More

    ಎಸ್​ಸಿ, ಎಸ್​ಟಿ ಕಾಲನಿಗಳಲ್ಲಿ ಕಾಮಗಾರಿ

    ಹಾವೇರಿ: ಲೋಕೋಪಯೋಗಿ, ನೀರಾವರಿ ಸೇರಿ ವಿವಿಧ ಇಲಾಖೆಗಳು ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಎಸ್​ಸಿ, ಎಸ್​ಟಿ ಕಾಲನಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಸಮಾಜ ಕಲ್ಯಾಣಾಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಎಸ್​ಸಿ, ಎಸ್​ಟಿ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ವಿವಿಧ ಇಲಾಖೆಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಕೋಟ್ಯಂತರ ರೂ. ಅನುದಾನ ಬಳಸಲಾಗುತ್ತಿದೆ. ನಿಯಮಾನುಸಾರ ಶೇ. 40ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ವಾಸಿಸುವ ಕಾಲನಿಗಳಲ್ಲಿ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳ ಕಾಮಗಾರಿ ಕೈಗೊಳ್ಳಬೇಕು. ಈ ನಿಯಮ ಕಡ್ಡಾಯವಾಗಿ ಅನುಷ್ಠಾನವಾಗಬೇಕು. ವಿವಿಧ ಇಲಾಖೆಗಳ ಕಾಮಗಾರಿ ಪುನರಾವರ್ತನೆಯಾಗಬಾರದು. ಯಾವ ಕಾಲನಿಯಲ್ಲಿ ಯಾವ ಇಲಾಖೆ ಕಾರ್ಯನಿರ್ವಹಿಸಿದೆ ಎಂಬ ಮಾಹಿತಿ ಸಲ್ಲಿಸಬೇಕು. ಈ ಕುರಿತು ಸಮಾಜ ಕಲ್ಯಾಣಾಧಿಕಾರಿಗಳು ಕಡ್ಡಾಯವಾಗಿ ಕಾಮಗಾರಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಪ್ರತಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಕನಿಷ್ಠ 10ಪಂಚಾಯಿತಿಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದರು.

    ಹಾವೇರಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ನನೆಗುದಿಗೆ ಬಿದ್ದಿರುವ ಸವಣೂರ ಅಂಬೇಡ್ಕರ್ ಭವನದ ಆವರಣದ ಗೋಡೆಯ ಸಮಸ್ಯೆಯನ್ನು ಬಗೆಹರಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಹಾವೇರಿಯಲ್ಲಿ ನಿರ್ವಣಗೊಳ್ಳುತ್ತಿರುವ ಜಿಲ್ಲಾ ಅಂಬೇಡ್ಕರ್ ಭವನವನ್ನು 10ದಿನದೊಳಗಾಗಿ ಪೂರ್ಣಗೊಳಿಸಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ಅಕ್ಕಿಆಲೂರಿನ ಸ್ಮಶಾನಭೂಮಿ ಖರೀದಿ, ಹಾನಗಲ್ಲ ಅಂಬೇಡ್ಕರ್ ಉದ್ಯಾನಕ್ಕೆ ಕಾಯ್ದಿರಿಸಿದ ಜಮೀನಿಗೆ ಉತಾರ ನೀಡುವುದು, ನೆಗಳೂರ ಸ್ಮಶಾನಭೂಮಿಗೆ 15ದಿನದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸುವುದು, ಈಚಲಯಲ್ಲಾಪುರದ ಗ್ರಾಮದ ಸ್ಮಶಾನಭೂಮಿಯಲ್ಲಿ ಗಿಡ ನೆಡುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿರುವ ಅನುದಾನದಡಿ ಪೌರಕಾರ್ವಿುಕರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಸವಣೂರು ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಕ್ಕೆ ನಿವೇಶನ ಮಂಜೂರಾತಿ ಹಾಗೂ ಬ್ಯಾಡಗಿಯ ಎಸ್​ಸಿ,ಎಸ್​ಟಿ ಕೂಲಿಕಾರ್ವಿುಕರಿಗೆ ಬ್ಯಾಂಕ್​ನಿಂದ ನೆರವು ಒದಗಿಸಲು ಸ್ವ ಸಹಾಯ ಸಂಘ ರಚನೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ದೌರ್ಜನ್ಯಕ್ಕೊಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಏಳು ದಿನದೊಳಗಾಗಿ ಪರಿಹಾರ ಪಾವತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಫ್​ಐಆರ್ ದಾಖಲಿಸಿ ತ್ವರಿತವಾಗಿ ಪೊಲೀಸ್ ಇಲಾಖೆಯಿಂದ ಸಂಬಂಧಿಸಿದವರಿಗೆ ಮಾಹಿತಿ ರವಾನಿಸಲು ಸಭೆಯಲ್ಲಿ ರ್ಚಚಿಸಲಾಯಿತು.

    ಎಸ್​ಪಿ ಕೆ.ಜಿ. ದೇವರಾಜ್ ಮಾತನಾಡಿ, ಪ್ರಕರಣಗಳ ತ್ವರಿತ ವಿಲೇವಾರಿಗೆ ಸೂಚಿಸುವುದಾಗಿ ತಿಳಿಸಿದರು.

    ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ. ರಾಜು ಕೂಲೇರ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಜಿಪಂ ಯೋಜನೆ ಮತ್ತು ಸಾಂಖಿಕ ಅಧಿಕಾರಿ ಕುಮಾರ ಮಣ್ಣವಡ್ಡರ, ನಿರ್ವಿುತಿ ಕೇಂದ್ರದ ಯೋಜನಾಧಿಕಾರಿ ತಿಮ್ಮೇಶಕುಮಾರ, ವಿವಿಧ ಇಲಾಖೆ ಅಧಿಕಾರಿಗಳು, ದೌರ್ಜನ್ಯ ಸಮಿತಿ ಅಧಿಕಾರೇತರ ಸದಸ್ಯರು ಉಪಸ್ಥಿತರಿದ್ದರು.

    ದೌರ್ಜನ್ಯ ಸಮಿತಿ ಸದಸ್ಯರ ಮನವಿ

    ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿನ ಎಸ್​ಸಿ ಹಾಗೂ ಎಸ್​ಟಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಜಿಲ್ಲೆಯಲ್ಲಿ ಬೇಡ ಜಂಗಮ ಜನಾಂಗದವರು ಎಸ್​ಸಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಅವರಿಗೆ ಪ್ರಮಾಣಪತ್ರ ನೀಡಬಾರದು ಎಂದು ದೌರ್ಜನ್ಯ ಸಮಿತಿ ಸದಸ್ಯರು ಮನವಿ ಮಾಡಿದರು.

    ಪ್ರಗತಿ ತಂತ್ರಾಂಶದಲ್ಲಿ ಅಳವಡಿಸಿ

    ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಸಾಧಿಸಿದ ಕಳೆದ ಮೂರು ವರ್ಷದ ಸಾಧನೆಯನ್ನು ಸಮಾಜ ಕಲ್ಯಾಣ ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚಿಸಿದರು.

    ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಯೋಜನೆಗಳ ವಿವಿಧ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟರ ಕಲ್ಯಾಣ ಯೋಜನೆಗಳು ದುರುಪಯೋಗವಾಗದಂತೆ ತಡೆಯುವ ಉದ್ದೇಶದಿಂದ ಫಲಾನುಭವಿಗಳ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಲು ಸಮಾಜ ಕಲ್ಯಾಣ ಇಲಾಖೆ ಸಾಫ್ಟ್​ವೇರ್ ರಚಿಸಿದೆ. ಇಲಾಖಾವಾರು ಅನುಷ್ಠಾನಾಧಿಕಾರಿಗಳಿಗೆ ಈಗಾಗಲೇ ಪಾಸ್​ವರ್ಡ್ ವಿತರಿಸಲಾಗಿದೆ. ಒಂದು ತಿಂಗಳೊಳಗಾಗಿ ಇಲಾಖಾವಾರು ವಿವರವನ್ನು ಆಯಾ ಇಲಾಖೆ ಮುಖ್ಯಸ್ಥರು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ವಹಿಸಬೇಕು ಎಂದರು.

    ಎಸ್​ಸಿ, ಎಸ್​ಟಿ ವರ್ಗದ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿರುವ 34ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮೀನುಗಾರಿಕೆ, ಜವಳಿ, ಅರಣ್ಯ, ಇಂಧನ ಇಲಾಖೆ ಸೇರಿ ಹಲವು ಇಲಾಖೆಗಳ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗದ ಕಾರಣ ತ್ವರಿತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಕಡಿಮೆ ಸಾಧನೆ ಇರುವ ಇಲಾಖೆಗಳಿಗೆ ನೋಟಿಸ್ ಜಾರಿಗೊಳಿಸಲು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರು.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಕಿಚನ್​ಗಾರ್ಡನ್ ನಿರ್ಮಾಣ ಹಾಗೂ ಕರಿಬೇವು, ನುಗ್ಗೆ, ಹಣ್ಣಿನ ಗಿಡಗಳನ್ನು ನೆಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts