಪುವುದಿಲ್ಲ. ಕಾಯ್ದೆ ಜಾರಿಗೂ ಮುನ್ನ ಮಸೂದೆ ಕರಡನ್ನು ಹೊರತರಬೇಕು ಎಂದು ಆಗ್ರಹಿಸಿದರು.
    ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ಬಡವರ ಖಾತೆಗೆ 15 ಲಕ್ಷ ರೂ.ಹಣ ಹಾಕಲಿಲ್ಲ. ನಿರುದ್ಯೋಗ ನಿವಾರಿಸಲಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಿಲ್ಲ. ಬೇಟಿ ಬಚಾವೋ ಎಂಬುದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
    ಕರ್ನಾಟಕ ಜನಶಕ್ತಿ ರಾಜ್ಯ ಸಂಘಟಕಿ ಮಲ್ಲಿಗೆ ಸಿರಿಮನೆ ಮಾತನಾಡಿ, ಬಹಳಷ್ಟು ಜನ ಕಾಯ್ದೆ ಬಗ್ಗೆ ಏನೂ ತಿಳಿಯದೆ ಸರ್ಕಾರ ಒಳ್ಳೆಯದು ಮಾಡಬಹುದೆಂಬ ನಂಬಿಕೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆ ಜಾರಿಗೂ ಮುನ್ನ ದೇಶದ ಜನರು ಹಾಗೂ ಎಲ್ಲ ರಾಜ್ಯ ಸರ್ಕಾರಗಳ ಕಾಯ್ದೆ ಕರಡು ಮುಂದಿರಿಸಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
    ಏಕರೂಪ ನಾಗರಿಕ ಸಂಹಿತೆಗಿಂತ ಸಮಾನ ನಾಗರಿಕ ಸಂಹಿತೆಯೇ ದೇಶಕ್ಕೆ ಪರಿಹಾರವಾಗಿದೆ. ಆದರೆ ನಿತ್ಯದ ಬದುಕಿಗೆ ಸಂಬಂಧಿಸಿದ ವಿಷಯ ಯಾರಿಗೂ ಬೇಕಾಗಿಲ್ಲ. ದೇಶದಲ್ಲಿ ಧರ್ಮಗಳ ನಡುವೆ ಜಗಳ ಹಚ್ಚುವ ವಿಷಯ ಬಿಟ್ಟು ಜನರ ಆಹಾರ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗಕ್ಕೆ ಒತ್ತು ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
    ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್, ಅನೀಸ್ ಪಾಷಾ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಎನ್‌ಎಫ್‌ಐಡಬ್ಲೂೃ ಸಂಘಟನೆಯ ವಿಶಾಲಾಕ್ಷಿ ಮೃತ್ಯುಂಜಯ, ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸದಸ್ಯೆ ನಗೀನಾಬಾನು, ಸಿಐಟಿಯು ಶ್ರೀನಿವಾಸ್ ಇದ್ದರು. ನೆರಳು ಬೀಡಿ ಕಾರ್ಮಿಕರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ ಸ್ವಾಗತಿಸಿದರು. ನೆರಳು ಬೀಡಿ ಕಾರ್ಮಿಕರ ಸಂಘಟನೆ, ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts