More

    ಎಸ್​ಎಸ್​ಎಲ್​ಸಿ ಪರೀಕ್ಷೆ; ಬಿಗಿ ಭದ್ರತೆ, ಎಲ್ಲ ಕೇಂದ್ರಗಳಲ್ಲೂ ಮುನ್ನೆಚ್ಚರಿಕೆ

    ಶಿರಸಿ: ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಗುರುವಾರ ಪ್ರಾರಂಭವಾದ ಎಸ್​ಎಸ್​ಎಲ್​ಸಿ ಪರೀಕ್ಷೆ ಶಿರಸಿ ಶೈಕ್ಷಣಿಕ ಜಿಲ್ಲಾದ್ಯಂತ ಸುಗಮವಾಗಿ ಜರುಗಿದೆ. ಮೊದಲ ದಿನದ ದ್ವಿತೀಯ ಭಾಷೆ ಪರೀಕ್ಷೆಗೆ 9676 ವಿದ್ಯಾರ್ಥಿಗಳು ಹಾಜರಾದರೆ, 566 ವಿದ್ಯಾರ್ಥಿಗಳು ಗೈರಾಗಿದ್ದರು.

    ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬೆಳಗ್ಗೆ ಏಳು ಗಂಟೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಪರೀಕ್ಷಾ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯ ಜತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವಹಿಸಿದ್ದರು. ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕೊಠಡಿ ಮೇಲ್ವಿಚಾರಣೆ ಮತ್ತು ಪ್ರಶ್ನೆ ಪತ್ರಿಕೆ ವಿತರಣೆ ಇತ್ಯಾದಿ ಕಾರ್ಯದಲ್ಲಿ ತೊಡಗಿತ್ತು. ಎಲ್ಲ ವಿದ್ಯಾರ್ಥಿಗಳು ಶಾರೀರಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂಬ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಿಂದಲೇ ಬಣ್ಣದ ಗುರುತು ಹಾಕಲಾಗಿತ್ತು. ಒಬ್ಬರ ಹಿಂದೆ ಒಬ್ಬರು ಎಷ್ಟು ಅಂತರದಲ್ಲಿ ನಿಲ್ಲಬೇಕು, ಎಲ್ಲಿ ಸ್ಯಾನಿಟೈಸೇಷನ್ ಮಾಡಿಕೊಳ್ಳಬೇಕು, ಆರೋಗ್ಯ ತಪಾಸಣೆ, ಬ್ಯಾಗ್ ಇಡುವ ಜಾಗ ಇತ್ಯಾದಿ ಎಲ್ಲವನ್ನು ಸಮರ್ಪಕವಾಗಿ ನಿರ್ವಹಿಸಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಮನೆಯಿಂದಲೇ ಮಾಸ್ಕ್ ಧರಿಸಿ ಬಂದಿದ್ದರು. ಮಾಸ್ಕ್ ಇಲ್ಲದೇ ಬಂದಿದ್ದ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಮಾಸ್ಕ್ ವಿತರಣೆ ಮಾಡಲಾಯಿತು.

    ಥರ್ಮಲ್ ಸ್ಕ್ರೀನಿಂಗ್ ಮಾಡಿ, ದೇಹದ ಉಷ್ಣಾಂಶ ನಿರ್ದಿಷ್ಟ ಉಷ್ಣಾಂಶಕ್ಕಿಂತ ಹೆಚ್ಚಿದ್ದ ಮಕ್ಕಳನ್ನು, ಜ್ವರ, ಶೀತ, ಕೆಮ್ಮು ಮೊದಲಾದ ದಿಢೀರ್ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗಿತ್ತು. ಇದರ ಜತೆ ಮನೆಯಿಂದ ತಿಂಡಿ ತಂದಿರುವ ಮಕ್ಕಳಿಗೆ ತಿಂಡಿ ತಿನ್ನಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ಕುಡಿಯಲು ಬಿಸಿ ನೀರು ನೀಡಲಾಯಿತು. ನಗರ ಪ್ರದೇಶದಲ್ಲಿ ಬಹುತೇಕ ಮತ್ತು ಗ್ರಾಮೀಣ ಭಾಗದಲ್ಲಿ ಕೆಲವು ಪಾಲಕರು ತಾವಾಗಿಯೇ ತಮ್ಮ ಮಕ್ಕಳನ್ನು ಪರೀಕ್ಷೆ ಕೇಂದ್ರಕ್ಕೆ ಬಿಟ್ಟು ಹೋಗಿದರು. ಬಹುತೇಕ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ಹಾಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಸಾರಿಗೆ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆ ಎದುರಿಸಿದರು.

    ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುವಾರ ಎಸ್​ಎಸ್​ಎಲ್​ಸಿ ದ್ವಿತೀಯ ಭಾಷೆ (ಕನ್ನಡ ಮತ್ತು ಇಂಗ್ಲಿಷ್) ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ನಡೆದಿದೆ.

    ಒಟ್ಟು 9262 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು. ಅದರಲ್ಲಿ 8739 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅದರಲ್ಲಿ 420 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದು, 103 ಜನ ಇಲ್ಲಿಯೇ ಪರೀಕ್ಷೆ ಬರೆಯಬೇಕಾಗಿದ್ದವರು ಗೈರಾಗಿದ್ದಾರೆ.

    ಹೊರ ಜಿಲ್ಲೆಗಳಿಂದ 72 ವಿದ್ಯಾರ್ಥಿಗಳು ಬರಬೇಕಿತ್ತು, ಅದರಲ್ಲಿ 70 ವಿದ್ಯಾರ್ಥಿಗಳು ಬಂದಿದ್ದಾರೆ. 43 ವಿದ್ಯಾರ್ಥಿಗಳು ಕಂಟೇನ್ಮೆಂಟ್ ವಲಯದಿಂದ ಬಂದು ಪರೀಕ್ಷೆ ಬರೆದಿದ್ದಾರೆ. 3 ವಿದ್ಯಾರ್ಥಿಗಳಿಗೆ ಅನಾರೋಗ್ಯ ಇದ್ದ ಹಿನ್ನೆಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು. 261 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಬೇಕಿತ್ತು. ಅದರಲ್ಲಿ 53 ಅಭ್ಯರ್ಥಿಗಳು ಗೈರಾಗಿದ್ದಾರೆ. 178 ವಿದ್ಯಾರ್ಥಿಗಳು ಖಾಸಗಿ ವಸತಿ ನಿಲಯದಲ್ಲಿದ್ದು ಪರೀಕ್ಷೆ ಬರೆದಿದ್ದಾರೆ.

    132 ಬಸ್: ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 132 ಬಸ್​ಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಎಲ್ಲ ಕೇಂದ್ರಗಳಲ್ಲಿ ಬೆಳಗ್ಗೆ 8.30 ರಿಂದಲೇ ವಿದ್ಯಾರ್ಥಿಗಳನ್ನು ಪರಸ್ಪರ ಅಂತರದಲ್ಲಿ ನಿಲ್ಲಿಸಿ, ಥರ್ಮಲ್ ಸ್ಟ್ರೀನಿಂಗ್ ನಡೆಸಿ, ಸ್ಯಾನಿಟೈಸರ್ ಹಾಕಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು. ಎಲ್ಲ ಕೇಂದ್ರಗಳ ಹೊರಗೆ ಪಾಲಕರು ಆತಂಕದಿಂದ ಕಾದು ನಿಂತಿರುವುದು ಕಂಡುಬಂತು.

    ಖಾಸಗಿ ವಾಹನ ವ್ಯವಸ್ಥೆ: ಹೊನ್ನಾವರದಲ್ಲಿ ಎನ್​ಡಬ್ಲ್ಯುಕೆಆರ್​ಟಿಸಿಯ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಎಲ್ಲ ಕೇಂದ್ರಗಳಲ್ಲಿ ಒಂದು ವಾಹನ ಇಡುವಂತೆ ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

    ಶಿಕ್ಷಕಿಯ ಮನೆಯಲ್ಲಿದ್ದು ಪರೀಕ್ಷೆ ಬರೆದ ವಿದ್ಯಾರ್ಥಿನಿ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತೆರಳಲು ಊರವರು ನಿರ್ಬಂಧ ಹೇರಿದ ಪರಿಣಾಮ ಶಿಕ್ಷಕಿ ವಿದ್ಯಾರ್ಥಿನಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಪರೀಕ್ಷೆ ಬರೆಸಿದ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ದೇವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೇಣುಕಾ ಗೌಡ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಶಿರಸಿಗೆ ಹೋಗಿ ಬರುವುದಾದಲ್ಲಿ ತಮ್ಮ ಊರಿಗೆ ಕರೊನಾ ಬರುವುದು ಎಂಬ ಕಾರಣಕ್ಕೆ ಊರಿನವರು ಆಕೆಗೆ ಪರೀಕ್ಷೆ ಬರೆಯಲು ನಿರ್ಬಂಧ ಹೇರಿದ್ದರು. ಶಾಲೆಯ ಶಿಕ್ಷಕಿ ರೂಪಾ ನಾಯ್ಕ ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿನಿಗೆ ವಸತಿ ವ್ಯವಸ್ಥೆ ಮಾಡಿ ನಿಲೇಕಣಿ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹೋಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅನುವು ಮಾಡಿ ಕೊಟ್ಟಿದ್ದಾರೆ.

    ಒಬ್ಬನಿಗೆ ಒಂದು ಬಸ್: ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಕ್ಕೆ ಒಂದು ಬಸ್​ನಲ್ಲಿ ಒಬ್ಬನೇ ವಿದ್ಯಾರ್ಥಿ ಆಗಮಿಸಿದ್ದ.ಮಳೆ ಬಿಡುವು ಕೊಟ್ಟಿದ್ದರಿಂದ ಮತ್ತಘಟ್ಟ ಮಾರ್ಗದ ಬಹುತೇಕ ಮಕ್ಕಳು ಖಾಸಗಿ ವಾಹನಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಪರಿಣಾಮವಾಗಿ ಮತ್ತಿಘಟ್ಟ ಗ್ರಾಮದಿಂದ ಕುಮಾರ ಶ್ರೀಧರ ಗೌಡ ಒಬ್ಬನೇ ವಿದ್ಯಾರ್ಥಿ ಬಸ್ಸಿಗೆ ಬರಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts